ಬೆಂಗಳೂರು: ವಿದೇಶದಲ್ಲಿ ಉದ್ಯೋಗ ಮಾಡುವ ಮತ್ತು ವ್ಯಾಸಂಗ ಮಾಡುತ್ತಿರುವವರಿಗೆ ಸಿಹಿ ಸುದ್ದಿ. ಆದ್ಯತಾ ಗುಂಪಿನ ಕೋಟಾದಲ್ಲಿ ಅವರಿಗೆ ಮಂಗಳವಾರದಿಂಲೇ ಲಸಿಕೆ ನೀಡಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಬೆಂಗಳೂರಿನಲ್ಲಿ ಸೋಮವಾರ ಈ ಬಗ್ಗೆ ಮಾಹಿತಿ ನೀಡಿದ ಅವರು, ಬೆಂಗಳೂರು ನಗರ ವಿಶ್ವವಿದ್ಯಾಲಯದ ಆಡಳಿತ ವಿಭಾಗದಲ್ಲಿ ಮಂಗಳವಾರ 3 ಗಂಟೆಗೆ ಈ ವರ್ಗದವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗುವುದು. ಅವಶ್ಯಕತೆ ಇದ್ದವರು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕೋರಿದರು.

ಸದ್ಯದ ಸಂದರ್ಭದಲ್ಲಿ ವಿದೇಶಕ್ಕೆ ಹೋಗಬೇಕಾದರೆ ಲಸಿಕೆ ಪಡೆಯಲೇಬೇಕು ಹಾಗೂ ಆ ಕುರಿತ ‘ಪ್ರಮಾಣ ಪತ್ರ’ವನ್ನು ಕಡ್ಡಾಯವಾಗಿ ಹೊಂದಿರಲೇಬೇಕು. ಹೀಗಾಗಿ ವಿದೇಶದಲ್ಲಿ ಉದ್ಯೋಗ ಹಾಗೂ ವಿದ್ಯಾಭ್ಯಾಸದಲ್ಲಿ ನಿರತರಾಗಿರುವವರಿಂದ ಲಸಿಕೆ ಬೇಡಿಕೆ ಇತ್ತು. ಈಗ ಸರ್ಕಾರ ಅವರ ಬೇಡಿಕೆಯನ್ನು ಪರಿಗಣಿಸಿದ್ದು, ಎಲ್ಲರಿಗೂ ಕೋವಿಶೀಲ್ಡ್ ಕೊಡಲಾಗುವುದು ಎಂದು ಡಿಸಿಎಂ ತಿಳಿಸಿದರು.

ಲಸಿಕೆ ಪಡೆಯಲು ಇಚ್ಛಿಸುವವರು ತಮ್ಮ ಆಧಾರ್ ಕಾರ್ಡ್, ಪಾಸ್‍ಪೋರ್ಟ್ ಹಾಗೂ ವಿದೇಶದಲ್ಲಿನ ತಮ್ಮ ಕೆಲಸ ಅಥವಾ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪೂರಕ ದಾಖಲೆಯನ್ನು ಹಾಜರುಪಡಿಸುವುದು ಕಡ್ಡಾಯ. ಅಲ್ಲದೆ, ಸದ್ಯಕ್ಕೆ ಕೋವಿಶೀಲ್ಡ್ ಮೊದಲ ಡೋಸ್ ಪಡೆದವರ ಎರಡನೇ ಡೋಸ್ ಅಂತರವನ್ನು ಇವರ ಅನುಕೂಲಕ್ಕಾಗಿ 12 ವಾರಗಳಿಂದ ಒಂದು ತಿಂಗಳಕ್ಕೆ ಕುಗ್ಗಿಸಲಾಗಿದೆ. ಇದು ಇವರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

ಮುಖ್ಯವಾಗಿ ವ್ಯಾಕ್ಸಿನ್ ನೀಡಿದ ಬಗ್ಗೆ ಇವರಿಗೆ ಸರಕಾರದಿಂದ ಪ್ರಮಾಣ ಪತ್ರ ಕೊಡಲಾಗುವುದು. ಅದು ಎರಡನೇ ಡೋಸ್ ಪಡೆದಾಕ್ಷಣ ನೀಡಲಾಗುತ್ತದೆ ಎಂದು ಡಿಸಿಎಂ ಹೇಳಿದರು.ಇದೇ ರೀತಿ ಆಯಾ ಜಿಲ್ಲೆಗಳಲ್ಲಿ ಕೂಡ ಈ ರೀತಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

The post ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್: ಅಶ್ವತ್ಥನಾರಾಯಣ್ appeared first on Public TV.

Source: publictv.in

Source link