ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ನಡುವಿನ ಆರೋಪ-ಪ್ರತ್ಯಾರೋಪ ಮುಂದುವರಿದಿದೆ. ಈ ನಡುವೆ ಚುನಾವಣೆಯಲ್ಲಿ ಜನರು ಯಾರಿಗೆ ಬುದ್ಧಿ ಕಲಿಸಿದ್ದಾರೆ ಎಂಬುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದ ಸುಮಲತಾ ಅವರಿಗೆ ಟಾಂಗ್ ನೀಡಿರುವ ಹೆಚ್​ಡಿಕೆ, ವಾಜಪೇಯಿ ಅವರೇ ಮೊದಲ ಚುನಾವಣೆಯಲ್ಲಿ ಸೋತಿದ್ರು ಎಂದಿದ್ದಾರೆ.

ನ್ಯೂಸ್​ಫಸ್ಟ್​ನೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು.. ಚುನಾವಣೆಯಲ್ಲಿ ಯಾರಿಗೆ ಬುದ್ಧಿ ಕಲಿಸಿದ್ದಾರೆ ನೋಡಲಿ ಎಂದಿದ್ದಾರೆ. ಆದರೆ 2019ರ ಚುನಾವಣೆಯೇ ಬೇರೆ, 2020ರ ಚುನಾವಣೆಯೇ ಬೇರೆ. ಅಂದು ಚುನಾವಣೆ ಗೆಲುವು ಪಡೆದಿದ್ದು ನನ್ನ ಸ್ನೇಹಿತನ ಸಾವಿನ ಅನುಕಂಪದಿಂದ. ಆಗ ಸಿಎಂ ಆಗಿ ನಾನು ಕೊಡಬೇಕಾದ ಗೌರವ ನೀಡಿ ನನ್ನ ಸಂಸ್ಕೃತಿಯನ್ನು ತೋರಿಸಿದ್ದೀನಿ. ಆದರೂ ನನ್ನ ಬಗ್ಗೆ ಟೀಕೆ ಮಾಡುವ ರೀತಿ ಅವರ ಸಂಸ್ಕೃತಿ ತೋರಿಸುತ್ತದೆ. ಆದರೆ ಈಗ ಅನುಕಂಪ ಹೊರಟು ಹೋಗಿದೆ. 2024ರ ಚುನಾವಣೆ ಬರಲಿ, ಆಗ ಆಡಿಯೋ ಬಿಡುಗಡೆ ಮಾಡುತ್ತೇನೆ ಏಕೆಂದರೆ ಈಗ ಬಿಡುಗಡೆ ಮಾಡಿದರೇ ಜನರು ಮರೆತು ಬಿಡುತ್ತಾರೆ. ಆದ್ದರಿಂದ ಚುನಾವಣೆ ಸಮಯದಲ್ಲಿ ಬಿಡುಗಡೆ ಮಾಡುತ್ತೇನೆ ಎಂದರು.

ಇದನ್ನೂ ಓದಿ: ‘KRS ಜಲಾಶಯದ ಬಾಗಿಲಿನಲ್ಲಿ ಸಂಸದರನ್ನೇ ಮಲಗಿಸಿಬಿಟ್ರೆ ಆಯ್ತು’ -ಸುಮಲತಾ ವಿರುದ್ಧ ಹೆಚ್​​ಡಿಕೆ ಕಿಡಿ

ಇದನ್ನೂ ಓದಿ: ಮಹಿಳೆ ಬಗ್ಗೆ ಇಂಥಾ ಹೇಳಿಕೆ.. ಮಾಜಿ ಸಿಎಂಗೆ ಜ್ಞಾನ ಇಲ್ವಾ.? HDK ವಿರುದ್ಧ ಮಂಡ್ಯ ಸೊಸೆ ಕೆಂಡ

ಅನಿಲ್ ಕುಮಾರಸ್ವಾಮಿ ಸೋಲಿನ ಕುರಿತು ಪ್ರಶ್ನೆಗೆ ಉತ್ತರಿಸಿದ ಹೆಚ್​ಡಿಕೆ.. ಅಟಲ್ ಬಿಹಾರಿ ವಾಜಿಪೇಯಿ ಅವರೇ ಮೊದಲ ಚುನಾವಣೆಯಲ್ಲಿ ಸೋಲುಂಡಿದ್ದರು. ನಮ್ಮ ಕುಟುಂಬ ಕೂಡ ಸೋಲು, ಗೆಲುವು ನೋಡಿದೆ. ನಾನು, ದೇವೇಗೌಡರು ಕೂಡ ಸೋಲು ಕಂಡಿದ್ದೇವೆ. ಆದ್ದರಿಂದ ಸಂಸದರಿಂದ ನಾನು ಕಲಿಯಬೇಕಾದಾದ್ದು ಏನು ಇಲ್ಲ. ನಮ್ಮ ಹಾಗೂ ಮಂಡ್ಯ ಜನರ ನಡುವೆ ಸ್ವಾಭಿಮಾನ ತಂದು ದೂರ ಮಾಡಿದ್ದಾರೆ. ಈಗ ಸ್ವಾಭಿಮಾನ ಏನಾಗುತ್ತಿದೆ ಎಂದು ಗೊತ್ತಾಗುತ್ತದೆ ಎಂದು ಸವಾಲು ಎಸೆದರು.

The post ‘ವಾಜಪೇಯಿ ಅವರೇ ಮೊದಲ ಚುನಾವಣೆಯಲ್ಲಿ ಸೋತಿದ್ರು’- ನಿಖಿಲ್​ ಸೋಲಿನ ಟೀಕೆಗೆ ಹೆಚ್​​​ಡಿಕೆ ಟಾಂಗ್​ appeared first on News First Kannada.

Source: newsfirstlive.com

Source link