ವಿಚ್ಛೇದನದ ಬಳಿಕವೂ ಒಂದೇ ಹೋಟೆಲ್​ನಲ್ಲಿ ಉಳಿದುಕೊಳ್ಳುತ್ತಿದ್ದಾರೆ ಧನುಷ್​-ಐಶ್ವರ್ಯಾ? | Dhanush and Aishwarya Rajinikanth Staying in same hotel in Hyderabad says reports


ವಿಚ್ಛೇದನದ ಬಳಿಕವೂ ಒಂದೇ ಹೋಟೆಲ್​ನಲ್ಲಿ ಉಳಿದುಕೊಳ್ಳುತ್ತಿದ್ದಾರೆ ಧನುಷ್​-ಐಶ್ವರ್ಯಾ?

ಐಶ್ವರ್ಯಾ-ಧನುಷ್​

ಧನುಷ್​​ (Dhanush) ಹಾಗೂ ಐಶ್ವರ್ಯಾ ರಜನಿಕಾಂತ್​ (Aishwarya Rajinikanth) ವಿಚ್ಛೇದನ ಪಡೆದಿರುವ ವಿಚಾರ ಅವರ ಅಭಿಮಾನಿಗಳಿಗೆ ನಿಜಕ್ಕೂ ಬೇಸರ ತಂದಿದೆ. ಹೀಗೊಂದು ಸುದ್ದಿ ಈ ದಂಪತಿಯಿಂದ ಬರಲಿದೆ ಎಂದು ಯಾರೂ ಊಹಿಸಿರಲಿಲ್ಲ. ಈಗ ಈ ದಂಪತಿ ಬಗ್ಗೆ ನಾನಾ ವಿಚಾರಗಳು ಹೊರ ಬರುತ್ತಿವೆ. ಧನುಷ್​ ಹಾಗೂ ಐಶ್ವರ್ಯಾ ವಿಚ್ಛೇದನ ಪಡೆಯಲು ಹೈದರಾಬಾದ್​ನಲ್ಲಿ ನಡೆದ ಒಂದು ಜಗಳ ಕಾರಣವಾಯಿತು ಎಂದು ಕೆಲ ಮಧ್ಯಮಗಳು ವರದಿ ಮಾಡಿವೆ. ರಜನಿಕಾಂತ್​ ಇವರ ನಡುವೆ ಸಂಧಾನಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈಗ ಈ ಮಾಜಿ ದಂಪತಿ ಬಗ್ಗೆ ಹೊಸ ಸುದ್ದಿ ಒಂದು ಕೇಳಿ ಬಂದಿದೆ. ಈ ವಿಚಾರ ಕೇಳಿ ಅನೇಕರು ಅಚ್ಚರಿ ಹೊರ ಹಾಕಿದ್ದಾರೆ.

ಸಾಮಾನ್ಯವಾಗಿ ವಿಚ್ಛೇದನ ಪಡೆದ ನಂತರದಲ್ಲಿ ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳೋಕೆ ಇಷ್ಟಪಡುವುದಿಲ್ಲ. ಆದರೆ, ಸೆಲೆಬ್ರಿಟಿ ವಲಯದಲ್ಲಿ ಹಾಗಾಗುವುದಿಲ್ಲ. ಒಂದೇ ಇಂಡಸ್ಟ್ರಿಯಲ್ಲಿ ಇದ್ದರೆ ಪರಸ್ಪರ ಭೇಟಿ ಆಗುವ ಸಂದರ್ಭ ಒದಗಿ ಬರುತ್ತದೆ. ಈಗ ಧನುಷ್​ ಹಾಗೂ ಐಶ್ವರ್ಯಾಗೆ ಹೀಗೆಯೇ ಆಗಿದೆ ಎನ್ನಲಾಗುತ್ತಿದೆ. ಸದ್ಯ, ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

ಧನುಷ್​ ಇತ್ತೀಚೆಗೆ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ತಮಿಳು ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ. ಇದಕ್ಕೆ ತಮಿಳಿನಲ್ಲಿ ‘ವಾತಿ’ ಹಾಗೂ ತೆಲುಗಿನಲ್ಲಿ ‘ಸರ್’ ಎಂದು ಹೆಸರಿಡಲಾಗಿದೆ. ಸಿತಾರಾ ಎಂಟರ್​ಟೇನ್​ಮೆಂಟ್​​ನ​ ಸೂರ್ಯದೇವ ನಾಗವಂಶಿ ಹಾಗೂ ಫಾರ್ಚೂನ್ ಫೋರ್​ ಸಿನೇಮಾಸ್​​ನ ಸಾಯಿ ಸೌಜನ್ಯ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ‘ರಂಗ್​ ದೇ’ ಖ್ಯಾತಿಯ ವೆಂಕಿ ಅಟ್ಲುರಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಕೆಲಸಕ್ಕಾಗಿ ಧನುಷ್​ ಹೈದರಾಬಾದ್​ಗೆ ತೆರಳಿದ್ದಾರೆ. ಸಿನಿಮಾ ಕೆಲಸವೊಂದರ ನಿಮಿತ್ತ ಐಶ್ವರ್ಯಾ ಕೂಡ ಹೈದರಾಬಾದ್​ನಲ್ಲಿದ್ದಾರೆ.

ಮೂಲಗಳ ಪ್ರಕಾರ ಇಬ್ಬರೂ ಒಂದೇ ಹೋಟೆಲ್​ನಲ್ಲಿ ತಂಗಿದ್ದಾರೆ ಎಂದು ತಿಳಿದು ಬಂದಿದೆ. ಈ ಹೋಟೆಲ್​ನಲ್ಲಿಯೇ ಇಬ್ಬರ ನಡುವೆ ದೊಡ್ಡ ಮಟ್ಟದಲ್ಲಿ ಜಗಳ ಏರ್ಪಟ್ಟಿತ್ತು ಎಂದು ವರದಿ ಆಗಿದೆ. ಈ ಬಗ್ಗೆ ದಂಪತಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

2004ರ ನವೆಂಬರ್ 18ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈಗ ದಂಪತಿ ವಿಚ್ಛೇದನ ಘೋಷಿಸಿರುವುದು ಅವರ ಅಭಿಮಾನಿಗಳಿಗೆ ನೋವು ತರಿಸಿದೆ. ವಿಶೇಷ ಎಂದರೆ, ಐಶ್ವರ್ಯಾ ಹಾಗೂ ಧನುಷ್​ ಅವರದ್ದು ಪ್ರೇಮ ವಿವಾಹ. 21ನೇ ವಯಸ್ಸಿಗೆ ಐಶ್ವರ್ಯಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು ಧನುಷ್​. 18 ವರ್ಷಗಳ ಕಾಲ ದಾಂಪತ್ಯ ನಡೆಸಿದ ಇಬ್ಬರೂ ಈಗ ಬೇರೆ ಆಗುತ್ತಿರುವುದು ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರ ತರಿಸಿದೆ. ಧನುಷ್​ ನಟನೆಯ ‘3’ ಚಿತ್ರವನ್ನು ಐಶ್ವರ್ಯಾ ರಜನಿಕಾಂತ್​ ಅವರೇ ನಿರ್ದೇಶನ ಮಾಡಿದ್ದರು. ಈ ಚಿತ್ರ ತೆರೆಗೆ ಬಂದ ನಂತರದಲ್ಲಿ ಇಬ್ಬರೂ ಬೇರೆ ಆಗುತ್ತಾರೆ ಎನ್ನುವ ವದಂತಿ ಹುಟ್ಟಿಕೊಂಡಿತ್ತು. ಆದರೆ, ಅದು ನಿಜವಾಗಿರಲಿಲ್ಲ. ಈ ಸಿನಿಮಾ ತೆರೆಕಂಡು ಸುಮಾರು 10 ವರ್ಷಗಳ ನಂತರದಲ್ಲಿ ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ.

TV9 Kannada


Leave a Reply

Your email address will not be published. Required fields are marked *