ಹಾವೇರಿ: ತಾಲೂಕಿನ ಅಕ್ಕೂರು ಹಾಗೂ ಮರಡೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ವರದಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಸಂಪೂರ್ಣ ಹಾಳಾಗಿದ್ದು, ಅಪಾಯದ ಮಟ್ಟ ತಲುಪಿದೆ. ಜೊತೆಗೆ ತಡೆಗೊಡೆ ಇಲ್ಲದ ಕಾರಣ ಈ ಸೇತುವ ಮೂಲಕ ಸಂಚರಿಸುವ ಸಾರ್ವಜನಿಕರಿಗೆ ಭಯವಾಗುತ್ತಿದೆ.

ರೈತರ ಅನುಕೂಲಕ್ಕೆಂದು ನೀರು ನಿಲ್ಲಿಸುವ ನಿಟ್ಟಿನಲ್ಲಿ ಈ ಸೇತುವೆಯ ಕೆಳ ಭಾಗದಲ್ಲಿ ಗೇಟ್ ವಾಲ್ ಅಳವಡಿಸಲಾಗಿದ್ದು, ಅವು ಸಹ ತುಕ್ಕು ಹಿಡಿದು ಸಂಪೂರ್ಣ ಹಾಳಾಗಿವೆ. ಇದರಿಂದಾಗಿ ನೀರು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊಸ ಗೇಟ್‍ಗಳನ್ನು ಹಾಕಿ, ಸೇತುವೆಗೆ ತಡೆಗೋಡೆ ನಿರ್ಮಿಸಬೇಕು. ಅಕ್ಕೂರು ಹಾಗೂ ಮರಡೂರು ಗ್ರಾಮಗಳ ನಡುವಿನ ವರದಾ ನದಿಯ ಸೇತುವೆ ಶಿಥಿಲಗೊಂಡು ತಡೆಗೊಡೆ ಇಲ್ಲದೆ ಕಬ್ಬಿಣದ ರಾಡ್‍ಗಳು ಹೊರ ಚಾಚಿವೆ. ಹೀಗಾಗಿ ದುರಸ್ತಿ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸೇತುವೆ ಹಾಳಾಗಿರುವುದು ಜನರಲ್ಲಿ ಭಯ ಹುಟ್ಟು ಹಾಕಿದ್ದರೆ, ಸೇತುವೆಯ ಎರಡು ಬದಿಯಲ್ಲೂ ನಿರ್ಮಿಸಲಾದ ತಡೆಗೊಡೆಯೂ ಸಂಪೂರ್ಣ ಹಾಳಾಗಿ ತುಕ್ಕು ಹಿಡಿದ ಕಬ್ಬಿಣದ ರಾಡ್‍ಗಳು ಹೊರ ಚಾಚಿವೆ. ಇದರಿಂದ ಈ ರಸ್ತೆಯ ಮೂಲಕ ಹಾದು ಹೋಗುವ ಪ್ರಯಾಣಿಕರು ಹಾಗೂ ಎರಡು ಗ್ರಾಮಗಳ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಸುಮಾರು ಎರಡು ದಶಕಗಳ ಹಿಂದೆ ಗುತ್ತಲ ಹೋಬಳಿಯ ಅಕ್ಕೂರು ಹಾಗೂ ಮರಡೂರು ಗ್ರಾಮಗಳ ಮಧ್ಯೆ ಹಾದು ಹೋಗಿರುವ ವರದಾ ನದಿಗೆ ಸಾರ್ವಜನಿಕರ ಅನಕೂಲಕ್ಕೆಂದು ನದಿಗೆ ಅಡ್ಡಲಾಗಿ ಲೋಕೋಪಯೋಗಿ ಇಲಾಖೆ ಸೇತುವೆ ನಿರ್ಮಿಸಿದೆ. ನಿರ್ಮಿಸಿದ ದಿನಗಳಿಂದ ಇಲ್ಲಿಯವರೆಗೂ ಸೂಕ್ತ ನಿರ್ವಹಣೆ ಇಲ್ಲದೆ ಬ್ರಿಜ್ ಕಂ ಬ್ಯಾರೇಜ್ ಸಂಪೂರ್ಣ ಹಾಳಾಗಿದೆ. ಸಂಪೂರ್ಣ ಹಾಳಾಗಿರುವ ಸೇತುವೆಯನ್ನು ಮರು ದುರಸ್ಥಿಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

The post ವರದಾ ನದಿಯ ಬ್ರಿಜ್ ಕಂ ಬ್ಯಾರೇಜ್ ಶಿಥಿಲ- ಆತಂಕದಲ್ಲಿ ಜನ appeared first on Public TV.

Source: publictv.in

Source link