ಮದುವೆ ಮನೆಯಲ್ಲಿ ವಧು ವರನ ಕುಟುಂಬಸ್ಥರ ಕಿರಿಕ್, ಊಟ ಸರಿಯಾಗಿಲ್ಲ, ಹಣ ಕೊಟ್ಟಿಲ್ಲ ಎಂದು.. ಹೀಗೆ ಹಲವು ಕಾರಣಗಳಿಂದ ಮದುವೆ ಮುರಿದು ಬೀಳುವುದನ್ನ ನೋಡಿದ್ದೇವೆ. ಆದ್ರೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ವರನಿಗೆ 2ರ ಮಗ್ಗಿ ಹೇಳಲು ಬಂದಿಲ್ಲ ಎಂದು ಮದುವೆ ರದ್ದಾಗಿದೆ.

ವಧು ದಿಬ್ಬಣದೊಂದಿಗೆ ವಿವಾಹ ಮಂಟಪವನ್ನು ತಲುಪಿದ್ದಳು. ಆ ಸಂದರ್ಭದಲ್ಲೇ ವರನ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಅನುಮಾನ ಹೊಂದಿದ್ದ ವಧು, ಹೂಮಾಲೆ ಹಾಕುವುದಕ್ಕೂ ಮೊದಲು 2ನೇ ಮಗ್ಗಿ ಹೇಳಲು ಕೇಳಿದ್ದಾಳೆ. ಆದರೆ ವರನಿಗೆ ಮಗ್ಗಿ ಹೇಳಲು ಸಾಧ್ಯವಾಗಿಲ್ಲ. ಇದರಿಂದ ಸಿಟ್ಟು ಮಾಡಿಕೊಂಡ ವಧು ವಿವಾಹ ರದ್ದು ಮಾಡಿ ಹೊರಟು ಹೋಗಿದ್ದಾಳೆ. ವರ ಅವಿದ್ಯಾವಂತ ಎಂದು ಗೊತ್ತಾಗಿ ವಧುವಿನ ಕುಟುಂಬಸ್ಥರು ಕೂಡ ಶಾಕ್ ಆಗಿದ್ದಾರೆ.

ಪನ್ವಾರಿ ಸ್ಟೇಷನ್ ಹೌಸ್ ಆಫೀಸರ್ ವಿನೋದ್ ಕುಮಾರ್ ಈ ಬಗ್ಗೆ ಮಾತನಾಡಿ, ಇದು ಅರೇಂಜ್ಡ್​ ಮ್ಯಾರೇಜ್ ಆಗಿತ್ತು. ಮಹೋಬಾ ಜಿಲ್ಲೆಯ ಧವಾರ್ ಗ್ರಾಮದವರು ಅಂತ ತಿಳಿಸಿದ್ದಾರೆ. ಎರಡು ಕುಟುಂಬಗಳ ಸದಸ್ಯರು ಮತ್ತು ಹಲವಾರು ಗ್ರಾಮಸ್ಥರು ಮದುವೆಗಾಗಿ ಸೇರಿದ್ದರು. ಇನ್ನೇನು ಮದುವೆ ನಡೆಯಬೇಕು ಎನ್ನುವಾಗ ವಧು ಮಂಟಪದಿಂದ ಹೊರನಡೆದಿದ್ದಾಳೆ. ಗಣಿತದ ಬೇಸಿಕ್​ ಅಂಶಗಳನ್ನು ಕೂಡ ತಿಳಿದಿಲ್ಲದ ವ್ಯಕ್ತಿಯನ್ನು ನಾನು ಮದುವೆಯಾಗಲು ಸಾಧ್ಯವಿಲ್ಲ ಎಂದು ಆಕೆ ಹೇಳಿದ್ದಾಳೆ ಎನ್ನಲಾಗಿದೆ. ವಧುವನ್ನು ಮನವೊಲಿಸುವಲ್ಲಿ ಸ್ನೇಹಿತರು ಮತ್ತು ಸಂಬಂಧಿಕರು ವಿಫಲರಾಗಿದ್ದಾರೆ.

ವರ ಅಶಿಕ್ಷಿತ ಎಂಬ ವಿಷಯವನ್ನ ಆತನ ಕುಟುಂಬಸ್ಥರು ನಮ್ಮಿಂದ ಮುಚ್ಚಿಟ್ಟಿದ್ದರು ಎಂದು ವಧುವಿನ ಸೋದರಸಂಬಂಧಿ ಹೇಳಿದ್ದಾರೆ. ಗ್ರಾಮದ ಮುಖ್ಯಸ್ಥರು ಮಧ್ಯಪ್ರವೇಶಿಸಿ ಎರಡೂ ಕುಟುಂಬಗಳ ನಡುವೆ ರಾಜಿ ಮಾಡಿಸಿದ ಹಿನ್ನೆಲೆ ಪೊಲೀಸರು ಕೇಸ್ ದಾಖಲಿಸಿಲ್ಲ. ಎರಡೂ ಕಡೆಯವರು ಉಡುಗೊರೆ ಮತ್ತು ಆಭರಣ​ಗಳನ್ನ ಪರಸ್ಪರ ವಾಪಸ್​ ನೀಡುವಂತೆ  ಒಪ್ಪಂದಕ್ಕೆ ಬರಲಾಗಿದೆ ಎಂದು ವರದಿಯಾಗಿದೆ.

The post ವರನಿಗೆ 2ರ ಮಗ್ಗಿ ಹೇಳಲು ಬರದಿದ್ದಕ್ಕೆ ಮದುವೆ ಕ್ಯಾನ್ಸಲ್​ appeared first on News First Kannada.

Source: newsfirstlive.com

Source link