ಮುಂಬೈ: ಬಾಲಿವುಡ್ ಸ್ಟಾರ್ ವಿಕ್ಕಿ ಕೌಶಲ್, ಕತ್ರಿನಾ ಕೈಫ್ ಮದುವೆ ಸಮಾರಂಭಕ್ಕೆ ಭರ್ಜರಿ ತಯಾರಿ ನಡೆದಿದೆ. ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರೋ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಮದುವೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸ್ಟಾರ್ಗಳ ಮದುವೆ ಸಮಾರಂಭವನ್ನು ಡೆಕೊ ಇವೇಂಟ್ಸ್ ಸಂಸ್ಥೆ ನಿರ್ವಹಿಸುತ್ತಿದ್ದು, ಇಬ್ಬರಿಗೂ ಐಶಾರಾಮಿ ಸೂಟ್ಗಳನ್ನು ಬುಕ್ ಮಾಡಲಾಗಿದೆ. ಐದು ದಿನಗಳ ಕಾಲ ವಿಕ್ಕಿ, ಕತ್ರಿನಾ ಜೋಡಿ ಹೋಟೆಲ್ನಲ್ಲಿ ಕಾಲ ಕಳೆಯಲಿದೆ.
ಹೋಟೆಲ್ನಲ್ಲಿರೋ ರಾಜಾಮಾನ್ ಸಿಂಗ್ ಸೂಟ್ಅನ್ನು ನವ ದಂಪತಿಗಾಗಿ ಬುಕ್ ಮಾಡಲಾಗಿದ್ದು, ಈ ಸೂಟ್ ಬೆಲೆ ಒಂದು ರಾತ್ರಿಗೆ 7 ಲಕ್ಷ ರೂಪಾಯಿ ಆಗಲಿದೆ. ಸಿಕ್ಸ್ ಸೆನ್ಸ್ ಫೋರ್ಟ್ ಹೋಟೆಲ್ನಲ್ಲಿ ಒಟ್ಟು 15 ಸೂಟ್ಗಳಿದ್ದು, ಈ ರೂಮ್ಗಳ ಬೆಲೆ ಒಂದು ದಿನಕ್ಕೆ 4 ಲಕ್ಷ ರೂಪಾಯಿಯಿಂದ ಆರಂಭವಾಗಲಿದೆ.
ಸದ್ಯ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಬುಕ್ ಮಾಡಿಕೊಂಡಿರೋ ಸೂಟ್ನಲ್ಲಿ ಖಾಸಗಿ ಗಾರ್ಡನ್, ಸ್ವಿಮ್ಮಿಂಗ್ ಪೂಲ್ ಕೂಡ ಇದ್ದು, ಈ ಸೂಟ್ನಿಂದ ರಾಜಸ್ಥಾನದ ಅರಾವಳಿ ಪರ್ವತ ಶ್ರೇಣಿಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಈ ರೂಮ್ಗಳನ್ನು ಮದುವೆಗಾಗಿ ಬುಕ್ ಮಾಡಿದ ಬಳಿಕ ಯಾರನ್ನು ಹೋಟೆಲ್ ಒಳಗೆ ಪ್ರವೇಶ ಮಾಡದಂತೆ ಭದ್ರತೆ ನೀಡಿ, ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಡಿಸೆಂಬರ್ 06ರಂದು ವಿಕ್ಕಿ, ಕತ್ರಿನಾ ಜೋಡಿ ಹೋಟೆಲ್ಗೆ ಆಗಮಿಸಲಿದ್ದು, ಡಿಸೆಂಬರ್ 09 ರಂದು ವಿವಾಹ ಕಾರ್ಯಕ್ರಮ ಜರುಗಲಿದೆ. ಉಳಿದಂತೆ ಡಿ.07ಕ್ಕೆ ಸಂಗೀತ ಕಾರ್ಯಕ್ರಮ, ಡಿ.08ಕ್ಕೆ ಮೆಹಂದಿ ಕಾರ್ಯಕ್ರಮ, ಡಿ.10 ರಿಸೆಪ್ಷನ್ ನಡೆಯಲಿದೆ. ಕಾರ್ಯಕ್ರಮಕ್ಕೆ ಭದ್ರತೆಗಾಗಿ 100 ಬೌನ್ಸರ್ಸ್ ಹಾಗೂ ರಾಜಸ್ಥಾನ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ ಎನ್ನಲಾಗಿದೆ.