ವಿಜಯ್​ ದೇವರಕೊಂಡ ಸಿನಿಮಾ ತಂಡಕ್ಕೆ ಸಂಕಷ್ಟ; ಮೈಕ್​ ಟೈಸನ್​ ಜತೆ ಸಾಧ್ಯವಾಗುತ್ತಿಲ್ಲ ಶೂಟ್​ | Liger Movie Team In Trouble Team not Getting VISA Due to Covid 19 Rules

ವಿಜಯ್​ ದೇವರಕೊಂಡ ಸಿನಿಮಾ ತಂಡಕ್ಕೆ ಸಂಕಷ್ಟ; ಮೈಕ್​ ಟೈಸನ್​ ಜತೆ ಸಾಧ್ಯವಾಗುತ್ತಿಲ್ಲ ಶೂಟ್​

ಮೈಕ್​ ಟೈಸನ್​, ವಿಜಯ್​ ದೇವರಕೊಂಡ

ಅರ್ಜುನ್​ ರೆಡ್ಡಿ ಖ್ಯಾತಿಯ ನಟ ವಿಜಯ್​ ದೇವರಕೊಂಡ ಟಾಲಿವುಡ್​ನ ಬೇಡಿಕೆಯ ನಟ. ಅವರು ‘ಲೈಗರ್’ ಸಿನಿಮಾ ಮೂಲಕ ಬಾಲಿವುಡ್​ಗೂ ಕಾಲಿಡುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ. ಇತ್ತೀಚೆಗೆ ಚಿತ್ರತಂಡ ವಿಶ್ಚ ಬಾಕ್ಸಿಂಗ್​ ಲೆಜೆಂಡ್​ ಮೈಕ್​ ಟೈಸನ್​ ಅವರು ಎಂಟ್ರಿ ನೀಡುತ್ತಿದ್ದಾರೆ ಎನ್ನುವುದನ್ನು ಘೋಷಣೆ ಮಾಡಿತ್ತು. ಇದಾದ ನಂತರ ಸಿನಿಮಾ ಬಗ್ಗೆ ಇದ್ದ ನಿರೀಕ್ಷೆ ದುಪ್ಪಟ್ಟಾಗಿತ್ತು. ಈಗ ಚಿತ್ರತಂಡ ಇಕ್ಕಟ್ಟಿಗೆ ಸಿಲುಕಿದೆ. ಈ ಸಮಸ್ಯೆಯಿಂದ ಸಿನಿಮಾ ಶೂಟಿಂಗ್​ ವಿಳಂಬವಾಗುವ ಸಾಧ್ಯತೆ ಇದೆ.

ಬಾಕ್ಸಿಂಗ್​ ಜಗತ್ತಿನಲ್ಲಿ ಅಮೆರಿಕದ ಮೈಕ್​ ಟೈಸನ್​ ಅವರದ್ದು ದೊಡ್ಡ ಹೆಸರು. ಎದುರಾಳಿಗಳಿಗೆ ನಡುಕ ಹುಟ್ಟಿಸುವ ಅವರ ಬಾಕ್ಸಿಂಗ್​ ಪರಾಕ್ರಮಕ್ಕೆ ಸರಿಸಾಟಿ ಆಗಬಲ್ಲ ಮತ್ತೊಬ್ಬ ವ್ಯಕ್ತಿಯೇ ಇಲ್ಲ. ಅಂಥ ದಿಗ್ಗಜನನ್ನು ‘ಲೈಗರ್​’ ಸಿನಿಮಾ ತಂಡ ಭಾರತಕ್ಕೆ ಸ್ವಾಗತಿಸೋಕೆ ಆಹ್ವಾನ ನೀಡಿತ್ತು. ಆದರೆ, ಈ ವಿಚಾರದಲ್ಲಿ ಅವರು ಷರತ್ತೊಂದನ್ನು ಹಾಕಿದ್ದರು. ತಮ್ಮ ಭಾಗದ ಶೂಟ್​ಅನ್ನು ಅಮೆರಿಕದಲ್ಲೇ ಮಾಡಬೇಕು ಎಂದು ಹೇಳಿದ್ದರು. ಇದಕ್ಕಾಗಿ ಚಿತ್ರತಂಡ ಅಮೆರಿಕಕ್ಕೆ ಪ್ರಯಾಣ ಬೆಳೆಸಬೇಕಿತ್ತು. ಆದರೆ, ಚಿತ್ರತಂಡಕ್ಕೆ ವೀಸಾ ಸಿಗುತ್ತಿಲ್ಲ.

ಭಾರತದಲ್ಲಿ ಕೊವಿಡ್​ ಅಧಿಕವಾಗಿತ್ತು. ಹೀಗಾಗಿ, ಭಾರತದಿಂದ ಬರುವ ಪ್ರಯಾಣಿಕರಿಗೆ ಅಮೆರಿಕ ಬ್ರೇಕ್​ ಹಾಕಿತ್ತು. ಈಗ ಕೊವಿಡ್​ ಕಡಿಮೆ ಆದರೂ, ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳು ಮತ್ತು  ಅಮೆರಿಕದಲ್ಲಿ ಕೆಲಸದ ಉದ್ದೇಶ ಇಟ್ಟುಕೊಂಡು ಬರುವವರಿಗೆ ಮಾತ್ರ ವೀಸಾ ನೀಡಲಾಗುತ್ತಿದೆ. ಸಿನಿಮಾ ತಂಡದವರು ತೆರಳಿದರೆ ಗುಂಪಿನಲ್ಲಿ ಹೋಗಬೇಕು. ಇವರ ಸಂಖ್ಯೆ ಕೂಡ ಅಧಿಕವಾಗಿರುತ್ತದೆ. ಇಂಥವರಿಗೆ ವಿಸಾ ನೀಡಲು ಯುಎಸ್​ಎ ಹಿಂದೇಟು ಹಾಕುತ್ತಿದೆ.

ಈ ಚಿತ್ರದಲ್ಲಿ ಮೈಕ್​ ಟೈಸನ್​ ಮಾಡುತ್ತಿರುವುದು ಒಂದು ಅತಿಥಿ ಪಾತ್ರ ಅಷ್ಟೇ. ಕ್ಲೈಮ್ಯಾಕ್ಸ್​ಗಿಂತಲೂ ಮುನ್ನ ಬರುವ ದೃಶ್ಯದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಷ್ಟಕ್ಕಾಗಿ ಅವರು ದುಬಾರಿ ಸಂಭಾವನೆಯನ್ನು ಜೇಬಿಗೆ ಇಳಿಸಿಕೊಳ್ಳಲಿದ್ದಾರೆ. ಅದು ವಿಜಯ್​ ದೇವರಕೊಂಡ ಅವರ ಸಂಬಳಕ್ಕಿಂತಲೂ ದೊಡ್ಡ ಮೊತ್ತ ಎಂಬ ಸುದ್ದಿ ಇತ್ತೀಚೆಗೆ ಕೇಳಿ ಬಂದಿತ್ತು.

‘ಕಿಂಗ್​ ಆಫ್​ ದಿ ರಿಂಗ್​ ಎನಿಸಿಕೊಂಡ ಮೈಕ್​ ಟೈಸನ್​ ಅವರು ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ನಮ್ಮ ಲೈಗರ್​ ತಂಡದಿಂದ ಸ್ವಾಗತ’ ಎಂದು ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಕರಣ್​ ಜೋಹರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ: ‘ಲೈಗರ್’ ಚಿತ್ರದಲ್ಲಿ​ ಅತಿಥಿ ಪಾತ್ರ ಮಾಡುವ ಮೈಕ್​ ಟೈಸನ್​ಗೆ ಹೀರೋಗಿಂತಲೂ ಹೆಚ್ಚು ಸಂಬಳ

TV9 Kannada

Leave a comment

Your email address will not be published. Required fields are marked *