ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿಗೆ ಅಭಾವ; ದಸರಾ ಸಂಭ್ರಮಕ್ಕೂ ಕರೆಂಟ್ ಶಾಕ್..?

ಉಡುಪಿ: ರಾಜ್ಯಾದ್ಯಂತ ಕಲ್ಲಿದ್ದಲಿನ ಕೊರತೆಯಾಗಿದ್ದು, ಜನತೆಗೆ ಕರೆಂಟ್ ಇಲ್ಲದೆಯೇ, ಶಾಕ್ ಹೊಡೆಯುವ ಆತಂಕ ಎದುರಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಿಸುವ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರ, ಕಳೆದ ಎರಡುವರೆ ತಿಂಗಳಿಂದ ಸ್ಥಗಿತಗೊಂಡಿದೆ. ಹಾಗಾದರೆ ಇಂಧನ ಬಿಕ್ಕಟ್ಟಿಗೆ ಪರಿಹಾರವೇನು? ದಸರಾ ಹಬ್ಬದ ವೇಳೆ ಕರೆಂಟು ಸರಬರಾಜಿನಲ್ಲಿ ವ್ಯತ್ಯಯ ಆಗುತ್ತಾ?

ರಾಜ್ಯದ ವಿವಿಧ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲಿನ ಕೊರತೆ ಅನುಭವಿಸುತ್ತಿವೆ. ರಾಯಚೂರು ಬಳ್ಳಾರಿಯ ಜೊತೆಗೆ ಉಡುಪಿಯ ಯುಪಿಸಿಯಲ್ ಘಟಕಗಳಲ್ಲೂ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಕಳೆದ ಎರಡುವರೆ ತಿಂಗಳಿಂದ ಯುಪಿಸಿಎಲ್ ನ ಎರಡೂ ಘಟಕಗಳು ಕಾರ್ಯ ಸ್ಥಗಿತವಾಗಿವೆ. 1200 ಮೆಗಾವ್ಯಾಟ್ ಸಾಮರ್ಥ್ಯದ ಈ ಸ್ಥಾವರಕ್ಕೆ, ಕಲ್ಲಿದ್ದಲು ಸರಬರಾಜಾಗುತ್ತಿಲ್ಲ. ಮೇಲಾಗಿ ಸರಕಾರದಿಂದ ಪಾವತಿಯಾಗಬೇಕಾದ 2,500 ಕೋಟಿ ರೂಪಾಯಿ ಬಾಕಿ ಇದೆ ಎನ್ನಲಾಗಿದೆ.

ಹಾಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ನಂತರ ವಿದ್ಯುತ್ ಒಪ್ಪಂದದ ಪ್ರಕಾರ ಪಾವತಿ ಮಾಡಲಾಗಿದೆ. ಆದರೆ ಅದಕ್ಕೂ ಮೊದಲಿನ ಬಾಕಿ ಹಣ ಪಾವತಿಯಾಗಬೇಕಿದೆ. ಈ ಎಲ್ಲಾ ಕಾರಣಗಳಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ ಎನ್ನಲಾಗಿದೆ. ಯುಪಿಸಿಎಲ್ ಕಾರ್ಯ ಸ್ಥಗಿತಗೊಂಡಿರುವುದರಿಂದ ವಿದ್ಯುತ್ ಸರಬರಾಜು ವ್ಯವಸ್ಥೆ ಅಸ್ತವ್ಯಸ್ತವಾಗಿದ್ದರೂ ಸ್ಥಳೀಯ ಪರಿಸರ ಹೋರಾಟಗಾರರು, ಯುಪಿಸಿಎಲ್ ಸ್ಥಗಿತಗೊಂಡಿದ್ದು ಒಳ್ಳೆಯದಾಯಿತು. ನಮ್ಮ ಜಾಗದಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ಬೇರೆ ಜಾಗಕ್ಕೆ ಕರೆಂಟ್ ಕೊಡುತ್ತಾರೆ, ಹೀಗಾಗಿ ಸರ್ಕಾರ ಹೊಸತನದ ಚಿಂತನೆ ಮಾಡಬೇಕು ಅಂತ ಒತ್ತಾಯಿಸಿದ್ದಾರೆ.

 

ಇನ್ನು ರಾಜ್ಯದಲ್ಲಿ ಉಂಟಾಗಿರುವ ಕಲ್ಲಿದ್ದಲು ಕೊರತೆಯ ಬಗ್ಗೆ ಇಂಧನ ಸಚಿವ ವಿ ಸುನೀಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಮಳೆಗಾಲದಲ್ಲಿ ದೇಶಾದ್ಯಂತ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಲಿದ್ದಲಿನ ಅಭಾವ ತಲೆದೋರಿದೆ. ಇಂದು ಬೆಳಿಗ್ಗೆ ಕೇಂದ್ರ ಸಚಿವರ ಜೊತೆ ಈ ಕುರಿತು ಮಾತುಕತೆ ನಡೆಸಿದ್ದೇನೆ. ಒರಿಸ್ಸಾ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಕಲ್ಲಿದ್ದಲು ಪೂರೈಕೆ ಮಾಡುವಂತೆ ಮನವಿ ಮಾಡಿದ್ದೇನೆ. ನಾಲ್ಕೈದು ದಿನದಲ್ಲಿ ಎಲ್ಲ ಸರಿಯಾಗುತ್ತದೆ ಎಂಬ ಭರವಸೆ ಕೇಂದ್ರ ಸಚಿವರಿಂದ ಸಿಕ್ಕಿದೆ. ಆತಂಕಕ್ಕೊಳಗಾಗುವ ಪರಿಸ್ಥಿತಿ ಕರ್ನಾಟಕದಲ್ಲಿಲ್ಲ. ರಾತ್ರಿ ಕೇಂದ್ರ ಸಚಿವರ ಜೊತೆ ಇನ್ನೊಮ್ಮೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.

ಸಚಿವರು ನೀಡಿದ ಭರವಸೆ ನಿಜವಾದರೆ ಆತಂಕ ಇಲ್ಲ, ಆದರೆ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯ ಮುಂದುವರಿದರೆ, ರಾಜ್ಯ ಕತ್ತಲೆಯ ಕೂಪಕ್ಕೆ ಹೋಗಬಹುದು ಎಂಬ ಭಯ ಜನರನ್ನು ಕಾಡುತ್ತಿದೆ.
ವಿಶೇಷ ವರದಿ: ದಿನೇಶ್ ಕಾಶಿಪಟ್ಣ, ನ್ಯೂಸ್ ಫಸ್ಟ್, ಉಡುಪಿ

The post ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿಗೆ ಅಭಾವ; ದಸರಾ ಸಂಭ್ರಮಕ್ಕೂ ಕರೆಂಟ್ ಶಾಕ್..? appeared first on News First Kannada.

News First Live Kannada

Leave a comment

Your email address will not be published. Required fields are marked *