ಬೆಳಗಾವಿ: ಮೃತ ರೋಗಿಯ ಶವವನ್ನು ವಾರ್ಡ್​​ನಿಂದ ಶವಾಗಾರಕ್ಕೆ ಸಾಗಿಸದೇ, ಪಕ್ಕದಲ್ಲೇ ಇತರೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಹಿನ್ನೆಲೆ 10 ಶುಶ್ರೂಷಕರಿಗೆ ಬಿಮ್ಸ್​​ನ ಜಿಲ್ಲಾ ಶಸ್ತ್ರ ಚಿಕಿತ್ಸಿಕ ಡಾ.ಖಾಜಿ ಕಾರಣ ಕೇಳಿ ನೋಟಿಸ್ ಕೊಟ್ಟಿದ್ದಾರೆ. ಸಚಿವ ಲಕ್ಷ್ಮಣ್ ಸವದಿ ಆಸ್ಪತ್ರೆಗೆ ಭೇಟಿ ನೀಡಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಶುಶ್ರೂಷಾ ಅಧಿಕಾರಿಗಳಾದ ವಿದ್ಯಾವತಿ ಪ್ರಧಾನ, ಸುಜಾತಾ ಭತುಲಾ, ಶುಶ್ರೂಷಾ ಅಧಿಕಾರಿಗಳಾದ ಜಯಲಕ್ಷ್ಮೀ ಪತ್ತಾರ, ಶೈಲಜಾ ಕುಲಕರ್ಣಿ, ಸುಶೀಲಾ ಶೆಟ್ಟಿ, ಸವಿತಾ ತಮ್ಮಣ್ಣಾಚೆ ಹಾಗೂ ಬಿಮ್ಸ್​​ ವಾರ್ಡ್​​ನ ಶುಶ್ರೂಷಾ ಅಧಿಕಾರಿಗಳಾದ ಭಾರತಿ ವಲ್ಲೆಪೂರಕರ್, ನಮಸಯ್ಯ ಹಿರೇಮಠ, ಕಿರಣ ನಾಯಕ್, ವಿಜಯಲಕ್ಷ್ಮೀ ಪೂಜಾರ ಹೀಗೆ ಒಟ್ಟು 10 ಸಿಬ್ಬಂದಿಗಳಿಗೆ ನೋಟಿಸ್​ ನೀಡಲಾಗಿದೆ.

ಮೃತ ಕೋವಿಡ್ ರೋಗಿಯ ಶವವನ್ನು ಶವಾಗಾರಕ್ಕೆ ಸಾಗಿಸದೇ ವಾರ್ಡ್​ನಲ್ಲೇ ಇಟ್ಟುಕೊಂಡು ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ. ಇದರಿಂದ ಸಂಸ್ಥೆಯ ಘನತೆಗೆ ಚ್ಯುತಿ ಉಂಟಾಗಿದ್ದು, ಈ ನಿಮ್ಮ ಕರ್ತವ್ಯ ಲೋಪದ ಕುರಿತು ಈ ಪತ್ರ ತಲುಪಿದ 24 ಗಂಟೆ ಒಳಗಾಗಿ ನಿಮ್ಮ ವಿವರಣೆಯನ್ನು ಸಲ್ಲಿಸಿ ಎಂದು ನೋಟಿಸ್​​ನಲ್ಲಿ ಸೂಚಿಸಲಾಗಿದೆ. ತಪ್ಪಿದ್ದಲ್ಲಿ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

The post ವಾರ್ಡ್​​ನಲ್ಲೇ ಶವ ಇಟ್ಟುಕೊಂಡು, ರೋಗಿಗಳಿಗೆ ಚಿಕಿತ್ಸೆ- ಬಿಮ್ಸ್ ಸಿಬ್ಬಂದಿಗೆ ನೋಟಿಸ್ appeared first on News First Kannada.

Source: newsfirstlive.com

Source link