‘ತಮ್ಮ ಮನೆಯವರಿಗೆ ಮುಖ ತೋರಿಸಿಲ್ಲ’ ಎಂಬ ವಿಚಾರ ನೆನೆದು ಕಣ್ಣೀರು ಹಾಕಿದ್ದಾರೆ. ಈ ವೇಳೆ ಸೋನು ಗೌಡಗೆ ಎಲ್ಲರೂ ಬೆಂಬಲ ನೀಡಿದ್ದಾರೆ.
ಸೋಶಿಯಲ್ ಮೀಡಿಯಾ (Social Media) ಮೂಲಕ ಸಾಕಷ್ಟು ಖ್ಯಾತಿ ಪಡೆದ ಸೋನು ಶ್ರೀನಿವಾಸ್ ಗೌಡ ಅವರು ‘ಬಿಗ್ ಬಾಸ್ ಒಟಿಟಿ ಕನ್ನಡ’ಕ್ಕೆ ಕಾಲಿಟ್ಟಿದ್ದಾರೆ. ಅವರ ಬಗ್ಗೆ ಪರ ವಿರೋಧ ಚರ್ಚೆ ಆಗುತ್ತಿದೆ. ಕೆಲವರು ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಆದರೆ, ಬಿಗ್ ಬಾಸ್ ವೇದಿಕೆ ಮೂಲಕ ಸೋನು ಗೌಡ ಹಲವು ವಿಚಾರಗಳಿಗೆ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ‘ತಮ್ಮ ಮನೆಯವರಿಗೆ ಮುಖ ತೋರಿಸಿಲ್ಲ’ ಎಂಬ ವಿಚಾರ ನೆನೆದು ಕಣ್ಣೀರು ಹಾಕಿದ್ದಾರೆ. ಈ ವೇಳೆ ಸೋನು ಗೌಡಗೆ (Sonu Gowda) ಎಲ್ಲರೂ ಬೆಂಬಲ ನೀಡಿದ್ದಾರೆ.
ಸೋನು ಗೌಡ ಅವರು ಓರ್ವನ ಜತೆ ಪ್ರೀತಿಯಲ್ಲಿ ಇದ್ದರು. ಆತನೇ ಮೊದಲು ಸೋನುಗೆ ಪ್ರಪೋಸ್ ಮಾಡಿದ್ದ. ಸೋನು ಜತೆ ಚೆನ್ನಾಗಿಯೇ ಇದ್ದ. ಒಂದು ದಿನ ವಿಡಿಯೋ ಕಾಲ್ ಮಾಡುವಂತೆ ಸೋನುಗೆ ದುಂಬಾಲು ಬಿದ್ದ. ಆತನನ್ನು ನಂಬಿ ಸೋನು ವಿಡಿಯೋ ಕಾಲ್ ಮಾಡಿದ್ದರು. ಈ ವಿಡಿಯೋವನ್ನು ಆತ ರೆಕಾರ್ಡ್ ಮಾಡಿಕೊಂಡಿದ್ದ. ನಂತರ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಆತ ಲೀಕ್ ಮಾಡಿದ್ದ. ಇದರಿಂದ ಸೋನುಗೆ ತೀವ್ರ ಮುಜುಗರ ಆಗಿದೆ. ಮನೆಯವರ ಮುಂದೆ ಅವರು ತಲೆತಗ್ಗಿಸುವಂತೆ ಆಗಿದೆ. ಈ ಬಗ್ಗೆ ಬಿಗ್ ಬಾಸ್ ವೇದಿಕೆಯಲ್ಲಿ ಮಾತನಾಡುತ್ತಾ ಅವರು ಕಣ್ಣೀರು ಹಾಕಿದ್ದಾರೆ.
‘ನಮ್ಮ ಮಾನ ಮರ್ಯಾದೆ ತೆಗೆದೆ ಎಂದು ಅಮ್ಮ ಕರೆ ಮಾಡಿ ಬೈದರು. ವಿಡಿಯೋ ಲೀಕ್ ಆಗಿ ಆರು ತಿಂಗಳು ಆಗಿದೆ. ಆದರೂ ಅಮ್ಮನಿಗೆ ಮುಖ ತೋರಿಸಲು ಆಗುತ್ತಿಲ್ಲ. ಅಂತಹ ಅಮ್ಮ ನಂಗೆ ಸಿಕ್ಕಿರೋದು ನನ್ನ ಅದೃಷ್ಟ. ನಾನು ಸತ್ತು ಹೋಗಬೇಕು ಎಂದು ನನಗೆ ಅನಿಸಿತು. ಆದರೆ, ನಾನು ತಪ್ಪು ಮಾಡಿಲ್ಲ. ನನ್ನ ನಂಬಿಕೆಗೆ ಮೋಸ ಆಗಿದೆ ಅಷ್ಟೇ ಅನಿಸಿತು. ಹಾಗಾಗಿ ಸಾಯುವ ನಿರ್ಧಾರದಿಂದ ಹೊರ ಬಂದೆ. ನಾನು ಇಲ್ಲಿ ನಿಂತುಕೊಂಡು ಕ್ಷಮೆ ಕೇಳುತ್ತೇನೆ. ಅಮ್ಮ ಸಾರಿ’ ಎಂದಿದ್ದಾರೆ ಸೋನು ಗೌಡ.