ಬೆಂಗಳೂರು: ನಿರಂತರ ಮಳೆ ಹಾಗೂ ಸತತ ಮಳೆಯ ನಡುವೆಯೂ ಸಾಗುತ್ತಿರುವ ಕಾಮಗಾರಿಗಳಿಂದ ರಸ್ತೆಗಳ ಗುಂಡಿಗಳ ಸಮಸ್ಯೆ ತೀವ್ರವಾಗಿದೆ. ವಾಹನ ಸವಾರರು ರಸ್ತೆಗುಂಡಿಗಳಿಂದ ಬೇಸತ್ತಿದ್ದು, ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಲೇ ಸಾಗುತ್ತಿದ್ದಾರೆ. ಈ ನಡುವೆ ರಸ್ತೆ ಗುಂಡಿ ಮುಚ್ಚಲು ತಡ ಮಾಡುತ್ತಿರುವ ಸರ್ಕಾರ, ಬಿಬಿಎಂಪಿ ವಿರುದ್ಧ ಸಾರ್ವಜನಿಕರು ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ನಗರದ ಕಾಕ್ಸ್ ಟೌನ್ ನ ಚಾರ್ಲ್ಸ್ ಕಾಂಪ್ ಬೆಲ್ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿನಿತ್ಯ ವಾಹನ ಸಾವರರು ಅಪಘಾತಕ್ಕೆ ಒಳಗಾಗೋದನ್ನು ನೋಡಿ ಬೇಸತ್ತು ಪ್ರತಿಭಟನೆ ನಡೆಸುತ್ತಿದ್ದು, ರಸ್ತೆ ಗುಂಡಿ ಮುಚ್ಚದಿದ್ರೆ ತಮ್ಮ ಹೋರಾಟವನ್ನು ತೀವ್ರಗೊಳಿಸೋದಾಗಿ ಎಚ್ಚರಿಕೆ ನೀಡಿದರು.
ಇದೇ ವೇಳೆ ರಸ್ತೆಗುಂಡಿಗಳಿಗೆ ಹೂವಿನ ಹಾರ ಹಾಕಿ ಸಿಂಗಾರ ಮಾಡಿದ ಸಾರ್ವಜನಿಕರು, ಗುಂಡಿ ದೇವರಿಗೆ ಹೋಮ ಮಾಡುವ ಮೂಲಕ ವಾಹನ ಸವಾರರ ಹಿತಕ್ಕಾಗಿ ಪ್ರಾರ್ಥನೆ ನಡೆಸಿದರು.