ವಿಜಯನಗರ: ಪುನೀತ್‌ ರಾಜ್​ಕುಮಾರ್​ ಪುಣ್ಯಸ್ಮರಣೆ; 75 ಜನರಿಂದ ನೇತ್ರದಾನ, ರಕ್ತದಾನ, ಅನ್ನ ಸಂತರ್ಪಣೆ | Vijayanagar people organized eye donation and blood donation camp Remembrance of Puneeth Rajkumar


ವಿಜಯನಗರ: ಪುನೀತ್‌ ರಾಜ್​ಕುಮಾರ್​ ಪುಣ್ಯಸ್ಮರಣೆ; 75 ಜನರಿಂದ ನೇತ್ರದಾನ, ರಕ್ತದಾನ, ಅನ್ನ ಸಂತರ್ಪಣೆ

ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ

ವಿಜಯನಗರ: ಕನ್ನಡ ಚಲನಚಿತ್ರ ನಾಯಕ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ನಿಧನದ ನಂತರ ಅವರ ಕಣ್ಣು ಅಂದರಿಗೆ ಬೆಳಕು ನೀಡಿದ್ದು, ಇದರಿಂದ ಪ್ರೇರಣೆ ಪಡೆದ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದ 75 ಕ್ಕೂ ಅಧಿಕ ಯುವಕರು ನೇತ್ರದಾನ (eye donation) ಮಾಡುವ ಅರ್ಜಿಗೆ ಸಹಿ ಮಾಡಿ ನೇತ್ರದಾನದ ನಿರ್ಧಾರ ಕೈಗೊಂಡಿದ್ದಾರೆ. ಸಮೀಪದ ಅರಸೀಕೆರೆ ಗ್ರಾಮದ ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ, ನೇತ್ರದಾನ ಕಾರ್ಯಕ್ರಮದಲ್ಲಿ ಗ್ರಾಮದ ಯುವಕರು ಪಾಲ್ಗೋಂಡಿದ್ದು, ಇತರರಿಗೆ ಪ್ರೇರಣೆಯಾಗಿದ್ದಾರೆ.

ಈ ಕಾರ್ಯಕ್ರಮದಲ್ಲಿ 22 ರಿಂದ 35 ವರ್ಷದ 50 ಯುವಕರು ಹಾಗೂ 35 ರಿಂದ 50 ವರ್ಷದ ಒಳಗಿನ 25 ಜನ ಸೇರಿ ಒಟ್ಟು 75 ಜನರು ನೇತ್ರದಾನದ ಅರ್ಜಿಯನ್ನು ಭರ್ತಿ ಮಾಡಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನೀಡಿದ್ದಾರೆ. ಅಲ್ಲದೇ ಯುವಕರು ಗ್ರಾಮದಲ್ಲಿ ನೇತ್ರದಾನದ ಜಾಗೃತಿ ಕುರಿತು ಮನೆಗಳಿಗೆ ತೆರಳಿದ್ದು, ಗ್ರಾಮವೊಂದರಲ್ಲಿ ನೂರು ಜನರು ನೇತ್ರದಾನ ಮಾಡುವ ಗುರಿ ತಲುಪಿಸುವ ಆಶಾವಾದ ಹೊಂದಿದ್ದಾರೆ.

ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಬಹುತೇಕ ಯುವಕರು ಹಾಜರಾಗಿ 36 ಯೂನಿಟ್ ರಕ್ತದಾನ ನೀಡುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ ಎಂದು ಗ್ರಾಮದ ಯುವ ಮುಖಂಡ ಪ್ರಶಾಂತ್ ಪಾಟೀಲ್ ತಿಳಿಸಿದರು.

ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ದಿಟ್ಟಹೆಜ್ಜೆ ಇಟ್ಟ ಯುವಕರು ಗ್ರಾಮದ ಗ್ರಾಮ ದೇವತೆ ದಂಡಿನ ದುರ್ಗಮ್ಮ ದೇವಿ ದೇವಸ್ಥಾನಕ್ಕೆ ತೆರಳುವ ಪ್ರಮುಖ ಸರ್ಕಲ್ ಅನ್ನು ‘ಅಪ್ಪು ಸರ್ಕಲ್’ ಎಂದು ನಾಮಕರಣ ಮಾಡಿದ್ದಾರೆ.

ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಅನ್ನ ಸಂತರ್ಪಣೆ
ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಅನ್ನ ಸಂತರ್ಪಣೆ ಕಾರ್ಯ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಭಿಮಾನಿಗಳು ಹೋಳಿಗೆಯ ಸವಿ ಸವಿದರು. ಈ ಸಂದರ್ಭದಲ್ಲಿ ಕಣ್ಣಿನ ತಜ್ಞ ಮಹೇಶ್ವರಪ್ಪ, ಆರೋಗ್ಯ ಸಿಬ್ಬಂದಿ ಬಾಲಚಂದ್ರ, ಸಂತೋಷ್ ಗೌಡ ಮುಖಂಡರಾದ ಚಂದ್ರಪ್ಪ, ನಾಗೇಂದ್ರ, ಪರಶುರಾಮ, ನಾಗರಾಜ್, ಕೆಂಚಪ್ಪ, ಶಿವಣ್ಣ, ಪುತ್ರೇಶ್, ಮರಿಯಪ್ಪ, ಗುರುರಾಜ್, ಅಂಜಿನಮ್ಮ, ಹಾಲಪ್ಪ, ಲಿಂಗರಾಜ ಉಪಸ್ಥಿತರಿದ್ದರು.

ಚಿತ್ರನಟ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಅರಸೀಕೆರೆ ಗ್ರಾಮದ ಪುನೀತ್ ರಾಜ್‌ಕುಮಾರ್ ಅಭಿಮಾನ ಬಳಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಅವರ ಪುತ್ರ ವೈ.ಡಿ ಅಣ್ಣಪ್ಪ ಹಾಗೂ ಅರಸೀಕೆರೆ ತಾಲೂಕು ಪಂಚಾಯಿತಿ ಸದಸ್ಯೆ ಅವರ ಪುತ್ರ ಪ್ರಶಾಂತ್ ಪಾಟೀಲ್ ರಕ್ತದಾನ ಮಾಡುವುದರ ಜತೆಗೆ, ನೇತ್ರದಾನ ಮಾಡುವ ವಾಗ್ದಾನ ಮಾಡಿ ಅರ್ಜಿ ಭರ್ತಿ ಮಾಡಿ ಅಧಿಕಾರಿಗಳಿಗೆ ನೀಡಿದರು.

ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣದ ಬಳಿಕ ಗ್ರಾಮೀಣ ಪ್ರದೇಶಗಳಲ್ಲೂ ನೇತ್ರದಾನಕ್ಕೆ ಹೆಚ್ಚಿನ ಜಾಗೃತಿ ಬಂದಿದೆ. ಮರಣದ ನಂತರ ಮಣ್ಣಾಗಿ ಹೋಗುವ ಕಣ್ಣುಗಳನ್ನು ದಾನ ಮಾಡುವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚುತ್ತಿರುವುದು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಲ್ಲಿ ಹೆಮ್ಮೆ ತರಿಸಿದೆ. ಕಣ್ಣುಗಳಿಂದ ನಾವು ನೋಡಿದ ಪ್ರಪಂಚ, ಕಣ್ಣಿಲ್ಲದೆ ಪ್ರಪಂಚ ಕಾಣದವರು ದಾನ ನೀಡಿದ ಕಣ್ಣುಗಳಿಂದ ಕಾಣಬೇಕು ಎನ್ನುವುದು ನಮ್ಮ ಆಶಯ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ನೀಡಿದ ಕಣ್ಣುಗಳಿಂದ ದೇಶದಲ್ಲಿನ ಕುರುಡು ನಿವಾರಣೆ ಆಗಬೇಕು. ಈ ಮೂಲಕ ನೆಚ್ಚಿನ ನಟನ ಹೆಸರು ಅಜರಾಮರ ಆಗಬೇಕು ಎಂದು ಗ್ರಾಮದ ಯುವ ಮುಖಂಡ ಪ್ರಶಾಂತ್ ಪಾಟೀಲ್ ತಿಳಿಸಿದರು.

ಇದನ್ನೂ ಓದಿ:
ಪುನೀತ್ ನೇತ್ರ ಕ್ರಾಂತಿ; ದಾವಣಗೆರೆಯ 100ಕ್ಕೂ ಹೆಚ್ಚು ಜನರಿಂದ ನೇತ್ರದಾನ ವಾಗ್ದಾನ ಪತ್ರಕ್ಕೆ ಸಹಿ

ಪುನೀತ್​ ನೆನಪಲ್ಲಿ ಇನ್ನೊಂದು ದೊಡ್ಡ ಕಾರ್ಯಕ್ರಮ ‘ಅಪ್ಪು ಅಮರ’; ಇದು ಕಿರುತೆರೆ ಮಂದಿಯ ನಮನ

TV9 Kannada


Leave a Reply

Your email address will not be published. Required fields are marked *