ಬೆಂಗಳೂರು: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣದಲ್ಲಿ ಹಂತಕರು ತಮ್ಮ ಗುರುತು ಸಿಗದಂತೆ ಸಿಸಿಟಿವಿಗಳನ್ನು ತಿರುಗಿಸಿದ ಪ್ಲ್ಯಾನ್ ವರ್ಕೌಟ್​ ಆಗಿಲ್ಲ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಗಳ ಗುರುತು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳು ಕೊಲೆ ಮಾಡುವ ಮುನ್ನ ಸಿಸಿಟಿವಿ ಕ್ಯಾಮರಾಗಳನ್ನ ತಿರುಗಿಸಲು ಬೇರೆಯದ್ದೆ ವ್ಯಕ್ತಿಯನ್ನು ನಿಯೋಜನೆ ಮಾಡಿದ್ದರು. ಆ ಮೂಲಕ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ರೇಜರ್ ಹಾಗೂ ಡ್ಯಾಗರ್ ಬಳಸಿ ರೇಖಾ ಕದಿರೇಶ್ ಕೊಲೆ ಮಾಡಿ ಪರಾರಿಯಾಗಿದ್ದರು.

ಹತ್ಯೆಗೆ ಬಳಸಿದ ಒಂದು ಮಾರಾಕಾಸ್ತ್ರವನ್ನು ಪೊಲೀಸರು ಈಗಾಗಲೇ ರಿಕವರಿ ಮಾಡಿದ್ದಾರೆ. ರೇಖಾ ಸಂಬಂಧಿ ಸುಂದರ್ ಎಂಬವರ ದೂರಿನ ಅನ್ವಯ ಘಟನೆ ಕುರಿತು ಕಾಟನ್ಪೇಟೆ ಠಾಣೆಯಲ್ಲಿ ಎಫ್​​​​ಐಆರ್ ದಾಖಲು ಮಾಡಲಾಗಿದೆ. ಇನ್ನು ಕೃತ್ಯ ನಡೆಯುವ ಸಂದರ್ಭದಲ್ಲಿ ಸುಂದರ್ ಸ್ಥಳದಲ್ಲೇ ಇದ್ದರು ಎನ್ನಲಾಗಿದೆ.

ರೇಖಾ ಕೊಲೆಯಲ್ಲಿ ಬಲವಾಗಿ ರಾಜಕೀಯ ಮಸಲತ್ತಿನ ಆರೋಪ ಕೇಳಿ ಬರುತ್ತಿದ್ದು, ಕದಿರೇಶ್ ಕೊಲೆ ನಂತರ ರೇಖಾ ಅಧಿಕಾರ ಅನುಭವಿಸುತ್ತಿರುವುದಕ್ಕೆ ಸಂಬಂಧಿಗಳಲ್ಲೇ ಅಸಮಾಧಾನವಿತ್ತು ಎನ್ನಲಾಗಿದೆ. ಪತಿಯ ಕೊಲೆ ಬಳಿಕ ಕದಿರೇಶ್ ಸಂಬಂಧಿಗಳನ್ನೆಲ್ಲ ರೇಖಾ ದೂರವೇ ಇಟ್ಟಿದ್ದರಂತೆ. ಇದೇ ಕಾರಣಕ್ಕೆ ಕದಿರೇಶ್ ಸಹೋದರಿ ಮಾಲಾ ಸೇರಿದಂತೆ ಕುಟುಂಬಸ್ಥರಲ್ಲಿ ಅಸಮಾಧಾನವಿತ್ತು ಎನ್ನಲಾಗಿದೆ. ಹೀಗಾಗಿ ಈ ಬಾರಿ ಚುನಾವಣೆಗೆ ರೇಖಾ ಬದಲು ಮಾಲಾ ಅಥವಾ ಆಕೆಯ ಮಕ್ಕಳನ್ನ ಚುನಾವಣೆಗೆ ನಿಲ್ಲಬೇಕು ಎಂಬು ಮಾತುಗಳು ಕುಟುಂಬ ವಲಯದಲ್ಲಿ ಬಂದಿದ್ದವು ಎಂಬ ಅಂಶಗಳು ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾಗಿದೆ ಅಂತ ತಿಳಿದುಬಂದಿದೆ.

ಪ್ರಕರಣದ ಸಂಬಂಧ ಇದುವರೆಗೂ ಪೊಲೀಸರು 50ಕ್ಕೂ ಹೆಚ್ಚು ಜನರನ್ನು ವಿಚಾರಣೆ ಮಾಡಿದ್ದು, ಇದರಲ್ಲಿ ಪ್ರತ್ಯಕ್ಷದರ್ಶಿಗಳು, ರೇಖಾ ಕಚೇರಿ ಬಳಿ ಆಹಾರ ಪೊಟ್ಟಣ ಪಡೆಯಲು ಬಂದಿದ್ದವರು ಸೇರಿ ವಾರ್ಡ್​​​ನಲ್ಲಿರುವ ಅನೇಕ ಜನರ ವಿಚಾರಣೆ ನಡೆಸಲಾಗಿದೆ.

The post ವರ್ಕೌಟ್ ಆಗಲಿಲ್ಲ ಹಂತಕರ ಪ್ಲ್ಯಾನ್: ಸಿಸಿಟಿವಿ ತಿರುಗಿಸಿದ್ರೂ, ರೇಖಾ ಕೊಲೆ ಆರೋಪಿಗಳ ಗುರುತು ಪತ್ತೆ appeared first on News First Kannada.

Source: newsfirstlive.com

Source link