ನವದೆಹಲಿ: ಕಮಲ ಹೂವಿನ ಒಂದೊಂದೇ ದಳಗಳನ್ನ ತನ್ನತ್ತ ಸೆಳೆದುಕೊಳ್ಳುತ್ತಿರುವ ಅಖಿಲೇಶ್ ಯಾದವ್ ಸಿಎಂ ಯೋಗಿ ಮುಂದೆ ಕ್ರಿಕೆಟ್ ಟೆಕ್ನಿಕ್ ಬಗ್ಗೆ ಮಾತನಾಡ್ತಿದ್ದಾರೆ. ಪ್ರಬಲ ಮಾತಿನ ಚಾಟಿ ಮೂಲಕ ಕೇಸರಿ ಕಲಿಗಳತ್ತ ಅಖಿಲೇಶ್ ವಾಗ್ಬಾಣ ಹೂಡ್ತಿದ್ರೆ, ಇತ್ತ ಯೋಗಿ ಆದಿತ್ಯನಾಥ್ ಸೈಲೆಂಟ್ ಆಗಿಯೇ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ತಿದ್ದಾರೆ.
5 ವರ್ಷಕ್ಕೊಮ್ಮೆ ಎಲ್ಲಾ ರಾಜ್ಯಗಳಲ್ಲೂ ಚುನಾವಣೆ ನಡೆಯುವ ರೀತಿಯೇ ಬೇರೆ. ಉತ್ತರಪ್ರದೇಶದಲ್ಲಿ ನಡೆಯುವ ಎಲೆಕ್ಷನ್ ರಂಗೇ ಬೇರೆ. ಈ ದೊಡ್ಡ ರಾಜ್ಯವನ್ನ ಗೆಲ್ಲಲು ಎಲ್ಲಾ ಪಕ್ಷಗಳು ನಡೆಸೋ ಕಸರತ್ತು ಅಷ್ಟಿಷ್ಟಲ್ಲ. ಅದ್ರಲ್ಲೂ ಮುಂದಿನ ತಿಂಗಳಿಂದಲೇ ನಡೆಯೋ ಮಹಾಸಮರಕ್ಕೆ ದಿನಗಣನೆ ಶುರುವಾಗ್ತಿದ್ದಂತೆ, ಅಖಿಲೇಶ್ ಯಾದವ್ರ ಸೈಕಲ್ ಇನ್ನಷ್ಟು ಅಪ್ಡೇಟ್ ಆಗ್ತಿದೆ.
ಕಳೆದ 4 ದಿನಗಳ ಅವಧಿಯಲ್ಲಿ 3 ಸಚಿವರು 7 ಶಾಸಕರು ಸೇರಿದಂತೆ ಒಟ್ಟು 10 ಮಂದಿ ಬಿಜೆಪಿಗೆ ರಾಜೀನಾಮೆ ನೀಡುವಂತೆ ಮಾಡಿ ಅಖಿಲೇಶ್ ಅಸ್ತ್ರ ಹೂಡಿದ್ದಾರೆ. ಆದ್ರೂ ಸಹ ಸಿಎಂ ಯೋಗಿ ಆದಿತ್ಯನಾಥ್ ಪ್ರಚಂಡ ಬಹುಮತದ ಮೂಲಕ ಚುನಾವಣೆ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಬಿಜೆಪಿ ಮಾರ್ಚ್ 10ರಂದು 3ನೇ 4ರಷ್ಟು ಕ್ಷೇತ್ರಗಳನ್ನು ಗೆದ್ದು ಪ್ರಚಂಡ ಬಹುಮತದ ಮೂಲಕ ಸರ್ಕಾರ ರಚಿಸುತ್ತದೆ
ಯೋಗಿ ಆದಿತ್ಯನಾಥ್, ಸಿಎಂ
ಈ ಬಾರಿಯ ಚುನಾವಣೆಯಲ್ಲಿ 3ನೇ 4ರಷ್ಟು ಸೀಟು ಗೆಲ್ತೀವಿ ಎಂದಿದ್ದ ಸಿಎಂ ಯೋಗಿಗೆ, ವ್ಯಂಗ್ಯ ಮಾತುಗಳಲ್ಲೇ ತಿರುಗೇಟು ನೀಡಿದ್ದಾರೆ ಮಾಜಿ ಸಿಎಂ ಅಖಿಲೇಶ್ ಯಾದವ್.
ಅವರು 3ನೇ 4ರಷ್ಟು ಸೀಟು ಗೆಲ್ಲುವ ಬಗ್ಗೆ ಮಾತನಾಡ್ತಿದ್ದಾರೆ. ಅದರರ್ಥ ಅವರು 3ರಿಂದ 4 ಸೀಟು ಗೆಲ್ಲುವ ಬಗ್ಗೆ ಮಾತನಾಡ್ತಿದ್ದಾರೆ. ಸುದ್ದಿಯನ್ನು ನೋಡುವವರಿಗೆ ಗೊತ್ತಿರುತ್ತೆ. ಮೇಲಿಂದ ಮೇಲೆ ಅವರ ವಿಕೆಟ್ಗಳು ಉರುಳುತ್ತಿವೆ. ಆದರೂ ಸಹ ನಮ್ಮ ಬಾಬಾ ಮುಖ್ಯಮಂತ್ರಿಗೆ ಕ್ರಿಕೆಟ್ ಆಡುವುದಿಕ್ಕೆ ಬರುವುದಿಲ್ಲ. ಇಂದೇ ಅವರು ಗೋರಖ್ಪುರಕ್ಕೆ ತೆರಳಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ರನ್ನ ವಾಪಸ್ ಕಳುಹಿಸುವ ಅಗತ್ಯವಿದೆ. ಉತ್ತರಪ್ರದೇಶವನ್ನು ಅವರು(ಯೋಗಿ) ಬರ್ಬಾದ್ ಮಾಡಿದ್ದಾರೆ.
ಅಖಿಲೇಶ್ ಯಾದವ್, ಎಸ್ಪಿ ಮುಖಂಡ
ಬಿಜೆಪಿಗೆ ರಾಜೀನಾಮೆ ನೀಡಿರೋ 10 ಮಂದಿಯಲ್ಲಿ 7 ಜನ ನಿನ್ನೆ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಎಸ್ಪಿ ಸೇರಿದ್ದಾರೆ. ಇನ್ನೂ ಮೂವರು ಎಸ್ಪಿ ಹಾಗೂ ಅದರ ಮೈತ್ರಿ ಪಕ್ಷಕ್ಕೆ ಸೇರಲಿದ್ದಾರೆ. ಇಷ್ಟೇ ಅಲ್ಲ ರಾಜೀನಾಮೆ ನೀಡುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ರಾಜೀನಾಮೆ ಕೊಟ್ಟವರ ಪೈಕಿ ಹಿಂದುಳಿದ ವರ್ಗಗಳ ಜನಪ್ರತಿನಿಧಿಗಳೇ ಹೆಚ್ಚು. ಆದ್ರೆ ಈ ಮಧ್ಯೆ ಸಿಎಂ ಯೋಗಿ ಆದಿತ್ಯನಾಥ್ ಬೇರೆಯದ್ದೇ ದಾರಿಯಲ್ಲಿ ರಣತಂತ್ರ ಹೆಣೆಯುತ್ತಿದ್ದಾರೆ. ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗೋರಖ್ಪುರದಲ್ಲಿ ದಲಿತರೊಬ್ಬರ ಮನೆಯಲ್ಲಿ ಯೋಗಿ ಊಟ ಸೇವಿಸಿದ್ರು. ಈ ಮೂಲಕ ದಲಿತ ಮತಗಳ ಮೇಲೆ ಕಣ್ಣಿಟ್ಟರಾ ಸಿಎಂ ಎಂಬ ಪ್ರಶ್ನೆ ಸಹ ಮೂಡಿದೆ.
ಟಿಕೆಟ್ ಸಿಗದಿದ್ದಕ್ಕೆ ಬಿಎಸ್ಪಿ ಕಾರ್ಯಕರ್ತನ ಕಣ್ಣೀರು
ಅರ್ಷದ್ ರಾಣಾ ಎಂಬ ಬಹುಜನ ಸಮಾಜವಾದಿ ಪಕ್ಷದ ಕಾರ್ಯಕರ್ತನೋರ್ವ ತನಗೆ ಟಿಕೆಟ್ ಕೊಡುವಂತೆ ಪಕ್ಷಕ್ಕೆ 4.5 ಲಕ್ಷ ಕೊಟ್ಟಿದ್ದ. ಆದ್ರೆ ಕೊನೆಘಳಿಗೆಯಲ್ಲಿ ಪಕ್ಷ ತನಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಅರ್ಷದ್ ಕಣ್ಣೀರಿಟ್ಟ ಘಟನೆ ಕೂಡ ನಿನ್ನೆ ಯುಪಿಯಲ್ಲಿ ನಡೀತು.
ಎವ್ರಿ ಡೇ ಕೌಂಟ್ಸ್ ಎಂಬಂತೆ ಯುಪಿ ರಣಾಂಗಣದಲ್ಲಿ ಒಂದೊಂದು ದಿನಗಳೂ ಸಹ ನಿರ್ಣಾಯಕ. ದಿನದಿಂದ ದಿನಕ್ಕೆ ಚುನಾವಣಾ ಅಖಾಡ ಕಾವೇರುತ್ತಿದ್ದು, ಅಂತಿಮವಾಗಿ ಸಿಎಂ ಯೋಗಿ ಪಡೆಯ ಎಷ್ಟು ವಿಕೆಟ್ಗಳು ಉರುಳುತ್ತೆ ಅನ್ನೋದು ಇನ್ನೂ ನಿಗೂಢ. ಈ ಮಧ್ಯೆ ಪಾಲಿಟಿಕಲ್ ಕ್ರಿಕೆಟ್ ಕಲಿಸಿಕೊಡೋಕೆ ಬರ್ತಿರೋ ಅಖಿಲೇಶ್ಗೆ, ರಾಜಕೀಯ ಚದುರಾಂಗದಾಟದಲ್ಲಿ ಕೇಸರಿ ಪಡೆ ಕೊನೆಕ್ಷಣದಲ್ಲಿ ಚೆಕ್ಮೇಟ್ ಕೊಡುತ್ತಾ ಅನ್ನೋದೆ ಕುತೂಹಲ.