ಬೆಂಗಳೂರು: ಕಳೆದ ಶನಿವಾರಕ್ಕೆ ಸರಿಯಾಗಿ ಒಂದು ವರ್ಷದ ಹಿಂದೆ ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ಮಗುವೊಂದು ಕಳ್ಳತನವಾಗಿತ್ತು. ಪ್ರಕರಣದ ಬೆನ್ನು ಬಿದ್ದ ಬಸವನಗುಡಿ ಪೊಲೀಸರು ಕೊನೆಗೂ ಪ್ರಕರಣ ಬೇಧಿಸಿದ್ದಾರೆ. ಅಚ್ಚರಿ ಎಂದರೆ ಆ ಮಹಿಳೆ ಓರ್ವ ಮನೋವೈದ್ಯೆ. ಆಕೆಯ ಹೆಸರು ರಶ್ಮಿ.

ಕಥೆ ಇಷ್ಟಕ್ಕೇ ಮುಗಿಯಲಿಲ್ಲ.. ಯಾಕಂದ್ರೆ ರಶ್ಮಿ ಮಗು ಕಳ್ಳತನ ಮಾಡಿದ ಉದ್ದೇಶ, ಅದಕ್ಕಾಗಿ ಆಕೆ ಪಡೆದ ಹಣ.. ಹಾಗೂ ಆಕೆಯನ್ನ ಪೊಲೀಸರು ಪತ್ತೆಹಚ್ಚಿದ್ದೆಲ್ಲವೂ ರೋಚಕ.

ವೈದ್ಯೆ ರಶ್ಮಿ ಆಸ್ಪತ್ರೆಗೆ ಆಟೋವೊಂದರಲ್ಲಿ ಬಂದು ಮಗುವನ್ನ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಳು.. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯ ರೇಖಾಚಿತ್ರವನ್ನ ಬಳಸಿ ಪೊಲೀಸರು ಸತತ ಒಂದು ವರ್ಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿ ಮಗುವನ್ನ ಕೊಪ್ಪಳ ಮೂಲದ ದಂಪತಿಗೆ ನೀಡಿದ್ದಳು. ಸದ್ಯ ಮಗುವನ್ನ ರಕ್ಷಿಸಲಾಗಿದೆ.

15 ಲಕ್ಷ ಪಡೆದು ದಂಪತಿಗೂ ವಂಚಿಸಿದ ಲೇಡಿ ಡಾಕ್ಟರ್
2014 ರ ಸಮಯದಲ್ಲಿ ಹುಬ್ಬಳ್ಳಿಯ ಎಸ್​ಡಿಎಂ ಆಸ್ಪತ್ರೆಯಲ್ಲಿ ರಶ್ಮಿ ವೈದ್ಯೆಯಾಗಿ ಕೆಲಸ ಮಾಡ್ಡಿದ್ದಳು. ಈ ವೇಳೆ ಕೊಪ್ಪಳ ಮೂಲದ ದಂಪತಿಯ ಪರಿಚಯವಾಗಿತ್ತು. ಈ ದಂಪತಿ ಬಳಿ ಓರ್ವ ವಿಶೇಷ ಚೇತನ ಮಗುವಿತ್ತು. ಹೀಗಾಗಿ ಆ ಮಗುವನ್ನ ರಶ್ಮಿ ಬಳಿ ಚಿಕಿತ್ಸೆಗಾಗಿ ಕರೆತರುತ್ತಿದ್ದರಂತೆ. ಈ ವೇಳೆ ದಂಪತಿಯನ್ನ ಪರಿಚಯ ಮಾಡಿಕೊಂಡಿದ್ದ ರಶ್ಮಿ ನಿಮಗೆ ನಿಮ್ಮ ಮಗುವೇ ಜನಿಸುತ್ತೆ ಎಂದು ದಂಪತಿಯಿಂದ ಅಂಡಾಣು ಮತ್ತು ವೀರ್ಯಾಣು ಪಡೆದು ಶೇಖರಿಸಿಟ್ಟಿದ್ದಳು.

ಈ ಅಂಡಾಣು ಮತ್ತು ವೀರ್ಯಾಣು ಬೇರೊಬ್ಬ ಮಹಿಳೆಯ ಗರ್ಭ ಸೇರಲಿದೆ. ಆ ಮೂಲಕ ನಿಮ್ಮ ಮಗು ಬೇರೊಂದು ಮಹಿಳೆಯ ಗರ್ಭದಲ್ಲಿ ಬೆಳೆಯಲಿದೆ ಎಂದು ಹೇಳಿ 2019 ರಲ್ಲಿ ವೈದ್ಯ ದಂಪತಿಯಿಂದ ಮುಂಗಡ ಹಣ ಪಡೆದಿದ್ದಳು. ಆದ್ರೆ ತಾನು ಶೇಖರಿಸಿದ ಅಂಡಾಣು ವೀರ್ಯಾಣುವನ್ನ ರಶ್ಮಿ ಎಲ್ಲಿಯೂ ಬಳಸಲೇ ಇಲ್ಲ. ಕೊನೆಗೆ 2020 ರ ಮೇ 29 ರಂದು ಚಾಮರಾಜಪೇಟೆ ಹೆರಿಗೆ ಆಸ್ಪತ್ರೆಯಿಂದ ಮಗುವನ್ನ ಕದ್ದು ದಂಪತಿಯಿಂದ ಹಣ ಪಡೆದು ಮಗು ನೀಡಿದ್ದಳು. ಆ ದಂಪತಿ ಕಳೆದೊಂದು ವರ್ಷದಿಂದ ತಮ್ಮದೇ ಮಗುವೆಂದುಕೊಂಡು ಬೇರೊಬ್ಬ ತಾಯಿಯ ಮಗುವನ್ನ ಸಾಕುತ್ತಿದ್ದರು ಎನ್ನಲಾಗಿದೆ.

The post ವರ್ಷದ ಹಿಂದೆ ನಡೆದಿದ್ದ ಮಗು ಕಳ್ಳತನ ಕೇಸ್​ ಭೇದಿಸಿದ ಪೊಲೀಸರು; ಮನೋ ವೈದ್ಯೆ ಅರೆಸ್ಟ್ appeared first on News First Kannada.

Source: newsfirstlive.com

Source link