ವಧುವಿಗೆ 58, ವರನಿಗೆ 65: ಫಲಿಸಿತು 35 ವರ್ಷಗಳ ಪ್ರೇಮ- ಮೇಲುಕೋಟೆ ಗುರುಪೀಠದಲ್ಲಿ ಅಪರೂಪದ ಮದುವೆ | Rare Marriage in Melukote Bride of 58 Bridegroom of 65 Married


ವಧುವಿಗೆ 58, ವರನಿಗೆ 65: ಫಲಿಸಿತು 35 ವರ್ಷಗಳ ಪ್ರೇಮ- ಮೇಲುಕೋಟೆ ಗುರುಪೀಠದಲ್ಲಿ ಅಪರೂಪದ ಮದುವೆ

ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿ ಸತಿಪತಿಗಳಾದ ಜಯಮ್ಮ ಮತ್ತು ಚಿಕ್ಕಣ್ಣ

ಮಂಡ್ಯ: ಆಕೆ ಆತನಿಗೆ ಅತ್ತೆ ಮಗಳಾಗಬೇಕಿತ್ತು. ಅವರಿಬ್ಬರೂ ಪರಸ್ಪರ ಪ್ರೀತಿ ಮಾಡಲಾರಂಭಿಸಿದ್ದರು. ಕೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಆತನಿಗೆ ಆಕೆಯನ್ನು ಕೊಟ್ಟು ಮದುವೆ ಮಾಡಿಕೊಡಲು ಆಕೆಯ ಮನೆಯವರು ಒಪ್ಪಲಿಲ್ಲ. ಬೇರೊಬ್ಬನ ಜೊತೆ ಮದುವೆಯನ್ನೂ ಮಾಡಿದ್ದರು. ಇದೆಲ್ಲಾ ಆಗಿ 30 ವರ್ಷಗಳ ಬಳಿಕ ಆಕೆಯನ್ನೇ ಆತ ಮದುವೆಯಾಗಿದ್ದಾನೆ. ಬದುಕಿನ ಸುದೀರ್ಘ ಪಯಣದ ನಂತರ ಇವರ ಪ್ರೇಮ ಫಲಿಸಿದೆ. ಇಂಥದ್ದೊಂದು ವಿಶಿಷ್ಟ ಮದುವೆಗೆ ಸಾಕ್ಷಿಯಾಗಿದ್ದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ. ಇಲ್ಲಿನ ಯತಿರಾಜದಾಸರ ಗುರುಪೀಠದಲ್ಲಿ ಗುರುವಾರ ನಡೆದ ಮದುವೆಯಲ್ಲಿ ಮೈಸೂರು ಮೂಲದ ಚಿಕ್ಕಣ್ಣ ಮತ್ತು ಜಯಮ್ಮ ಸತಿಪತಿಗಳಾದರು. ಚಿಕ್ಕಣ್ಣಗೆ 65 ವರ್ಷ, ಜಯಮ್ಮಗೆ 58. ಇಳಿವಯಸ್ಸಿನ ಈ ಜೋಡಿಗಳು ನೆಮ್ಮದಿಯಾಗಿ ಬಾಳಲಿ ಎಂದು ಹಲವರು ಹರಸಿದರು.

ಮೂಲತಃ ಹಾಸನ ಜಿಲ್ಲೆ ಹೊಳೆನರಸೀಪುರ ಗ್ರಾಮದ ಚಿಕ್ಕಣ್ಣ ಸದ್ಯ ಮೈಸೂರಿನಲ್ಲಿ ಕೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ತನ್ನ ಅತ್ತೆ ಮಗಳಾದ ಜಯಮ್ಮಳನ್ನು ಪ್ರೀತಿಸುತ್ತಿದ್ದ ಅವರು, ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಚಿಕ್ಕಣ್ಣ ಕೂಲಿ ಮಾಡುತ್ತಾರೆ ಎಂಬ ಕಾರಣಕ್ಕೆ ಜಯಮ್ಮರ ಮನೆಯವರು ಮದುವೆಗೆ ನಿರಾಕರಿಸಿ, ಬೇರೊಬ್ಬರ ಜೊತೆಗೆ ಮದುವೆ ಮಾಡಿದ್ದರು.

ಜಯಮ್ಮರಿಗೆ ಮದುವೆಯಾಗಿ 3 ದಶಕಗಳೇ ಕಳೆದಿದ್ದು ಒಬ್ಬ ಮಗನಿದ್ದಾನೆ. ತನ್ನ ಗಂಡ ಹಾಗೂ ಮಗನ ಜೊತೆಯಲ್ಲಿ ಮೈಸೂರಿನಲ್ಲಿದ್ದರು ಜಯಮ್ಮ. ಈ ನಡುವೆ ಜಯಮ್ಮರ ಕುಟುಂಬದಲ್ಲಿ ಬಿರುಕು ಮೂಡಿತ್ತು. ಇತ್ತ ಚಿಕ್ಕಣ್ಣ ಆಕೆಯ ನೆನಪಿನಲ್ಲೇ ದಿನ ದೂಡುತ್ತಿದ್ದ. ಅತ್ತ ತನ್ನ ಗಂಡನ ಜೊತೆಗೆ ಸೌಹಾರ್ದಯುತ ಬದುಕು ಸಾಗಿಸಲಾಗದ ಜಯಮ್ಮ ತನ್ನ ಕೊನೆಯ ದಿನಗಳನ್ನು ಚಿಕ್ಕಣ್ಣರ ಜೊತೆಗೆ ಕಳೆಯಲು ನಿರ್ಧರಿಸಿದ್ದರು.

ಚಿಕ್ಕಣ್ಣರ ಮನೆ ದೇವರು ಮೇಲುಕೋಟೆಯ ಶ್ರೀಚೆಲುವನಾರಾಯಣಸ್ವಾಮಿ. ಹೀಗಾಗಿ ಅಲ್ಲೇ ಮದುವೆಯಾಗಲು ನಿರ್ಧರಿಸಿದ್ದರು. ಅದರಂತೆ ಗುರುವಾರ (ಡಿ.2) ಮೇಲುಕೋಟೆಗೆ ಬಂದ ಚಿಕ್ಕಣ್ಣ ಹಾಗೂ ಜಯಮ್ಮ ಇಬ್ಬರೂ ಇಲ್ಲಿನ ಯತಿರಾಜ ದಾಸರ ಗುರುಪೀಠದಲ್ಲಿ ಮದುವೆಯಾಗಿದ್ದಾರೆ. ಗುರುಪೀಠದ ಶ್ರೀ ಶ್ರೀನಿವಾಸನ್ ನರಸಿಂಹನ್ ಗುರೂಜಿ ಅವರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಆ ಮೂಲಕ ಚಿಕ್ಕಣ್ಣ ತನ್ನ ಮೂರು ದಶಕಗಳ ಪ್ರೀತಿಯನ್ನು ಕಡೆಗೂ ಪಡೆದುಕೊಂಡಿದ್ದಾರೆ.

Melukote-Marriage

ಮೇಲುಕೋಟೆಯಲ್ಲಿ ಮದುವೆಯಾದ ಜಯಮ್ಮ ಮತ್ತು ಚಿಕ್ಕಣ್ಣ

ಈ ಸಂದರ್ಭದಲ್ಲಿ ಮಾತನಾಡಿದ ಚಿಕ್ಕಣ್ಣ ಹಾಗೂ ಜಯಮ್ಮ ದಂಪತಿ ಈ ವಯಸ್ಸಿನಲ್ಲಿ ನಮಗೆ ಮದುವೆ ಅಗತ್ಯವಿರಲಿಲ್ಲವಾದರೂ ನಾವು ನಮ್ಮ ಆತ್ಮತೃಪ್ತಿಗಾಗಿ ಮದುವೆಯಾಗಲು ನಿರ್ಧರಿಸಿ ದಾಂಪತ್ಯಕ್ಕೆ ಕಾಲಿಟ್ಟಿದ್ದೇವೆ. ಮನೆ ದೇವರಿರೊ ಮೇಲುಕೋಟೆಯಲ್ಲಿ ಮದುವೆಯಾಗಿರುವುದು ನಮಗೆ ತೃಪ್ತಿ ತಂದಿದೆ ಎಂದಿದ್ದಾರೆ. ಇವರಿಗೆ ಮದುವೆ ಮಾಡಿಸಿದ ಶ್ರೀ ಶ್ರೀನಿವಾಸನ್ ನರಸಿಂಹನ್ ಗುರೂಜಿ ಅವರು ನಮ್ಮ ಗುರುಪೀಠದಲ್ಲಿ ವರ್ಷಕ್ಕೆ 200 ರಿಂದ 300 ಮದುವೆಯಾಗುತ್ತವೆ. ಆದರೆ ಇಂದು ನಡೆದ ಮದುವೆ ವಿಶೇಷವಾದುದು. ಇಬ್ಬರೂ ಆತ್ಮಸಂತೋಷಕ್ಕಾಗಿ ಮದುವೆಯಾಗಿರುವುದಾಗಿ ಹೇಳಿದ್ದಾರೆ. ಇಬ್ಬರ ಜೀವನ ಸುಖಮಯವಾಗಿರಲಿ ಎಂದು ಹಾರೈಸಿಸ್ದಾರೆ.

ವರದಿ: ರವಿ ಲಾಲಿಪಾಳ್ಯ

TV9 Kannada


Leave a Reply

Your email address will not be published. Required fields are marked *