ಬೆಂಗಳೂರು: ಕೊರೋನಾ ಹಿನ್ನಲೆ ಐಟಿ-ಬಿಟಿ ಕಂಪನಿಗಳಲ್ಲಿ ಶೇ.50 ರಷ್ಟು ಸಿಬ್ಬಂದಿ ಮಾತ್ರ ಕೆಲಸ ನಿರ್ವಹಿಸಲು ಅವಕಾಶ ಎಂದಿದ್ದ ಬಿಬಿಎಂಪಿ ತನ್ನ ಆದೇಶ ಹಿಂಪಡೆದಿದೆ. ಅಲ್ಲದೇ ಇನ್ಮುಂದೆ ಶೇ.100 ರಷ್ಟು ಸಿಬ್ಬಂದಿ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಬಹುದು ಎಂದಿದೆ.
ಕೊರೊನಾ ಕೇಸ್ಗಳ ಇಳಿಮುಖ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದ್ದು ಬೆಂಗಳೂರು ವ್ಯಾಪ್ತಿಯಲ್ಲಿನ ಐಟಿ-ಬಿಟಿ, ಎಂಎನ್ಸಿಗಳಿಗೆ ಬಿಬಿಎಂಪಿ ಪೂರ್ಣ ಸ್ವಾತಂತ್ರ್ಯ ನೀಡಿದೆ. ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ವರ್ಕ್ಫ್ರಮ್ ಹೋಂ ಮುಂದುವರೆಸಿ ಎಂದು ಪಾಲಿಕೆ ಆದೇಶಿಸಿತ್ತು. ಇಂದಿಗೂ ಬಹಳಷ್ಟು ಕಂಪನಿಗಳು ವರ್ಕ್ಫ್ರಮ್ ಹೋಂ ಮುಂದುವರೆಸಿವೆ. ಇನ್ನು ಯಾರಿಗೂ ವರ್ಕ್ ಫ್ರಂ ಹೋಮ್ ಕಡ್ಡಾಯವಲ್ಲ ಎಂದ ಪಾಲಿಕೆ, ಅದರ ಸಂಪೂರ್ಣ ಜವಾಬ್ದಾರಿ ಆಯಾ ಕಂಪನಿಗಳಿಗೆ ಬಿಟ್ಟಿದ್ದು ಎಂದಿದೆ.
ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ಈ ಅನುಮತಿ ನೀಡಿದ್ದು ಕೋವಿಡ್ ಮಾರ್ಗಸೂಚಿಗಳನ್ನ ಕೈಗೊಂಡು ಕಾರ್ಯ ನಿರ್ವಹಿಸಲು ಸೂಚಿಸಿದೆ. ಸದ್ಯ ಶಾಲಾ ಕಾಲೇಜುಗಳನ್ನ ಪೂರ್ಣ ಪ್ರಮಾಣದಲ್ಲಿ ಓಪನ್ ಮಾಡಲು ಸರ್ಕಾರ ಆದೇಶಿಸಿದ ಬೆನ್ನಲ್ಲೇ ಈ ನಿರ್ಧಾರಕ್ಕೆ ಬರಲಾಗಿದೆ.