ಬೆಂಗಳೂರು: ನಿನ್ನೆ ನಾಡಿನೆಲ್ಲೆಡೆ ಸಡಗರ, ಸಂಭ್ರಮದಿಂದ ದೀಪಾವಳಿ ಹಬ್ಬವನ್ನ ಆಚರಿಸಲಾಯಿತು. ಅದರಂತೆ ಉಡುಪಿಯ ಕಿದಿಯೂರಿನ ಐರಿನ್ ಅಂದ್ರಾದೆ ಮನೆಯಲ್ಲಿ ಸ್ಥಳೀಯರು ಜೊತೆಗೂಡಿ ಗೋಪೂಜೆ ಮಾಡಿದ್ದಾರೆ.
ವಿಶೇಷ ಅಂದರೆ ಕ್ರೈಸ್ತ ಬಾಂಧವರೊಬ್ಬರೂ ಕೂಡ ಬೆಳಕಿನ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ರು. ನಾಲ್ಕು ಗೋವುಗಳು ಹಾಗೂ ಸ್ಥಳೀಯರಿಗೆ ಸೇರಿದ 30ಕ್ಕೂ ಹೆಚ್ಚು ಗೋವುಗಳಿಗೆ ಪೂಜೆ ಮಾಡಲಾಗಿದೆ. ಹೆತ್ತ ಮಾತೆ ಮಗುವಿಗೆ ತಾತ್ಕಾಲಿಕವಾಗಿ ಹಾಲುಣಿಸಿದರೆ, ಗೋಮಾತೆ ಎಲ್ಲರಿಗೂ ಬದುಕಿನುದ್ದಕ್ಕೂ ಹಾಲುಣಿಸುತ್ತದೆ. ಆದ್ದರಿಂದ ಮಾತೆಗೂ ಮಿಗಿಲಾದ ಗೋಮಾತೆಯನ್ನು ಪೂಜಿಸುವ ರಕ್ಷಿಸುವ ಹೊಣೆ ನಮ್ಮದು ಅಂತಾ ಐರಿನ್ ಅಂದ್ರಾದೆ ಹೇಳಿದ್ದಾರೆ.
ವಿದ್ಯಾರ್ಥಿಗಳ ಮನೆಯಲ್ಲಿ ಶಿಕ್ಷಕರು ದೀಪಾವಳಿ ಆಚರಣೆ ಮಾಡಿದ ಅಪರೂಪದ ಘಟನೆ ಬೆಂಗಳೂರಿನ ತಾವರೆಕೆರೆಯಲ್ಲಿ ನಡೆದಿದೆ. ಹೊಸ ಬಟ್ಟೆ, ಕಲಿಕಾ ಸಾಮಗ್ರಿಗಳು, ಮಾಸ್ಕ್, ಪ್ರತಿ ವಿದ್ಯಾರ್ಥಿಗೂ ಒಂದೊಂದು ಗಿಡ, ಸಾಧಕರ ಹಾಗೂ ದೇಶಭಕ್ತರ ಪುಸ್ತಕ. ಹೀಗೆ ಹಲವಾರು ಉಡುಗೊರೆಗಳನ್ನು ವಿದ್ಯಾರ್ಥಿಗಳಿಗೆ ಕೊಟ್ಟು ಅವರ ಮನೆಯಲ್ಲೇ ತಾವರೆಕೆರೆ ಸರ್ಕಾರಿ ಶಾಲಾ ಶಿಕ್ಷಕರು ದೀಪಾವಳಿ ಆಚರಿಸಿದ್ದಾರೆ.
CRP ಚಿಕ್ಕವೀರಯ್ಯ ಹಾಗೂ ಅವರ ಶಿಕ್ಷಕ ಗೆಳೆಯರು ತಮ್ಮ ಹಳೆಯ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಹೋಗಿ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಸುಮಾರು 2 ವರ್ಷಗಳ ಹಿಂದೆ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಮಾಗಡಿಯ ಸರ್ಕಾರಿ ಬಾಲಕಿಯರ ಮಾದರಿ ಶಾಲೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಹೀಗೆ ಹಬ್ಬದ ಉಡುಗೊರೆ ನೀಡಿ ವಿಶೇಷವಾಗಿ ಹಬ್ಬವನ್ನು ಆಚರಿಸಿದ್ದಾರೆ.