ವಾಲ್ಮೀಕಿ ಸಮುದಾಯದ ಬೇಡಿಕೆ ಈಡೇರದಿದ್ದರೆ ಹಲಗಲಿ ಬೇಡರ ದಂಗೆ ಬಾಗಲಕೋಟೆಯಿಂದಲೇ ಆರಂಭ: ಸಮುದಾಯ ಮುಖಂಡ | If government fails to meet our demand, Valmiki community will certainly revolt: Community Leader ARB


ಬಾಗಲಕೋಟೆ: ವಾಲ್ಮೀಕಿ ಸಮುದಾಯದ (Valmiki Community) ಜನ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಸರ್ಕಾರ ಅದರಲ್ಲೂ ವಿಶೇಷವಾಗಿ ವಾಲ್ಮೀಕಿ ಸಮುದಾಯದವರೇ ಆಗಿರುವ ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ಶೇಕಡ 7.5 ಮೀಸಲಾತಿ ದೊರಕಿಸಿ ಕೊಡುವಲ್ಲಿ ವಿಫಲರಾಗಿರುವ ಸಚಿವ ಮತ್ತು ಸರ್ಕಾರಕ್ಕೆ ಬುದ್ಧಿ ಕಲಿಸುತ್ತೇವೆ ಅಂತ ಶಪಥಗಳನ್ನು ಸಮುದಾಯದ ಜನ ಮಾಡುತ್ತಿದ್ದಾರೆ. ಸೋಮವಾರ ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ವಾಲ್ಮೀಕಿ ಸಮುದಾಯದ ಮುಖಂಡ ಪ್ರತಾಪ ಮದುಕರಿ ಅವರು, ಹಲಗಲಿಯ ಬೇಡರು ಓಡಾಡಿದ ಮತ್ತು ವೀರ ಸಿಂಧೂರ ಲಕ್ಷ್ಮಣ ಜನಿಸಿದ ನಾಡಿನಲ್ಲೇ ಬೇಡ ಸಮುದಾಯ ಜನಾಂಗಕ್ಕೆ ಅನ್ಯಾಯವೆಸಗಲಾಗುತ್ತಿದೆ ಎಂದರು.

ನಮ್ಮ ಶ್ರೀಗಳು ಮೀಸಲಾತಿಯನ್ನು ತಮ್ಮ ಮಠಕ್ಕೆ ಕೇಳುತ್ತಿಲ್ಲ, ಈ ನಾಡಿನ ಮೂಲ ನಿವಾಸಿಗಳು ಮತ್ತು 152 ಪಂಗಡಗಳನ್ನೊಳಗೊಂಡ ವಾಲ್ಮೀಕಿ ಸಮುದಾಯದ 2 ಕೋಟಿ ಜನರ ನೋವು ಅರ್ಥಮಾಡಿಕೊಂಡು ಅವರ ಪರವಾಗಿ ಧ್ವನಿಯೆತ್ತಿದ್ದಾರೆ ಎಂದು ಪ್ರತಾಪ ಮದುಕರಿ ಹೇಳಿದರು.

ತಮ್ಮ ಸಮುದಾಯದ ಬೇಡಿಕೆಗೆ ಸರ್ಕಾರ ಸ್ಪಂದಿಸದೆ ಹೋದರೆ ವಿಧಾನ ಸೌಧ ಮತ್ತು ಮುಖ್ಯಮಂತ್ರಿಗಳ ನಿವಾಸ ಮುಂದೆ ಪ್ರತಿಭಟನೆ ನಡೆಸುವುದಾಗಿ ಅವರು ಹೇಳಿದರು. ಶೋಷಿತ ಸಮುದಾಯದ ಪರವಾಗಿ ಮಾತಾಡುತ್ತಿರುವ ಶ್ರೀಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಇನ್ನು ನಾವು ಸಹಿಸಲಾರೆವು. ನಾವು ಆದಷ್ಟು ಬೇಗ ಒಂದು ತೀರ್ಮಾನ ತೆಗೆದುಕೊಂಡು ಅದನ್ನು ಮಾಧ್ಯಮ ಸ್ನೇಹಿತರ ಗಮನಕ್ಕೆ ತರುತ್ತೇವೆ, ವಿಷಯಕ್ಕೆ ಸಂಬಂಧಿಸಿದೆ ನಮ್ಮ ನಿರ್ಧಾರವೇ ಅಂತಿಮ ಎಂದು ಪ್ರತಾಪ ಮದುಕರಿ ಹೇಳಿದರು.

ಸಮುದಾಯ ಬೇಡಿಕೆ ಮತ್ತು ಶ್ರೀಗಳ ಆಗ್ರಹವನ್ನು ಸರ್ಕಾರ ಗಮನಿಸದೆ ಹೋದರೆ, ಹಲಗಲಿ ಬೇಡರ ದಂಗೆ ಬಾಗಲಕೋಟೆಯಿಂದಲೇ ಆರಂಭವಾಗುವುದು ಎಂದು ಪ್ರತಾಪ ಮದುಕರಿ ಹೇಳಿದರು.

TV9 Kannada


Leave a Reply

Your email address will not be published.