ಅತೀ ಹೆಚ್ಚು ಬಳಕೆಯಲ್ಲಿರುವ ಸಂವಹನ ಮಾಧ್ಯಮ ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಫೀಚರ್‍ ಪರಿಚಯಿಸುತ್ತಿದೆ. ಕೆಲ ದಿನಗಳ ಹಿಂದೆ ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ತರುವಂತಹ ಕ್ರಮ ವಾಟ್ಸಾಪ್ ಕೈಗೊಂಡಿತ್ತು. ಇದರ ವಿರುದ್ಧ ವ್ಯಾಪಕ ಟೀಕೆ ಕೂಡ ವ್ಯಕ್ತವಾಗಿತ್ತು. ಸಾಕಷ್ಟು ಜನರು ವಾಟ್ಸಾಪ್ ಗೆ ಪರ್ಯಾಯ ಮಾರ್ಗ ಕಂಡುಕೊಳ್ಳಲು ಮುಂದಾದರು. ಇದರಿಂದ ವಾಟ್ಸಾಪ್ ಗೆ ಹಿನ್ನಡೆಯಾದದ್ದು ಸುಳ್ಳಲ್ಲ. ತನ್ನ ಬಳಕೆದಾರರ ವಿಶ್ವಾಸ ಪುನಃ ಸಂಪಾದಿಸಲು ವಾಟ್ಸಾಪ್ ಕಸರತ್ತು ನಡೆಸುತ್ತಿದೆ. ಇದರ ಭಾಗವಾಗಿ ಹೊಸ ಫೀಚರ್ ವೊಂದನ್ನು ಪರಿಚಯಿಸುತ್ತಿದೆ.

ಹೊಸ ಫೀಚರ್ ಏನು ?

ಬಳಕೆದಾರರ ಗೌಪ್ಯತೆಗೆ ಮೊದಲ ಆದ್ಯತೆ ನೀಡುತ್ತೇವೆ ಎನ್ನುವುದನ್ನು ಸಾಬೀತು ಪಡಿಸಲು ಹೊರಟಿರುವ ವಾಟ್ಸಾಪ್, ಅದಕ್ಕಾಗಿ ಇದೀಗ ಸ್ವಯಂ-ಅಳಿಸಿಹಾಕು ( Auto-delete ) ಸೌಲಭ್ಯ ನೀಡುತ್ತಿದೆ. ನಾವು ಕಳುಹಿಸಿದಂತಹ ಫೋಟೊಗಳು ನಾವು ಚಾಟ್ ನಿಂದ ಹೊರಬಂದ ತಕ್ಷಣ ತನ್ನಿಂದ ತಾನೆ ಡಿಲೀಟ್ ಆಗಲಿವೆ. ನಮ್ಮಿಂದ ಸಂದೇಶ ಸ್ವೀಕರಿಸಿದವರು, ಬೇರೆಯವರ ಜತೆ ಹಂಚಿಕೊಳ್ಳಲಾಗದು. ತನ್ನ ಈ ಫೀಚರ್ ನ ಡೆಮೋದ ಕೆಲ ಫೋಟೊಗಳನ್ನು ವಾಟ್ಸಾಪ್ ಹಂಚಿಕೊಂಡಿದೆ.

ಸ್ಕ್ರೀನ್ ಶಾಟ್ ಮಾಡಬಹುದು ?

ವಾಟ್ಸಾಪ್ ಪರಿಚಯಿಸಲು ಹೊರಟಿರುವ ಹೊಸ ಫೀಚರ್ ಒಂದು ನ್ಯೂನ್ಯತೆ ಹೊಂದಿದೆ. ಫೋಟೊಗಳನ್ನು ಚಾಟ್ ನಿಂದ ಬೇರೆಯವರಿಗೆ ಹಂಚಿಕೊಳ್ಳಲು ಅವಕಾಶ ಇರುವುದಿಲ್ಲ. ಆದರೆ, ಸ್ಕ್ರೀನ್ ಶಾಟ್ ತೆಗೆದುಕೊಳ್ಳಬಹುದು.

ವಾಟ್ಸಾಪ್ ತನ್ನ ಹೊಸ ಫೀಚರ್ ಇನ್ನೂ ಬಳಕೆದಾರರಿಗೆ ಕಲ್ಪಿಸಿಲ್ಲ. ಸದ್ಯ ಇದರ ಮೇಲೆ ಕಾರ್ಯನಿರ್ವಹಿಸುತ್ತಿದೆ. ಸ್ಕ್ರೀನ್ ಶಾಟ್ ಮೂಲಕ ಫೋಟೊ ಹಂಚಿಕೊಳ್ಳಬಹುದೆನ್ನುವ ಸಾಧ್ಯತೆಯನ್ನೂ ಗಮನದಲ್ಲಿಟ್ಟು ಕೊಂಡಿರುವ ವಾಟ್ಸಾಪ್, ಈ ಸೌಲಭ್ಯವನ್ನೂ ತೆಗೆದುಹಾಕುವುದರತ್ತ ಕಾರ್ಯೋನ್ಮುಖವಾಗಿದೆ. ವಾಟ್ಸಾಪ್ ನ ಈ ನೂತನ ಸೌಲಭ್ಯ ಮುಂದಿನ ದಿನಗಳಲ್ಲಿ ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಗೆ ಲಭ್ಯವಾಗಲಿದೆ.

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More