ಬೆಂಗಳೂರು: ಕೆಲಸ ಮಾಡಿಸಿಕೊಡುವುದಾಗಿ ವಂಚಿಸಿರುವ ಆರೋಪದ ಮೇಲೆ ನಿನ್ನೆ ಸಿಸಿಬಿ ಅಧಿಕಾರಿಗಳು ಸಚಿವ ಶ್ರೀರಾಮುಲು ಪಿಎ ರಾಜಣ್ಣ ಅವರನ್ನ ಬಂಧಿಸಿದ್ದರು. ಇಂದು ಮಧ್ಯಾಹ್ನದ ವೇಳೆಗೆ ಅವರನ್ನ ಸಿಸಿಬಿ ಪೊಲೀಸರು, ಕರೆದಾಗ ವಿಚಾರಣೆಗೆ ಬರುವಂತೆ ಸೂಚಿಸಿ ಬಿಟ್ಟು ಕಳುಹಿಸಿದ್ದಾರೆ. ಇನ್ನು ತಮ್ಮ ಮೇಲೆ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ರಾಜಣ್ಣ ಅವರು ಫೇಸ್​ಬುಕ್​ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಸತ್ಯಾಂಶ ಹೇಳಿಕೊಳ್ತಿದ್ದೇನೆ..

ಕಳೆದ 24 ಗಂಟೆಯಿಂದ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಎರಡು ಮಾತು, ವಾಸ್ತವ ಸಂಗತಿ ಹಾಗೂ ಸತ್ಯಾಂಶವನ್ನ ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ..

ಸುಮಾರು 20 ವರ್ಷಗಳಿಂದ ಸಚಿವ ಮಾನ್ಯ ಬಿ.ಶ್ರೀರಾಮುಲು ಅವರ ನೆರಳಲ್ಲಿ ಬದುಕುತ್ತಿದ್ದೇವೆ. ಸಚಿವರ ಪ್ರಾಮಾಣಿಕ ಜನಸೇವೆಯಲ್ಲಿ ನೂರಾರು ಮಂದಿ ಅಳಿಲು ಸೇವೆ ಸಲ್ಲಿಸುತ್ತಿದ್ದು, ಅವರಲ್ಲಿ ಒಬ್ಬನಾಗಿ ನಾನು ಸೇವೆ ಸಲ್ಲಿಸುತ್ತಿದ್ದೇನೆ.

ಆಡಿಯೋ ನನ್ನದಲ್ಲ
ಶ್ರೀರಾಮುಲು ಅವರಿಗಾಗಲಿ, ಮತ್ಯಾರಿಗೆ ಆಗಲಿ ಕಳಂಕ ತರುವ ಕೆಲಸ ಎಂದೂ ಮಾಡಿಲ್ಲ, ಮುಂದೆ ಮಾಡುವುದು ಇಲ್ಲ. ಬಿಜೆಪಿ ರಾಜ್ಯ ಉಪಾಧ್ಯಕ್ಷ, ಬಿ ವೈ ವಿಜಯೇಂದ್ರ ಅವರ ಕುರಿತ ಯಾವುದೇ ಆಡಿಯೋದಲ್ಲಿ ನಾನು ಭಾಗಿಯಾಗಿಲ್ಲ.

ಪೊಲೀಸರು ಈ ಕುರಿತು ವಿಚಾರಣೆ ಕರೆದುಕೊಂಡು ಹೋಗಿದ್ದು, ವಿಚಾರಣೆ ವೇಳೆ ನನ್ನದು ಎನ್ನಲಾದ ಆಡಿಯೋ ಕೇಳಿಸಿದ್ದು, ಅದು ನನ್ನದಲ್ಲ ಎಂದು ನನ್ನ ಧ್ವನಿಯಿಂದ ಗೊತ್ತಾಗಿದೆ. ನನ್ನ ಕುರಿತ ಸತ್ಯಾಂಶ ಅವರಿಗೆ ಮನವರಿಕೆಯಾಗಿದೆ.

ನನ್ನ ವಾಯ್ಸ್ ಸ್ಯಾಂಪಲ್​​ಗಳನ್ನು ಪಡೆದಿದ್ದು, ಸತ್ಯಾಂಶ ಖಾತ್ರಿ ಪಡಿಸಿಕೊಳ್ಳಲು ಅವರ ಬಳಿಯಿರುವ ಆಡಿಯೋ ಜೊತೆ ಪರೀಕ್ಷೆಗೆ ಒಳಪಡಿಸಿದ್ದಾರೆ. ಅಡಿಯೋದಲ್ಲಿ ಇರುವ ಧ್ವನಿ ನನ್ನದಲ್ಲ ಎಂದು ಪ್ರಾಥಮಿಕ ತನಿಖೆಲಿ ಮನವರಿಕೆಯಾಗಿದೆ. ಇವುಗಳನ್ನು FSLಗೂ ಕಳುಹಿಸಿಕೊಡಲಾಗಿದೆ.

ಮತ್ತೆ ಹೇಳುವೆ.. ಸಚಿವರ ಸೇವೆಯಲ್ಲಿ ಪ್ರಾಮಾಣಿಕವಾಗಿ ಅಳಿಲು ಸೇವೆ ಸಲ್ಲಿಸಲು ಬಂದವರಲ್ಲಿ ನಾನು ಒಬ್ಬ.. ಕಳೆದ ಒಂದು ದಿನದಿಂದ ಈಚೆಗೆ ನಡೆದ ಬೆಳವಣಿಗೆಗಳು ಹಾಗೂ ವರದಿಗಳು ಸತ್ಯಕ್ಕೆ ದೂರವಾಗಿದ್ದು, ನಾನು ಆಘಾತಕ್ಕೆ ಒಳಗಾಗಿದ್ದೇನೆ, ನನ್ನ ಕುಟುಂಬವೂ ನೋವಿನಲ್ಲಿ ಇದೆ. ತಪ್ಪು ಗ್ರಹಿಕೆಯಿಂದ ವಿಜಯೇಂದ್ರ ಅವರು ದೂರು ಸಲ್ಲಿಸುವ ಮುನ್ನ, ನನ್ನನು ಕರೆಯಿಸಿ ಮಾತನಾಡಿದ್ದಿದ್ದರೆ, ವಾಸ್ತವಾಂಶ ಹಾಗೂ ಸತ್ಯಾಸತ್ಯತೆ ಗೊತ್ತಾಗಿರುತ್ತಿತ್ತು.

ಈ ಪ್ರಕರಣದಲ್ಲಿ ನಾನು ಭಾಗಿಯಲ್ಲ, ಯಾವುದೇ ತಪ್ಪು ಮಾಡಿಲ್ಲ. ನಾನು ಜೀವನಕ್ಕೆ ಕಷ್ಟ ಪಟ್ಟು ದುಡಿದುಕೊಂಡು ಬದುಕುವ ವ್ಯಕ್ತಿ. ಅಡ್ಡದಾರಿ ಹಿಡಿಯುವವನಲ್ಲ.. ಬದುಕಿಗಾಗಿ ಕಷ್ಟಪಟ್ಟು ದುಡಿಯುತ್ತೇವೆ ಹೊರತು ಅಡ್ಡದಾರಿ ಹಿಡಿದು ಬದುಕುವವರಲ್ಲ.
ರಾಜಣ್ಣ, ರಾಮುಲು ಪಿಎ

The post ವಿಜಯೇಂದ್ರ ನನ್ನ ಕರೆಸಿ ಮಾತನಾಡಿದ್ದರೆ ಸತ್ಯಾಂಶ ಗೊತ್ತಾಗ್ತಿತ್ತು -ರಾಮುಲು PA ಬೇಸರ appeared first on News First Kannada.

Source: newsfirstlive.com

Source link