– ಪಾಂಡವಪುರದಲ್ಲಿ ಕೆಟ್ಟ ಪಾಲಿಟಿಕ್ಸ್ ನಡೆಯುತ್ತಿದೆ ಎಂದು ಆರೋಪ

ಮಂಡ್ಯ: ಕಾಂಗ್ರೆಸ್ ಮುಖಂಡನಿಗೆ ಫುಡ್‍ಕಿಟ್ ಹಂಚಲು ಅಧಿಕಾರಿಗಳೇ ಅನುಮತಿ ನೀಡಿ ಕೊನೆಗೆ ಅಧಿಕಾರಿಗಳೇ ಪೊಲೀಸರಿಗೆ ದೂರು ನೀಡಿ ಎಫ್‍ಐಆರ್ ಹಾಕಿಸಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಜರುಗಿದೆ.

ಮೇಲುಕೋಟೆ ಕ್ಷೇತ್ರದ ಕಾಂಗ್ರೆಸ್ ಮುಖಂಡ ಬಿ.ರೇವಣ್ಣ ವಿಕಲಚೇತನರಿಗೆ ಫುಡ್‍ಕಿಟ್ ನೀಡಲು ಪಾಂಡವಪುರದ ಪುರಸಭೆಯ ಅಧಿಕಾರಿಗಳ ಬಳಿ ಮೌಕಿಕವಾಗಿ ಅನುಮತಿ ಕೇಳಿದ್ದಾರೆ. ಅಧಿಕಾರಿಗಳು ಅನುಮತಿ ನೀಡಿದ ಬಳಿಕ ನಿನ್ನೆ ಪುರಸಭೆ ಎದುರು ಕೋವಿಡ್ ನಿಯಮಗಳನ್ನು ಅನುಸರಿಕೊಂಡು ವಿಕಲಚೇತನರಿಗೆ ಫುಡ್‍ಕಿಟ್‍ನ್ನು ರೇವಣ್ಣ ಹಾಗೂ ಅಭಿಮಾನಿಗಳು ಅಧಿಕಾರಿಗಳ ಮುಂದೆ ನೀಡಿದ್ದಾರೆ. ಇದನ್ನೂ ಓದಿ: ಬಾಲಕಿಗೆ ವಿಚಿತ್ರ ಪೂಜೆ ಮಾಡಿ ವಾಮಾಚಾರ ಮಾಂತ್ರಿಕ ನಾಪತ್ತೆ – ಬಾಲಕಿಯ ರಕ್ಷಣೆ

ಇದಾದ ಬಳಿಕ ರಾತ್ರಿ 8 ಗಂಟೆಯ ವೇಳೆಗೆ ಫುಡ್‍ಕಿಟ್ ಹಂಚಿಕೆಯ ವೇಳೆ ಕೋವಿಡ್ ನಿಯಮಗಳು ಉಲ್ಲಂಘನೆ ಆಗಿದೆ ಎಂದು ಅನುಮತಿಕೊಟ್ಟ ಅಧಿಕಾರಿಗಳೇ ಪಾಂಡವಪುರ ಪೊಲೀಸ್ ಠಾಣೆಗೆ ದೂರು ನೀಡಿರುವ ಕಾರಣ ಪೊಲೀಸರು ಎಫ್‍ಐಆರ್ ದಾಖಲು ಮಾಡಿದ್ದಾರೆ. ಅನುಮತಿ ಕೊಟ್ಟ ಅಧಿಕಾರಿಗಳು ಫುಡ್‍ಕಿಟ್ ಕೊಡುವಾಗ ಸ್ಥಳದಲ್ಲೇ ಇದ್ದರು. ಆಗ ಏನು ಮಾಡದ ಅಧಿಕಾರಿಗಳು ಈಗ ದೂರು ನೀಡಿದ್ದಾರೆ ಎಂದು ರೇವಣ್ಣ ಆರೋಪಿಸಿದ್ದಾರೆ.

ಎಫ್‍ಐಆರ್ ಹಾಕಲು ಶಾಸಕ ಪುಟ್ಟರಾಜು ಅವರೇ ಕಾರಣ. ಅಧಿಕಾರಿಗಳಿಗೆ ಒತ್ತಡ ಹಾಕಿ ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ಜನರಿಗೆ ಸಹಾಯ ಆಗಲಿ ಎಂದು ಮೇಲುಕೋಟೆ ಕ್ಷೇತ್ರಕ್ಕೆ ನೀಡಿದ್ದ ಅಂಬುಲೆನ್ಸ್ ಗಳನ್ನು ಸೀಜ್ ಮಾಡಿದ್ದರು. ಇದೀಗ ಕಷ್ಟದಲ್ಲಿರುವ ಜನರಿಗೆ ಫುಡ್‍ಕಿಟ್ ನೀಡಿದ್ರೆ ಕೇಸ್ ಹಾಕುತ್ತಿದ್ದಾರೆ. ವಿಕಲಚೇತನರಿಗೆ ಫುಡ್‍ಕಿಟ್ ನೀಡುವ ವೇಳೆ ಕೋವಿಡ್ ನಿಯಮಗಳನ್ನು ಪಾಲಿಸಲಾಗಿದೆ. ಹೀಗಿದ್ದರೂ ಸಹ ಪುಟ್ಟರಾಜು ಅವರು ನಮ್ಮ ಮೇಲೆ ಕೇಸ್ ಹಾಕಿಸುವ ಮೂಲಕ ಕ್ಷೇತ್ರದಲ್ಲಿ ಕೆಟ್ಟ ಪಾಲಿಟಿಕ್ಸ್ ಮಾಡುತ್ತಿದ್ದಾರೆ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

The post ವಿಕಲಚೇತನರಿಗೆ ಫುಡ್‍ಕಿಟ್ ನೀಡಿದ ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್‍ಐಆರ್ appeared first on Public TV.

Source: publictv.in

Source link