ಮಂಗಳೂರು: ಲಾಕ್‍ಡೌನ್ ಅವಧಿಯಲ್ಲಿ ಜನಸಾಮಾನ್ಯರಿಗೆ ಉದ್ಯೋಗವಿಲ್ಲದೆ, ವ್ಯಾಪಾರವಿಲ್ಲದೆ ಬದುಕು ನಡೆಸಲು ಅಸಾಧ್ಯವಾಗದಂತಹ ಪರಿಸ್ಥಿಯಲ್ಲಿರುವಾಗ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸೇರಿದಂತೆ ಗೃಹ ಉಪಯೋಗಿ ವಸ್ತಗಳ ವಿಪರೀತ ಬೆಲೆ ಏರಿಕೆ ಮಾಡಿದೆ. ಇದರಿಂದಾಗಿ ದೇಶದ ಜನರ ಬದುಕು ತತ್ತರಗೊಂಡಿದೆ ಎಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆ ಖಂಡಿಸಿ ಸಿಪಿಐಎಂ ಮಂಗಳೂರು ನಗರ ಸಮಿತಿಯಿಂದ ನಡೆಸುವ ವಾರಾಚರಣೆಯ ಉದ್ಘಾಟನೆಯ ಭಾಗವಾಗಿ ಮಂಗಳೂರಿನ ಬಜಾಲ್ ಪಕ್ಕಲಡ್ಕದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಹೈರಾಣಾಗಿದ್ದರೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಮುಖಂಡರು, ಮಾಜಿ ಮಹಾನಗರ ಪಾಲಿಕೆ ಸದಸ್ಯೆ ಜಯಂತಿ.ಬಿ.ಶೆಟ್ಟಿ ಅವರು ಅಣಕು ಒಲೆಗೆ ಬೆಂಕಿ ಹಚ್ಚಿ, ಬಿಸಿ ನೀರು ಕಾಯಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು. ಈ ವೇಳೆ ಡಿವೈಎಫ್‍ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಿಪಿಐಎಂ ಕಂಕನಾಡಿ ಬಿ ಶಾಖೆಯ ಕಾರ್ಯದರ್ಶಿ ಉದಯ್ ಕುಂಟಲಗುಡ್ಡೆ, ಸ್ಥಳೀಯ ಸಿಪಿಐಎಂ ಯುವ ನಾಯಕರಾದ ದೀಪಕ್ ಬಜಾಲ್, ಧೀರಾಜ್, ನೂರುದ್ದೀನ್, ಸೋನಿಲ್, ಅಶೋಕ್ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.

The post ವಿಪರೀತ ಬೆಲೆ ಏರಿಕೆಯಿಂದ ಜನರ ಬದುಕು ತತ್ತರ- ಸಿಪಿಐಎಂ appeared first on Public TV.

Source: publictv.in

Source link