ವಿದೇಶಗಳಿಂದ ಬರುವ ಪ್ರಯಾಣಿಕರ ಗಮನಕ್ಕೆ; ಮಾರ್ಗಸೂಚಿಯಲ್ಲಾಗಿದೆ ಬದಲಾವಣೆ, 7ದಿನಗಳ ಹೋಂ ಕ್ವಾರಂಟೈನ್​ ಇರುವುದಿಲ್ಲ | Union ministry of health revised its guidelines for international arrivals


ವಿದೇಶಗಳಿಂದ ಬರುವ ಪ್ರಯಾಣಿಕರ ಗಮನಕ್ಕೆ; ಮಾರ್ಗಸೂಚಿಯಲ್ಲಾಗಿದೆ ಬದಲಾವಣೆ, 7ದಿನಗಳ ಹೋಂ ಕ್ವಾರಂಟೈನ್​ ಇರುವುದಿಲ್ಲ

ಪ್ರಾತಿನಿಧಿಕ ಚಿತ್ರ

ದೇಶದಲ್ಲಿ ಕೊವಿಡ್ 19 ಪ್ರಕರಣಗಳು ತಗ್ಗುತ್ತಿರುವ ಬೆನ್ನಲ್ಲೇ, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸಂಬಂಧಪಟ್ಟ ಮಾರ್ಗಸೂಚಿಯಲ್ಲಿ  ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪರಿಷ್ಕರಿಸಿದೆ. ಒಮಿಕ್ರಾನ್​ ಹೆಚ್ಚಿದ ಬೆನ್ನಲ್ಲೇ ವಿದೇಶಿ ಪ್ರಯಾಣಕರಲ್ಲೇ ಎರಡು ವಿಭಾಗ ಮಾಡಲಾಗಿತ್ತು. ಅದರಲ್ಲಿ ಅಪಾಯ ಹೆಚ್ಚಿರುವ ರಾಷ್ಟ್ರಗಳು ಮತ್ತು ಇತರ ರಾಷ್ಟ್ರಗಳು ಎಂದು ವಿಂಗಡಿಸಿ, ಪ್ರತ್ಯೇಕವಾಗಿ ಮಾರ್ಗಸೂಚಿ ರೂಪಿಸಿತ್ತು. ಆದರೆ ಈಗ ಅಪಾಯದಲ್ಲಿರುವ ರಾಷ್ಟ್ರಗಳ ಮತ್ತು ಇತರ ರಾಷ್ಟ್ರಗಳ ನಡುವಿನ ಪ್ರತ್ಯೇಕತೆಯನ್ನು ತೆಗೆದುಹಾಕಲಾಗಿದೆ. ಯಾವುದೇ ರಾಷ್ಟ್ರದಿಂದ ಭಾರತಕ್ಕೆ ಬಂದಿದ್ದರೂ, ಅವರು 14 ದಿನಗಳ ಕಾಲ ಸ್ವಯಂ ನಿಗಾ ವಹಿಸಬೇಕು ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ. ಈ ಹಿಂದೆ ಇದ್ದ ಏಳು ದಿನಗಳ ಹೋಂ ಕ್ವಾರಂಟೈನ್​ ನಿಯಮವನ್ನೂ ತೆಗೆದುಹಾಕಿದೆ. ಈ ನಿಯಮ ಫೆಬ್ರವರಿ 14ರಿಂದ ಜಾರಿಯಾಗುತ್ತದೆ. 

ಕೊವಿಡ್​ 19 ವೈರಸ್ ಸ್ವರೂಪ, ಪ್ರಸರಣ ಪ್ರಮಾಣ ನಿರಂತರವಾಗಿ ಬದಲಾಗುತ್ತಿದೆ. ಇದನ್ನು ಮೇಲ್ವಿಚಾರಣೆ ಮಾಡುವ ಅಗತ್ಯವಿದೆ ಎಂದು ಹೇಳಿರುವ ಕೇಂದ್ರ ಆರೋಗ್ಯ ಇಲಾಖೆ, ಆರ್ಥಿಕ ಚಟುವಟಿಕೆಗಳನ್ನು ಅಡೆತಡೆಯಿಲ್ಲದೆ ನಡೆಸುವ ಅಗತ್ಯವಿದೆ ಎಂಬುದನ್ನು ಒತ್ತಿ ಹೇಳಿದೆ. ಈ ಮಧ್ಯೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಈ ಹೊಸ ನಿಯಮದ ಅನ್ವಯ ಅವರು ಭಾರತಕ್ಕೆ ತಲುಪಿದ ಕೂಡಲೇ ಆರ್​ಟಿ-ಪಿಸಿಆರ್​ ಟೆಸ್ಟ್​ಗೆ ಒಳಗಾಗುವ ಅಗತ್ಯ ಇಲ್ಲ. ಬದಲಿಗೆ 72 ಗಂಟೆಯೊಳಗೆ ಟೆಸ್ಟ್​ ಮಾಡಿ, ಬಂದ ನೆಗೆಟಿವ್​ ರಿಪೋರ್ಟ್​ನ್ನು ಏರ್​ ಸುವಿಧಾ ವೆಬ್ ಪೋರ್ಟ್​ಲ್​ನಲ್ಲಿ ಅಪ್​ಲೋಡ್ ಮಾಡಬೇಕು. ಅದಿಲ್ಲದಿದ್ದರೆ ಪೂರ್ಣ ಪ್ರಮಾಣದ ಲಸಿಕೆ ಪಡೆದಿದ್ದನ್ನು ದೃಢೀಕರಿಸುವ ಸರ್ಟಿಫಿಕೇಟ್​ನ್ನು ದಾಖಲೆಗೆ ನೀಡಬೇಕು ಎಂದು ಹೇಳಲಾಗಿದೆ. ಕೆನಡಾ, ಹಾಂಗ್ ಕಾಂಗ್, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಬಹ್ರೇನ್, ಕತಾರ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳು ಸೇರಿ ಒಟ್ಟು 82 ದೇಶಗಳಿಂದ ಬರುವವರಿಗೆ ಈ ಆಯ್ಕೆ ಸೌಲಭ್ಯ ನೀಡಲಾಗಿದೆ.

ಆಗಮನದ ಬಳಿಕ ಪ್ರಯಾಣಿಕರನ್ನು ಥರ್ಮಲ್​ ಸ್ಕ್ರೀನಿಂಗ್​ಗೆ ಒಳಪಡಿಸಲಾಗುತ್ತದೆ. ಒಟ್ಟಾರೆ ಪ್ರಯಾಣಿಕರಲ್ಲಿ ಶೇ.2ರಷ್ಟು ಪ್ರಯಾಣಿಕರನ್ನು ಆರ್​ಟಿ-ಪಿಸಿಆರ್​ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಟೆಸ್ಟಿಂಗ್ ಗೆ ಪ್ರಯಾಣಿಕರನ್ನು ವಿಮಾನಯಾನ ಸಂಸ್ಥೆಯು ಆಯ್ಕೆ ಮಾಡುತ್ತದೆ. ರೋಗಲಕ್ಷಣಗಳು ಕಂಡುಬರುವ ಪ್ರಯಾಣಿಕರನ್ನು ತಕ್ಷಣವೇ ನಿರ್ಬಂಧಿಸಲಾಗುತ್ತದೆ ಮತ್ತು ಪರೀಕ್ಷಿಸಲಾಗುತ್ತದೆ. ಅವರು ಕೋವಿಡ್-ಪಾಸಿಟಿವ್ ಎಂದು ಕಂಡುಬಂದಲ್ಲಿ ಸಂಪರ್ಕ ಪತ್ತೆಹಚ್ಚುವಿಕೆಯನ್ನು ಕೈಗೊಳ್ಳಲಾಗುತ್ತದೆ.
ಎಲ್ಲಾ ಇತರ ಪ್ರಯಾಣಿಕರು ಯಾವುದೇ ಕೋವಿಡ್ ರೋಗಲಕ್ಷಣಗಳಿಗೆ 14 ದಿನಗಳವರೆಗೆ ಸ್ವಯಂ-ಮೇಲ್ವಿಚಾರಣೆ ಮಾಡಬೇಕು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಒಮಿಕ್ರಾನ್ ರೂಪಾಂತರ ಹರಡುವುದನ್ನು ತಡೆಯಲು ಕಟ್ಟುನಿಟ್ಟಾದ ನಿರ್ಬಂಧಗಳನ್ನು ಡಿಸೆಂಬರ್ ನಲ್ಲಿ ಜಾರಿಗೊಳಿಸಲಾಗಿತ್ತು. ಆದಾಗ್ಯೂ, ಆ ನಿಯಮಗಳ ಹೊರತಾಗಿಯೂ, ಒಮಿಕ್ರಾನ್ ಪ್ರಭೇದ ಭಾರತ ದೇಶಕ್ಕೆ ತನ್ನ ಎಂಟ್ರಿ ಕೊಟ್ಟಿತ್ತು. ಮೂರನೇ ತರಂಗ ಪ್ರಕರಣಗಳ ಏರಿಕೆಗೆ ಕಾರಣವಾಗಿತ್ತು. ಕಳೆದ ತಿಂಗಳ ಮಧ್ಯದಲ್ಲಿ ದೈನಂದಿನ ಪ್ರಕರಣಗಳು ಸುಮಾರು 3.5 ಲಕ್ಷಕ್ಕೆ ತಲುಪಿದವು. ದೈನಂದಿನ ಪ್ರಕರಣಗಳು ಈಗ ಕಡಿಮೆಯಾಗಿವೆ. ಮುಂಬೈ ಮತ್ತು ದೆಹಲಿ ಸೇರಿದಂತೆ ಅನೇಕ ರಾಜ್ಯಗಳು ಮತ್ತು ನಗರಗಳು ನಿರ್ಬಂಧಗಳನ್ನು ಸರಾಗಗೊಳಿಸುವ ಮತ್ತು ಆರ್ಥಿಕತೆಯನ್ನು ಚೇತರಿಸಿಕೊಳ್ಳಲು ಪ್ರಯತ್ನಿಸುತ್ತವೆ. ಇಂದು ಬೆಳಿಗ್ಗೆ 24 ಗಂಟೆಗಳಲ್ಲಿ 67,084 ಕೋವಿಡ್ ಪ್ರಕರಣಗಳು ವರದಿಯಾಗಿವೆ. ನಿನ್ನೆ ವರದಿಯಾದ 71,000 ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಭಾರತದ ಸಕ್ರಿಯ ಕೊರೊನಾ ಪ್ರಕರಣಗಳು ಈಗ 7.9 ಲಕ್ಷದಷ್ಟಿವೆ.

TV9 Kannada


Leave a Reply

Your email address will not be published.