ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಅಧಿಕಾರಿಗಳ ದರ್ಬಾರ್​ ನಡೆಯುತ್ತಿದ್ದು, ಏಳು ವರ್ಷಗಳಿಂದ ಮನೆ ನಿರ್ಮಾಣ ಮಾಡದೆ ಸತಾಯಿಸುತ್ತಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಮೂರು ಮುಖ್ಯಮಂತ್ರಿಗಳು, ಮೂವರು ಸಚಿವರು ಬದಲಾದರೂ ಅಧಿಕಾರಿಗಳು ಬಗುತ್ತಿಲ್ಲ ಅಂತ ಇಂದು ವಸತಿ ಇಲಾಖೆಯ ಸಭೆಯಲ್ಲಿ ಅಧಿಕಾರಿಗಳ ಮೇಲೆ ದೂರುಗಳ ಸುರಿಮಳೆಗೈಯ್ಯಲಾಯ್ತು. R.R.ನಗರದ ಶಾಸಕ ಮುನಿರತ್ನ ಸಭೆಯಲ್ಲಿ, ಅಧಿಕಾರಿಗಳ ಲೋಪಗಳನ್ನು ಪಟ್ಟಿ ಮಾಡಿ ಹೇಳಿ ಗರಂ ಆದರು.

ನನ್ನ ಕ್ಷೇತ್ರದಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ ಮನೆಗಳನ್ನು ಕಟ್ಟಲು ವಿಳಂಬವಾಗ್ತಿದೆ. ಕೆಲವು ಕಡೆ ಅಡಿಪಾಯ ಹಾಕಿ ಮನೆ ಕಟ್ಟಲು ಹಣ ಬಿಡುಗಡೆ ಆಗಿಲ್ಲ. ಅಲ್ಲೆಲ್ಲಾ ನಾನೇ ಸಹಾಯ ಮಾಡಿ, ಮನೆ ಕಟ್ಟಿಸಿ ಕೊಟ್ಟಿದ್ದೆ. ಅಂತಹ ಕಡೆ ಎಲ್ಲಾ ಬೋಗಸ್ ಬಿಲ್ ಮಾಡಿ ಹಣ ಹೊಡೆದಿದ್ದಾರೆ ಅಂತ ಮುನಿರತ್ನ ಅಧಿಕಾರಿಗಳ ಮೇಲೆ ದೂರಿನ ಸುರಿಮಳೆ ಸುರಿಸಿದ್ರು. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ತನಿಖೆ ಮಾಡಬೇಕೆಂದು ಅವರು ಒತ್ತಾಯಿಸಿದ್ರು.

ಈ ವೇಳೆ ಕೆಲಸ ಮಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಸತಿ ಸಚಿವ ವಿ. ಸೋಮಣ್ಣ, ನಾಳೆಯೇ ಸ್ಥಳಕ್ಕೆ ತೆರಳಿ ವಾಸ್ತವಾಂಶ ಪರಿಶೀಲನೆ ನಡೆಸಿ, ಅವ್ಯವಹಾರ ಆಗಿದ್ದರೆ ತನಿಖೆ ಮಾಡಲು ಸೂಚನೆ ಕೊಟ್ಟರು.

ಅಗಸ್ಟ್ 15ರ ಒಳಗೆ 5 ಸಾವಿರ ಮನೆ ಬಡವರಿಗೆ ಹಂಚಿಕೆ
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸೋಮಣ್ಣ, ಒಂದು ಲಕ್ಷ ಬಹುಮಹಡಿ ಮನೆಗಳ ನಿರ್ಮಾಣ ವಿವಿಧ ಹಂತದ ಪ್ರಗತಿಯಲ್ಲಿದೆ. ಅಗಸ್ಟ್ 15ರ ಒಳಗೆ 5 ಸಾವಿರ ಮನೆಗಳನ್ನು ಬಡವರಿಗೆ ಹಂಚಿಕೆ ಮಾಡುತ್ತೇವೆ. CM ಕೈಯಿಂದ ಬಡವರಿಗೆ ಹಸ್ತಾಂತರ ಮಾಡುತ್ತೇವೆ. ಅಗತ್ಯ ಇರುವ ಬಡವರಿಗೆ ಮಾತ್ರ ಸಿಗುವಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ತೀವಿ ಎಂದರು. ಸೆಪ್ಟೆಂಬರ್ ತಿಂಗಳಿಗೆ ನಾನು ಸಚಿವನಾಗಿ 2 ವರ್ಷ ಆಗುತ್ತೆ. ಇಲಾಖೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಅಧಿಕಾರಿಗಳಿಗೆ ಬಡವರ ಪರ ಕೆಲಸ ಮಾಡಲು ಸೂಚಿಸಿದ್ದೇನೆ. ಬಡವರ ಪರ ಕೆಲಸ ಮಾಡುವವರಿಗೆ ಕೊರೊನಾ ಬಾಧಿಸುವುದಿಲ್ಲ ಎಂದು ಹೇಳಿದ್ರು.

The post ವಸತಿ ಇಲಾಖೆ ಸಭೆಯಲ್ಲಿ ಲೋಪಗಳನ್ನು ಪಟ್ಟಿ ಮಾಡಿದ ಮುನಿರತ್ನ, ಅಧಿಕಾರಿಗಳಿಗೆ ಸೋಮಣ್ಣ ಕ್ಲಾಸ್​ appeared first on News First Kannada.

Source: newsfirstlive.com

Source link