ಟಾಲಿವುಡ್ ನಟ ಅಕ್ಕಿನೇನಿ ನಾಗ ಚೈನತ್ಯರೊಂದಿಗೆ ವಿಚ್ಛೇದನ ಪಡೆದುಕೊಂಡ ಬಳಿಕ ನಟಿ ಸಮಂತಾ ಸಂಪೂರ್ಣವಾಗಿ ತಮ್ಮ ದೃಷ್ಟಿಯನ್ನು ಸಿನಿಮಾ ಕಡೆ ಹರಿಸಿದ್ದಾರೆ. ಈಗಾಗಲೇ ಎರಡು ಸಿನಿಮಾಗಳಿಗೆ ಓಕೆ ಎಂದಿರೋ ಸಮಂತಾ, ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ರ ಪುಷ್ಪ ಸಿನಿಮಾದ ಹಾಡಿನಲ್ಲಿ ಸೊಂಟ ಬಳುಕಿಸಲಿದ್ದಾರೆ ಎಂಬ ಸುದ್ದಿಯೂ ಹೊರಬಿದ್ದಿದೆ. ಈ ನಡುವೆ ಹಾಲಿವುಡ್ ಸಿನಿಮಾಗೆ ಓಕೆ ಹೇಳಿರುವುದಾಗಿ ಸಮಂತಾ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಹಾಲಿವುಡ್ ಸಿನಿಮಾ ನಿರ್ದೇಶಕ ಫಿಲಿಪ್ ಜಾನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ‘ದಿ ಅರೇಂಜ್ ಮೆಂಟ್ಸ್ ಆಫ್ ಲವ್’ ಸಿನಿಮಾದಲ್ಲಿ ನಟಿ ಸಮಂತಾ ನಟಿಸುತ್ತಿದ್ದಾರೆ. ಭಾರತ ಖ್ಯಾತ ಬರಹಗಾರ ಎನ್.ಮುರಾರಿ ಅವರು ಇದೇ ಹೆಸರಿನಲ್ಲಿ ಬರೆದಿರುವ ಪುಸ್ತಕಕ್ಕೆ ಸಿನಿಮಾ ರೂಪ ನೀಡಲು ನಿರ್ದೇಶಕರು ಮುಂದಾಗಿದ್ದಾರೆ.
ಈ ಸಿನಿಮಾದಲ್ಲಿ ಸಮಂತಾ, ಬೈಸೆಕ್ಸುವಲ್ ತಮಿಳು ಯುವತಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಅಂದರೇ ಕೇವಲ ಪುರುಷರಿಗೆ ಮಾತ್ರವಲ್ಲದೇ ಸ್ತ್ರೀಯರ ಆಕರ್ಷಣೆಗೂ ಒಳಗಾಗುವ ಯುವತಿ ಪಾತ್ರ ಇದಾಗಿದೆ.
ಈಗಾಗಲೇ ಫ್ಯಾಮಿಲಿ ಮ್ಯಾನ್-2ನಲ್ಲಿ ಸಮಂತಾ ನಟಿಸಿದ್ದ ರೆಬೆಲ್ ತಮಿಳು ಯುವತಿಯ ಪಾತ್ರ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಅದಕ್ಕೂ ಮೀರಿದ ವಿವಾದಿತ ಪಾತ್ರದಲ್ಲಿ ನಟಿಸಲು ಸಮಂತಾ ಮುಂದಾಗಿದ್ದಾರೆ. ಅದರಲ್ಲೂ ಈ ಸಿನಿಮಾ ಹಾಲಿವುಡ್ನಲ್ಲಿ ನಿರ್ಮಾಣವಾಗುತ್ತಿದ್ದು, ತಮಿಳು, ಹಿಂದಿ ಸೇರಿದಂತೆ ಫ್ರೆಂಚ್ ಭಾಷೆಯಲ್ಲೂ ತೆರೆಗೆ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಡ್ರಿಮ್ ವಾರಿಯರ್ ಬ್ಯಾನರ್ನಲ್ಲಿ ಎರಡು ಭಾಷೆಗಳಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ನಟಿಸಲು ಸಮಂತಾ ಒಪ್ಪಿಗೆ ಸೂಚಿಸಿದ್ದು, ಇದೇ ವೇಳೆ ಶ್ರೀದೇವಿ ಬ್ಯಾನರ್ ನಲ್ಲಿ ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಾಣ ಮಾಡುತ್ತಿರುವ ಮತ್ತೊಂದು ಸಿನಿಮಾಗೆ ಓಕೆ ಅಂದಿದ್ದಾರೆ. ಪುಷ್ಪ ಸಿನಿಮಾದ ಸ್ಪೆಷಲ್ ಸಾಂಗ್ ಶೂಟಿಂಗ್ ನಾಳೆಯಿಂದ ಪ್ರಾರಂಭ ಮಾಡಲಿದ್ದಾರೆ.