ಕೊಪ್ಪಳ: ವಲಸಿಗ, ಮೂಲ ಎಂಬುವುದು ಕಾಂಗ್ರೆಸ್ ನಲ್ಲಿದೆ ಹೊರತು ಬಿಜೆಪಿಯಲ್ಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ.

ನಳಿನ್‍ಕುಮಾರ್ ಕಟೀಲ್ ಇಂದು ಕೊಪ್ಪಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಮುಖಂಡರೊಂದಿಗೆ ಚರ್ಚೆ ಮಾಡಿದರು. ಇದೇ ವೇಳೆ ಜಿಲ್ಲಾ ಬಿಜೆಪಿಯ ನೂತನ ಕಟ್ಟಡ ಕಾಮಗಾರಿ ವೀಕ್ಷಿಸಿದರು. ಈ ವೇಳೆ ಮಾತನಾಡಿದ ಅವರು, ವಲಸಿಗ, ಮೂಲ ಎಂಬುವುದು ಕಾಂಗ್ರೆಸ್ ನಲ್ಲಿದೆ ಹೊರತು ಬಿಜೆಪಿಯಲ್ಲಿಲ್ಲ. ಇಲ್ಲಿ ಈಗ ಯಾವುದೇ ಬಣಗಳು, ಗೊಂದಲಗಳಿಲ್ಲ, ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬುವುದು ಈಗ ಕಾಂಗ್ರೆಸ್ ನಲ್ಲಿ ಮೂಲ, ವಲಸಿಗ ಪ್ರಶ್ನೆ ಆರಂಭವಾಗಿದೆ. ಸಿಎಂ ಖುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಮ್ಯೂಸಿಕಲ್ ಚೇರ್ ಸ್ಪರ್ಧೆ ಆರಂಭವಾಗಿದೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನ ಟಾವೆಲ್ ಹಾಕುತ್ತಿದ್ದಾರೆ ಎಂದು ಹೇಳಿದ ಅವರು, ಬಿಜೆಪಿಯಲ್ಲಿ ಗೊಂದಲವಿಲ್ಲ. ಬಿಜೆಪಿಯಲ್ಲಿ ಸಣ್ಣಪುಟ್ಟ ಗೊಂದಲಗಳಿದ್ದವು ಅದನ್ನು ಅರುಣ್ ಸಿಂಗ್ ಬಗೆಹರಿಸಿದ್ದಾರೆ. ಅರುಣ್ ಸಿಂಗ್ ಮುಂದೆ ಕೆಲವರು ಸಣ್ಣಪುಟ್ಟ ನೋವುಗಳನ್ನು ಅವರ ಮುಂದೆ ಹೇಳಿದ್ದಾರೆ. ಅರುಣ್‍ಸಿಂಗ್ ಈ ಗೊಂದಲಗಳನ್ನು ಬಗೆಹರಿಸಿದ್ದಾರೆ ಎಂದರು.

ನಮ್ಮಲ್ಲಿ ಈಗ ಯಾವುದೇ ಬಣಗಳಿಲ್ಲ, ಎಲ್ಲರೂ ಒಂದೇ ಬಣದಲ್ಲಿದ್ದೇವೆ. ಮದುವೆಗೂ ಮೊದಲೇ ಮಗುವಿಗೆ ಕುಲಾಯಿ ಹೊಲಿಸುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗುವಂತೆ ಯತ್ನ ನಡೆಸಿದ್ದಾರೆ. ಇದು ಕಾಂಗ್ರೆಸ್ ನಲ್ಲಿ ಗೊಂದಲ ಹಾಗೂ ಮೂಲ, ವಲಸಿಗರು ಎಂಬ ಗುಂಪುಗಳಾಗಿವೆ. ಗೊಂದಲಗಳಿರುವುದು ಕಾಂಗ್ರೆಸ್ ನಲ್ಲಿ ಮಾತ್ರ ಎಂದು ಹೇಳಿದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನುವ ವದಂತಿಗೆ ಪ್ರತಿಕ್ರಿಯಿಸಿದ ಅವರು, ನಮ್ಮೊಂದಿಗೆ ಜಾರಕಿಹೊಳಿ ಮಾತನಾಡಿಲ್ಲ, ಆದರೆ ನಾನೇ ವೈಯಕ್ತಿಕವಾಗಿ ಮಾತನಾಡಿದ್ದೇನೆ. ಏನೇ ಸಮಸ್ಯೆಗಳಿದ್ದರೂ ಬಗೆಹರಿಸುತ್ತೇವೆ ಎಂದು ಕಟೀಲ್ ಹೇಳಿದರು. ಇದೇ ವೇಳೆ ಕೊಪ್ಪಳದಲ್ಲಿ ಬಿಜೆಪಿಯ ಜಿಲ್ಲಾ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದ ಅವರು ದೀಪಾವಳಿ ವೇಳೆಗೆ ಜಿಲ್ಲಾ ಬಿಜೆಪಿ ಕಟ್ಟಡ ಪೂರ್ಣಗೊಂಡು ಉದ್ಘಾಟನೆಯಾಗಲಿದೆ. ರಾಜ್ಯದಲ್ಲಿ ಈ ಮೊದಲು 9 ಜಿಲ್ಲೆಗಳಲ್ಲಿ ಬಿಜೆಪಿಯ ಭವನಗಳಿದ್ದವು, ಈಗ 11 ಜಿಲ್ಲೆಗಳಲ್ಲಿ ಕಟ್ಟಡ ಕಾಮಗಾರಿ ನಡೆದಿವೆ. ಎಲ್ಲಾ ಕಡೆಯೂ ಕಟ್ಟಡದ ಕಾಮಗಾರಿ ಭರದಿಂದ ಸಾಗಿದ್ದು, ಬೇಗನೆ ಪೂರ್ಣಗೊಳ್ಳಲಿವೆ ಎಂದರು. ಇದನ್ನೂ ಓದಿ: ಇಲ್ಲದ ಅಪ್ಪನಿಗೆ ನಿತ್ಯವೂ ಕರೆ ಮಾಡ್ತಾಳೆ ಮಗಳು!

ಜಿಲ್ಲಾ ಬಿಜೆಪಿ ಮುಖಂಡರೊಂದಿಗೆ ನೂತನ ಕಟ್ಟಡದ ಮುಂದೆ ಸಸಿಗಳನ್ನು ನೆಟ್ಟರು, ಈ ಮೊದಲು ಒಂದು ತಾಸು ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿ, ಪಕ್ಷದ ಸಂಘಟನೆ ಬರುವ ದಿನಗಳಲ್ಲಿ ನಡೆಯುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯ ಸಿದ್ದತೆ ಕುರಿತು ಚರ್ಚಿಸಿದರು. ಇದನ್ನೂ ಓದಿ: ತುಂಗಾ ಜಲಾಶಯ ಭರ್ತಿ- ಬಾಗಿನ ಅರ್ಪಿಸಿದ ಈಶ್ವರಪ್ಪ

The post ವಲಸಿಗ, ಮೂಲ ಎಂಬುವುದು ಕಾಂಗ್ರೆಸ್ ನಲ್ಲಿದೆ ಹೊರತು ಬಿಜೆಪಿಯಲ್ಲಿಲ್ಲ: ಕಟೀಲ್ appeared first on Public TV.

Source: publictv.in

Source link