ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹೊಸ ತಳಿಯ ಸೋಂಕು ಇನ್ನೂ ಕಂಡು ಬಂದಿಲ್ಲ. ಹೀಗಾಗಿ ಒಮಿಕ್ರಾನ್ ಇರೋ ದೇಶಗಳ ಪ್ರಜೆಗಳ ಪ್ರವೇಶಕ್ಕೆ ನಿರ್ಬಂಧ ಹೇರುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಆರ್.ಟಿ.ನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಮಿಕ್ರಾನ್ ಹೊಸ ತಳಿ ಬಹಳ ವೇಗವಾಗಿ ಹರಡುತ್ತದೆ ಅಂತಿದ್ದಾರೆ. ಈ ಕುರಿತು ಭಾರತದಾದ್ಯಂತ ಕಟ್ಟೆಚ್ಚರ ವಹಿಸಲಾಗ್ತಿದೆ. ರಾಜ್ಯದಲ್ಲಿ ಕೋವಿಡ್ ಟೆಸ್ಟ್ಗಳನ್ನು ಹೆಚ್ಚಿಸುವಂತೆ ಸೂಚಿಸಿದ್ದು ಏರ್ಪೋರ್ಟ್ ಗಳಲ್ಲಿ ಹಲವು ಕಟ್ಟೆಚ್ಚರ ವಹಿಸಲಾಗಿದೆ. ವಿದೇಶಿ ಪ್ರಜೆಗಳಿಗೆ ನೆಗೆಟಿವ್ ಬಂದ್ರೆ ಮಾತ್ರ ಬಿಡ್ತೇವೆ. ಇಲ್ಲಾಂದ್ರೆ ರಿಪೋರ್ಟ್ ನೆಗೆಟಿವ್ ಬರುವವರೆಗೂ ಏರ್ ಪೋರ್ಟ್ನಲ್ಲೇ ಇರಬೇಕು ಎಂದರು.
WHO ಕೂಡ ಎಚ್ಚರಿಕೆ ಕೊಟ್ಟಿದೆ, ಇದರ ಗುಣಲಕ್ಷಣ ಗೊತ್ತಿಲ್ಲ. ಕೇರಳದಿಂದ ಬಂದವರಿಂದ ಸೋಂಕು ಹೆಚ್ಚಾಗಿರುವುದು ಗೊತ್ತಾಗಿದೆ. ಮೂರು ದೇಶಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ. ಸರ್ಕಾರಿ ಆಫೀಸ್, ಮಾಲ್ ವರ್ಕರ್ ಗಳು ಡಬಲ್ ಡೋಸ್ ಪಡೆದಿರಬೇಕು. ಈ ಎರಡು ಕಡೆ ಲಸಿಕೆ ನೀಡುವ ವ್ಯವಸ್ಥೆ ಮಾಡುತ್ತೇವೆ. ಕೇರಳದಿಂದ ಬಂದವರಿಗೆ ಮರು ಪರೀಕ್ಷೆಗೆ ಸೂಚನೆ ಮಾಡಲಾಗಿದೆ ಎಂದರು.
ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿದೆ ಅನ್ನೋ ಸಂದರ್ಭದಲ್ಲಿ ಈ ಬೆಳವಣೆಗೆ ಆಗಿದೆ. ಮುಂದೆ ಯಾವ ರೀತಿ ಪರಿಣಾಮ ಆಗುತ್ತೆ ಅಂತ ಗೊತ್ತಿಲ್ಲ. ಆದರೆ ಬಹಳ ವೇಗವಾಗಿ ಹರಡುತ್ತೆ. ಈ ಸಂಬಂಧ ಪ್ರಧಾನಿ ಮೋದಿ ಅವರು ಈಗಾಗಲೇ ನಿನ್ನೆ ಸಭೆಯನ್ನ ಮಾಡಿದ್ದಾರೆ. ಜನರು ಕೋವಿಡ್ ಲಸಿಕೆಯನ್ನ ಪಡೆದುಕೊಳ್ಳಬೇಕು, ನಮ್ಮಲ್ಲಿ ಸದ್ಯ 80 ಲಕ್ಷ ಲಸಿಕೆ ಇದ್ದು ಯಾವುದೇ ಕೊರತೆ ಇಲ್ಲ ಅಂತಾ ತಿಳಿಸಿದರು.