ವರ್ಗಾವಣೆಗೆ ಲಂಚ ಕೊಡ್ತೀರಾ: ಶಿಕ್ಷಕರಿಗೆ ಪ್ರಶ್ನೆ ಕೇಳಿ ಪೇಚಿಗೆ ಸಿಲುಕಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ | Rajasthan Chief Minister Ashok Gehlot Asked Teachers A Question Got Unexpected Reply


ವರ್ಗಾವಣೆಗೆ ಲಂಚ ಕೊಡ್ತೀರಾ: ಶಿಕ್ಷಕರಿಗೆ ಪ್ರಶ್ನೆ ಕೇಳಿ ಪೇಚಿಗೆ ಸಿಲುಕಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಶಿಕ್ಷಕರಿಗೆ ಪ್ರಶ್ನೆ ಕೇಳಿ ಮುಜುಗರದ ಸ್ಥಿತಿ ಅನುಭವಿಸಬೇಕಾಯಿತು. ಮುಖ್ಯಮಂತ್ರಿಯ ಪ್ರಶ್ನೆಗೆ ಮುಲಾಜಿಲ್ಲದೆ ಉತ್ತರಿಸಿದ ಶಿಕ್ಷಕರು ತಮ್ಮ ಪರಿಸ್ಥಿತಿ ವಿವರಿಸಿ, ಕಷ್ಟಗಳನ್ನು ತೋಡಿಕೊಂಡರು. ರಾಜ್ಯ ಸರ್ಕಾರದಲ್ಲಿ ರಾರಾಜಿಸುತ್ತಿರುವ ಭ್ರಷ್ಟಾಚಾರಕ್ಕೂ ಈ ಪ್ರಸಂಗ ಕನ್ನಡಿ ಹಿಡಿಯಿತು. ವೇದಿಕೆಯ ಮೇಲಿದ್ದ ಶಿಕ್ಷಣ ಸಚಿವ ಗೋವಿಂದ್ ದೋತಾಸ್ರ ಸಹ ತಕ್ಷಣಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಅರ್ಥವಾಗದೆ ಗಲಿಬಿಲಿಗೊಂಡಂತೆ ಕಂಡುಬಂದರು.

ಮುಖ್ಯಮಂತ್ರಿ ಕೇಳಿದ ಪ್ರಶ್ನೆ ಮತ್ತು ಶಿಕ್ಷಕರು ಅದಕ್ಕೆ ನೀಡಿದ ಉತ್ತರದ ವಿಡಿಯೊ ತುಣುಕು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ‘ವರ್ಗಾವಣೆಗಾಗಿ ನೀವು ಲಂಚ ಕೊಡಬೇಕೆ’ ಎಂದು ಮುಖ್ಯಮಂತ್ರಿ ಕೇಳಿದಾಗ, ಅಲ್ಲಿದ್ದ ಶಿಕ್ಷಕರು ಒಕ್ಕೊರಲಿನಿಂದ ಹೌದು, ಲಂಚ ಕೊಡಬೇಕಿದೆ. ಶಾಸಕರಿಂದ ಶಿಫಾರಸನ್ನೂ ಮಾಡಿಸಬೇಕಿದೆ ಎಂದು ಉತ್ತರಿಸಿದ್ದಾರೆ. ಶಿಕ್ಷಕರ ಉತ್ತರ ಕೇಳಿಸಿಕೊಂಡ ಗೆಲ್ಹೋಟ್​ ತಕ್ಷಣಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದೇ ಕಂಗಾಲಾದಂತೆ ಕಂಡುಬಂದರು. ವರ್ಗಾವಣೆಗೆ ಹಣ ನೀಡಬೇಕಾಗಿರುವುದು ದುರಾದೃಷ್ಟಕರ. ಈ ಕುರಿತು ಸಮರ್ಪಕ ನೀತಿ ರೂಪಿಸಬೇಕಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಗೆಹ್ಲೋಟ್ ನಂತರ ಮಾತನಾಡಿದ ಶಿಕ್ಷಣ ಸಚಿವ ದೊತಾಸ್ರ, ‘ವರ್ಗಾವಣೆಗಾಗಿ ಪರಿಣಾಮಕಾರಿ ನೀತಿ ರೂಪಿಸುತ್ತೇವೆ. ಮುಂದಿನ ದಿನಗಳಲ್ಲಿ ಶಿಕ್ಷಕರು ಲಂಚ ಅಥವಾ ಶಿಫಾರಸಿನ ತೊಂದರೆ ಅನುಭವಿಸಬೇಕಿಲ್ಲ’ ಎಂದು ಭರವಸೆ ನೀಡಿದರು. 2023ರಲ್ಲಿ ರಾಜಸ್ಥಾನವು ವಿಧಾನಸಭಾ ಚುನಾವಣೆ ಎದುರಿಸಲಿದೆ. ಈಗಾಗಲೇ ಸಿದ್ಧತೆ ಆರಂಭಿಸಿರುವ ಬಿಜೆಪಿಗೆ ಈ ಪ್ರಸಂಗ ದೊಡ್ಡ ಅಸ್ತ್ರವನ್ನೇ ಒದಗಿಸಿದೆ. 2021ರ ರಾಜಸ್ಥಾನ ಶಿಕ್ಷಕರ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಬಿಜೆಪಿ ಈ ಹಿಂದೆ ಆರೋಪಿಸಿತ್ತು. ಈ ಆರೋಪದೊಂದಿಗೆ ವರ್ಗಾವಣೆಗೆ ಲಂಚ ನೀಡಬೇಕಾದ ವಿಚಾರವೂ ಬಿಜೆಪಿಗೆ ಅಸ್ತ್ರ ಒದಗಿಸಿದೆ.

ಶಿಕ್ಷಕರ ನೇಮಕಾತಿ ಹಗರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತನೇ ಮುಖ್ಯ ಆರೋಪಿ. ಹೀಗಾಗಿ ಈ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿತ್ತು. ಈ ಆರೋಪಗಳನ್ನು ಕಾಂಗ್ರೆಸ್ ತಳ್ಳಿಹಾಕಿತ್ತು. ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ನೀಡಿದ್ದರು. ತಮ್ಮ ಬೆಂಬಲಿಗರಿಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಸಚಿನ್ ಪೈಲಟ್​ರ ಮುನಿಸು ಇನ್ನೂ ಆರಿಲ್ಲ. ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಪುನರ್ ರಚಿಸಬೇಕಾದ ಅನಿವಾರ್ಯತೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಿಲುಕಿದ್ದಾರೆ.

ಕಾಂಗ್ರೆಸ್ ಪಕ್ಷವು ಒಬ್ಬ ನಾಯಕನಿಗೆ ಒಂದು ಸ್ಥಾನ ನೀತಿ ಜಾರಿ ಮಾಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಶಿಕ್ಷಣ ಸಚಿವರಾಗಿರುವ ರಾಜಸ್ಥಾನ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಗೋವಿಂದ್ ದೊತಾಸ್ರ ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ: ಶಾಲೆಯಲ್ಲಿ ಹೆಚ್ಚಿನ ಮಹಿಳಾ ಸಿಬ್ಬಂದಿ ಇದ್ದರೆ ಜಗಳ ಜಾಸ್ತಿ, ಪ್ರಾಂಶುಪಾಲರಿಗೆ ತಲೆನೋವು: ರಾಜಸ್ಥಾನದ ಶಿಕ್ಷಣ ಸಚಿವ
ಇದನ್ನೂ ಓದಿ: ಪುನೀತ್​ ರಾಜ್​ಕುಮಾರ್​ಗೆ ಕರ್ನಾಟಕ ರತ್ನ ಘೋಷಣೆ: ಈ ಮೊದಲು ಕರ್ನಾಟಕ ರತ್ನ ಪ್ರಶಸ್ತಿ ಪಡೆದವರು ಇವರು

TV9 Kannada


Leave a Reply

Your email address will not be published. Required fields are marked *