ಬೆಂಗಳೂರು: ಇತ್ತೀಚೆಗಷ್ಟೇ ಸಿಎಂ ಯಡಿಯೂರಪ್ಪ ವಿದ್ಯುತ್​ ಚಾಲಿತ ಟ್ಯಾಕ್ಸಿ ಮತ್ತು ಬೈಕ್​ ಯೋಜನೆ (ಕರ್ನಾಟಕ ಎಲೆಕ್ಟ್ರಿಕ್​ ಬೈಕ್​ ಟ್ಯಾಕ್ಸಿ ಸ್ಕೀಮ್) ಗೆ ಚಾಲನೆ ನೀಡಿದ್ದರು. ಈ ಯೋಜನೆ ಜಾರಿಗೆ ಓಲಾ, ಊಬರ್, ಟ್ಯಾಕ್ಸಿ ಫಾರ್ ಶ್ಯೂರ್ ಚಾಲಕರ ಸಂಘ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿವೆ.

ಇಂದು ಸಾರಿಗೆ ಆಯುಕ್ತರ ಕಚೇರಿಗೆ ಜಾತಾ ನಡೆಸುವ ಮೂಲಕ ಪ್ರತಿಭಟನೆ ಮಾಡುತ್ತಿರುವ ಚಾಲಕರು ಈ ಯೋಜನೆ ಯಾವುದೇ ಕಾರಣಕ್ಕೂ ಜಾರಿಯಾಗಬಾರದು ಎಂದು ಪ್ತಿಭಟನೆ ನಡೆಸಿದ್ದಾರೆ.

ಮೊದಲೇ ಕೋವಿಡ್‌ನಿಂದ ನಾವು ಬೀದಿಪಾಲಾಗಿದ್ದೇವೆ, ಈಗ ಲಾಕ್​ಡೌನ್​ ಮುಗಿದಿದ್ದು ಚೇತರಿಸಿಕೊಳ್ಳಲು ಆರಂಭಿಸೋ ಮೊದಲೇ ಸರ್ಕಾರ ವಿದ್ಯುತ್ ಬೈಕ್ ಟ್ಯಾಕ್ಸಿಗೆ ಯೋಜನೆಗೆ ಅಸ್ತು ಎಂದಿದೆ. ಇದರಿಂದ ನಷ್ಟವಾಗಿ ಆತ್ಮಹತ್ಯೆ ಮಾಡಿಕೊಳ್ಳವ ಪರಿಸ್ಥಿತಿ ಎದುರಾಗಿದೆ ಆದ್ದರಿಂದ ಕೂಡಲೇ ಬೈಕ್ ಟ್ಯಾಕ್ಸಿ ಯೋಜನೆಯನ್ನು ಕೈಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: KEBTS -2021 ಯೋಜನೆಗೆ ಹಿನ್ನೆಡೆ: ಆಟೋ, ಟ್ಯಾಕ್ಸಿ ಸಂಘಟನೆಗಳ ವಿರೋಧ ಯಾಕೆ..?

ಸರ್ಕಾರ ಜಾರಿ ಮಾಡಿರುವ ಬೈಕ್ ಟ್ಯಾಕ್ಸಿ ಯೋಜನೆಯಿಂದ ಚಾಲಕರಿಗೆ ಸಮಸ್ಯೆ ಆಗುತ್ತದೆ. ಇದರಿಂದ ಯೆಲ್ಲೋ ಬೋರ್ಡ್ ಚಾಲಕರ ಕುಟುಂಬ ಬೀದಿಗೆ ಬೀಳಲಿದೆ. ಈಗಾಗಲೇ ಕೊರೊನಾದಿಂದಾಗಿ ಚಾಲಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಇಂತಹ ಸಮಯದಲ್ಲಿ ಈ ಯೋಜನೆ ಜಾರಿಯಾದರೆ ಚಾಲಕರ ಸ್ಥಿತಿ ಗಂಭೀರವಾಗಲಿದೆ ಎಂದು ಓಲಾ, ಊಬರ್​ ಅಸೋಸಿಯೇಷನ್​ ಅಧ್ಯಕ್ಷ ತನ್ವೀರ್​ ಪಾಷಾ ಹೇಳಿದ್ದಾರೆ.

ಇನ್ನೂ ಬೈಕ್ ಟ್ಯಾಕ್ಸಿ ಯೋಜನೆಗಾಗಿ ಬೈಕ್ ಸಂಸ್ಥೆಗಳ ಜೊತೆ ಲಾಬಿ ನಡೆಯುತ್ತಿದೆ ಎಂದು ಆರೋಪಿಸಿದ ಅವರು ಸರ್ಕಾರ ಹಾಗೂ ಆರ್​ಟಿಒ ಬೈಕ್ ಟ್ಯಾಕ್ಸಿ ಯೋಜನೆ ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನೂ ಓಲಾ, ಊಬರ್​ ಚಾಲಕರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದು ಸಂಸ್ಥೆಯ ಮೇಲೆ ಕ್ರಮ ತೆಗೆದುಕೊಳ್ಳುವುದು ಬಿಟ್ಟು ಚಾಲಕರ ಲೈಸೆನ್ಸ್​ನ್ನು ರದ್ದು ಮಾಡಲಾಗುತ್ತಿದೆ ಇದು ಖಂಡನೀಯ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಚಾಲಕರ ಹಿತ ಕಾಯುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಅನಿರ್ದಿಷ್ಟಾವಧಿಗೆ ಪ್ರತಿಭಟನೆ ಮಾಡಲಾಗುವದು ಎಂದು ಅಧ್ಯಕ್ಷ ತನ್ವೀರ್​ ಪಾಷಾ ಹೇಳಿದ್ದಾರೆ.

 

The post ವಿದ್ಯುತ್​ ಬೈಕ್​ ಟ್ಯಾಕ್ಸಿ ಯೋಜನೆ ರದ್ದು ಮಾಡುವಂತೆ ಚಾಲಕರ ಪ್ರತಿಭಟನೆ appeared first on News First Kannada.

Source: newsfirstlive.com

Source link