ಬೆಂಗಳೂರು: ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣಾ ಕಣ ರಂಗೇರುತ್ತಿದೆ. ಸ್ಥಳೀಯ ಸಂಸ್ಥೆಗಳಿಂದ ನಡೆಯುವ 25 ಪರಿಷತ್ ಸ್ಥಾನಗಳಿಗೆ ವೇದಿಕೆ ಸಿದ್ಧವಾಗಿದೆ. ಮೇಲ್ಮನೆಯ ಮಿನಿ ಫೈಟ್ನಲ್ಲಿ ಮೂರು ಪಕ್ಷಗಳು ಗೆಲುವಿನ ಜಿದ್ದಿಗೆ ಬಿದ್ದಿವೆ. ಈ ಮಧ್ಯೆ ಕಾಂಗ್ರೆಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಜೆಡಿಎಸ್ ಭಾರೀ ರಣತಂತ್ರವೊಂದನ್ನ ಹೆಣೆದಿದೆ.
ಈಗಾಗಲೇ ದಳದ ಬೆಂಬಲ ಕೋರಿರುವ ಬಿಜೆಪಿ ನಾಯಕರು
ರಾಜ್ಯದಲ್ಲಿ ವಿಧಾನಪರಿಷತ್ ಉಪಕದನಕ್ಕೆ ಮೂರು ಪಕ್ಷಗಳು ಸಜ್ಜಾಗುತ್ತಿವೆ. ಈಗಾಗಲೇ ಬಿಜೆಪಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಫೈನಲ್ ಮಾಡಿದೆ. ಇತ್ತ ಕಾಂಗ್ರೆಸ್ ಕೂಡಾ ನಿನ್ನೆ 20 ಸ್ಥಾನಗಳಿಗೆ ಕದನ ಕಲಿಗಳಿಗೆ ಟಿಕೆಟ್ ಫಿಕ್ಸ್ ಮಾಡಿದೆ. ಆದ್ರೀಗ ದಳಪತಿಗಳ ನಡೆಯೇ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕೇವಲ 8 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಲು ನಿರ್ಧರಿಸಿದೆ. ಹೀಗಾಗಿ ಪರಿಷತ್ ಮಿನಿಫೈಟ್ನಲ್ಲಿ ಬಿಜೆಪಿ ಜೊತೆ ಕೈಜೋಡಿಸಲು ದಳಪತಿಗಳು ಸ್ಕೆಚ್ ಹಾಕಿದ್ದಾರಾ ಎಂಬ ಪ್ರಶ್ನೆ ಮೂಡಿಸಿದೆ. ಇದರ ಜೊತೆಗೆ ಮೇಲ್ಮನೆ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ದಳಪತಿಗಳ ಬಳಿ ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಮೇಲ್ಮನೆ ಕುಸ್ತಿ.. ಆಗುತ್ತಾ ದೋಸ್ತಿ?
ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ಚುನಾವಣೆ ನಡೆಯುತ್ತಿದ್ದು, ಎಂಟು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆಸುವುದಾಗಿ ಜೆಡಿಎಸ್ ನಾಯಕರು ಹೇಳಿದ್ದಾರೆ. ಈಗಾಗಲೇ ಮಾಜಿ ಸಿಎಂ ಬಿಎಸ್ವೈ ಜೆಡಿಎಸ್ ಸ್ಪರ್ಧಿಸದ ಕ್ಷೇತ್ರಗಳಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ದಳಪತಿಗಳ ಜೊತೆ ಚರ್ಚಿಸುವುದಾಗಿಯೂ ಹೇಳಿದ್ದಾರೆ.
ಮೇಲ್ಮನೆ ಮಿನಿ ಸಮರದಲ್ಲಿ ಜೆಡಿಎಸ್ ಬಿಜೆಪಿ ಜೊತೆ ಕೈ ಜೋಡಿಸೋ ಬಗ್ಗೆ ಬಿಜೆಪಿ ಭೀಷ್ಮ ಏನೋ ಸುಳಿವು ನೀಡಿದ್ದಾರೆ. ಆದ್ರೆ, ತಮ್ಮ ನಡೆಯ ಬಗ್ಗೆ ಜೆಡಿಎಸ್ ನಾಯಕರು ಇನ್ನೂ ಯಾವುದೇ ಗುಟ್ಟನ್ನ ಬಿಟ್ಟುಕೊಟ್ಟಿಲ್ಲ.
ದಳಪತಿ ನಿಗೂಢ ನಡೆ!
- ಚರ್ಚೆ 1 : ಕಾಂಗ್ರೆಸ್ ಕಟ್ಟಿ ಹಾಕಲು ಬಿಜೆಪಿ ಜೊತೆ ದಳ ಕೈ ಜೋಡಿಸುತ್ತಾ?
- ಚರ್ಚೆ 2 : ಅಭ್ಯರ್ಥಿ ಕಣಕ್ಕಿಳಿಸದ 17-19 ಕ್ಷೇತ್ರಗಳಲ್ಲಿ ದಳ ನಿರ್ಧಾರ ಏನು?
- ಚರ್ಚೆ 3 : ಹೆಚ್ಚು ಸ್ಥಾನ ಗೆಲ್ಲುವ ಲೆಕ್ಕಾಚಾರದಲ್ಲಿರುವ ಕೈಗೆ ಠಕ್ಕರ್ ಕೊಡುತ್ತಾ?
- ಚರ್ಚೆ 4 : ಪರೋಕ್ಷ ಬೆಂಬಲ ಘೋಷಿಸ್ತಾರಾ? ಒಳ ಒಪ್ಪಂದ ಆಗುತ್ತಾ?
- ಚರ್ಚೆ 5 : ಈ ಬೆಂಬಲದಿಂದ ಜೆಡಿಎಸ್ಗೆ ಸಿಗುವ ಲಾಭವಾದರೂ ಏನು?
ರಾಜ್ಯದಲ್ಲಿ ಕಾಂಗ್ರೆಸ್ನ ಕಟ್ಟಿ ಹಾಕಲು ಬಿಜೆಪಿ ಜೊತೆ ದಳ ಕೈ ಜೋಡಿಸುತ್ತಾ ಎಂಬ ಪ್ರಶ್ನೆ ಮೂಡಿದೆ. ಅಲ್ಲದೇ ಅಭ್ಯರ್ಥಿಗಳನ್ನ ಕಣಕ್ಕಿಳಿಸದ 17-19 ಕ್ಷೇತ್ರಗಳಲ್ಲಿ ದಳಪತಿಗಳ ನಿರ್ಧಾರ ಏನು ಅನ್ನೋದು ಇನ್ನೂ ಬಹಿರಂಗವಾಗಿಲ್ಲ. ಈ ಮಧ್ಯೆ ಹೆಚ್ಚು ಸ್ಥಾನ ಗೆಲ್ಲುವ ಲೆಕ್ಕಾಚಾರದಲ್ಲಿರುವ ಕೈಗೆ ಠಕ್ಕರ್ ಕೊಡುತ್ತಾ? ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ಘೋಷಿಸ್ತಾರಾ? ಒಳ ಒಪ್ಪಂದ ಏನಾದ್ರೂ ಆಗುತ್ತಾ?ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ರಿಂಗಣಿಸುತ್ತಿದೆ. ಒಂದ್ವೇಳೆ ಬಿಜೆಪಿಗೆ ಬೆಂಬಲ ನೀಡಿದ್ರೆ ಇದರಿಂದ ಜೆಡಿಎಸ್ಗೆ ಸಿಗುವ ಲಾಭವಾದರೂ ಏನು ಎಂಬ ಕೌತುಕವೂ ಇದ್ದೇ ಇದೆ.
ಒಟ್ಟಾರೆ, ಮೇಲ್ಮನೆಯ ಮಿನಿ ಆಟದಲ್ಲಿ ಕಾಂಗ್ರೆಸ್ಗೆ ಚೆಕ್ ಮೇಟ್ ಇಡೋಕೆ ದಳಪತಿಗಳು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಮಲಕ್ಕೆ ದಳಪತಿಗಳು ಸಪೋರ್ಟ್ ನೀಡ್ತಾರಾ ಅನ್ನೋದೆ ಮುಂದಿರೋ ಪ್ರಶ್ನೆ.
ವಿಶೇಷ ವರದಿ: ಹರೀಶ್ ಕಾಕೋಳ್, ನ್ಯೂಸ್ಫಸ್ಟ್, ಬೆಂಗಳೂರು