ಭಾರತದಲ್ಲಿ ಬರೋಬ್ಬರಿ 13,500 ಕೋಟಿ ರೂಪಾಯಿ ವಂಚನೆ ಎಸಗಿರೋ ಆರೋಪಿಯೊಬ್ಬ ಕೆರೆಬಿಯನ್​ ರಾಷ್ಟ್ರ ಆ್ಯಂಟಿಗುವಾದಲ್ಲಿ ಕಿಂಗ್​ ಸೈಜ್ ಲೈಫ್​ ಕಳೆಯುತ್ತಿದ್ದ. ಆದ್ರೆ ಇದ್ದಕ್ಕಿದ್ದಂತೆ ಆ ದೇಶದಿಂದ ಕಣ್ಮರೆಯಾದ ಆತ, ಈಗ ಮತ್ತೊಂದು ದೇಶದಲ್ಲಿ ಬಂಧಿತನಾಗಿದ್ದಾನೆ. ಯಾವುದೇ ರೋಚಕ ಸಿನಿಮಾಗೂ ಕಡಿಮೆ ಇಲ್ಲದ ಈ ಸ್ಟೋರಿಯನ್ನ ನೀವು ನೋಡಲೇ ಬೇಕು.

ಕೊರೊನಾ ನಿಯಂತ್ರಣದ ಹೊರತಾಗಿಯೂ ಆ ಏರ್​ಪೋರ್ಟ್​ನಲ್ಲಿ ಚಾರ್ಟೆಡ್ ಫ್ಲೈಟ್ ಒಂದು ಬಂದಿಳಿದ ತಕ್ಷಣ.. ದೊಡ್ಡ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿ ಬಿಡುತ್ತೆ. ಅದು ಅಂತಿಂಥ ಚಾರ್ಟೆಡ್ ಫ್ಲೈಟ್ ಅಲ್ಲ. ಆ ಫ್ಲೈಟ್​ಗೆ ತನ್ನದೇ ಆದ ಇತಿಹಾಸ ಇದೆ. ಇನ್​ಫ್ಯಾಕ್ಟ್ ಆ ಫ್ಲೈಟ್​ಗಲ್ಲ ಬದಲಿಗೆ, ಅಂಥದ್ದೇ ಒಂದು ಫ್ಲೈಟ್​​​ ಬಳಸಿದ್ದ ಏಜನ್ಸಿಗಳ ಬಗ್ಗೆ. ಅದೂ ಕೂಡ R&AW ಅಲಿಯಾಸ್ ಭಾರತೀಯ ಹೆಮ್ಮೆಯ ರೀಸರ್ಚ್​ ಅಂಡ್ ಡೆವಲಪ್​ಮೆಂಟ್ ವಿಂಗ್​ ಬಗ್ಗೆ.

ಎಲ್ಲಿಯ R&AW.. ಎಲ್ಲಿಯ ಚಾರ್ಟೆಡ್ ಫ್ಲೈಟ್? ಅಷ್ಟಕ್ಕೂ ಆ ಫ್ಲೈಟ್ ಹೋಗಿದ್ದಾದ್ರೂ ಎಲ್ಲಿಗೆ? ಹೋಗಿದ್ದಾದ್ರೂ ಯಾಕೆ? ಆ ಫ್ಲೈಟ್ ಕಳಿಸಿದ್ದಾದ್ರೂ ಯಾರು? ನೋಡೋಕೆ ಸ್ಮಾರ್ಟ್​ ಆಗಿ, ಬಿಳಿಯಾಗಿ ಇರೋ ಈ ಪುಟ್ಟ ಫ್ಲೈಟ್ ಇಂಥ ಟೆರರ್ ಕ್ರಿಯೇಟ್​ ಮಾಡ್ತಿರೋದಾದ್ರೂ ಯಾಕೆ? ಹೀಗೆ ಪ್ರಶ್ನೆ ಮೂಡಿದ ಹಾಗೆ.. ಬರೋಬ್ಬರಿ 13,500 ಕೋಟಿ ರೂಪಾಯಿ ವಂಚನೆಯ ಕೇಸ್ ಒಂದು ಇದ್ದಲ್ಲಿಂದಲೇ ಕಿಲ ಕಿಲ ನಗಲು ಆರಂಭಿಸಿ ಬಿಡುತ್ತೆ.

ಚಾರ್ಟೆಡ್ ಫ್ಲೈಟ್ ಲ್ಯಾಂಡಿಂಗ್ ಹಿಂದಿದೆ ರೋಚಕ ಸ್ಟೋರಿ
13,500 ಕೋಟಿ ರೂಪಾಯಿ ಹಗರಣದ ಕಿಂಗ್​​ಪಿನ್ ಕಹಾನಿ

 ಡೊಮಿನಿಕಾದಲ್ಲಿ ಮೇ 29, 2021ರಂದು ಚಾರ್ಟೆಡ್​ ಫ್ಲೈಟ್ ಲ್ಯಾಂಡ್​ ಆಗಿದ್ದರೂ, ಈ ಕಹಾನಿ ಶರುವಾಗಿದ್ದು ಮಾತ್ರ 2018 ರಲ್ಲಿ. ಹೌದು.. 2018ರಲ್ಲಿ ದೇಶದ ಎರಡನೇ ಅತ್ಯಂತ ದೊಡ್ಡ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಆಗಿರೋ ಪಂಜಾಬ್ ನ್ಯಾಷನಲ್ ಬ್ಯಾಂಕ್, ಅತ್ಯಂತ ದೊಡ್ಡ ಮೋಸ ನಡೆದಿರೋದನ್ನ ಬಯಲು ಮಾಡಿತ್ತು. ತನ್ನ ಮುಂಬೈನ ಒಂದೇ ಒಂದು ಬ್ರಾಂಚ್​ನಲ್ಲಿ ಬರೋಬ್ಬರಿ 11,400 ಕೋಟಿ ರೂಪಾಯಿ ಮೋಸದ ವ್ಯವಹಾರ ನಡೆದಿರೋದನ್ನ ಬಯಲಿಗೆ ತಂದು ಭಾರತೀಯ ಬ್ಯಾಂಕಿಂಗ್ ಸೆಕ್ಟರ್​ನಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿ ಬಿಟ್ಟಿತ್ತು. ಜೊತೆಗೆ ಬೇರೆ ಬೇರೆ ಬ್ರಾಂಚ್​ಗಳಲ್ಲಿ ಕೂಡ ಮೋಸ ದಾಟ ನಡೆದಿರೋದನ್ನ ಅದು ಪತ್ತೆ ಹಚ್ಚಿತ್ತು. ಯಾವಾಗ ಈ ಹಗರಣ ಬಯಲಿಗೆ ಬಂತೋ.. ಅದರ ಕಿಂಗ್​ ಪಿನ್​ಗಳು ಹಾಗೂ ಪ್ರಮುಖ ಆರೋಪಿಗಳಾದ ನೀರವ್ ಮೋದಿ ಹಾಗೂ ಆತನ ಸಂಬಂಧಿ ಮೇಹುಲ್ ಚೋಕ್ಸಿ ರಾತ್ರೋ ರಾತ್ರಿ ಕಣ್ಮರೆಯಾಗಿದ್ರು.

ಅದ್ರಲ್ಲೂ ನೀರವ್ ಮೋದಿ ಬೇರೆ ಬೇರೆ ದೇಶ ಸುತ್ತಾಡಿ ಈಗ ಇಂಗ್ಲೆಂಡ್​ನಲ್ಲಿ ಬಂಧಿಯಾಗಿದ್ದರೆ, ಬರೋಬ್ಬರಿ 13,500 ಕೋಟಿ ರೂಪಾಯಿ ಹಗರಣದ ಆರೋಪ ಹೊತ್ತ ಮೇಹುಲ್ ಚೋಕ್ಸಿ ಮಾತ್ರ ತನ್ನದೇ ಆಟ ಶುರುವಿಟ್ಟುಕೊಂಡಿದ್ದ. ಇಂದು ಆತ ಇರೋದು ಎಲ್ಲಿ ಗೊತ್ತಾ..? ಡೊಮಿನಿಕಾದ ಚೀನಾ-ಡೊಮಿನಿಕಾ ಫ್ರೆಂಡ್​ಶಿಪ್ ಆಸ್ಪತ್ರೆಯಲ್ಲಿ.

ಈಗ ನಿಮಗೆ ಒಂದು ಲಿಂಕ್ ಸಿಕ್ಕಿರುತ್ತೆ. ಯಾಕಂದ್ರೆ ಡೊಮಿನಿಕಾದಲ್ಲಿ ಆ ಚಾರ್ಟೆಡ್ ಫ್ಲೈಟ್ ಇಳಿಯೋದಕ್ಕೂ ಅದಕ್ಕೆ ಸಂಬಂಧಿಸಿದಂತೆ R&AW ಹೆಸರು ಕೇಳಿ ಬಂದಿದ್ದಕ್ಕೂ, ಅಷ್ಟೇ ಅಲ್ಲ.. 13,500 ಕೋಟಿ ರೂಪಾಯಿ ಹಗರಣದ ಆರೋಪಿ ಮೆಹುಲ್ ಚೋಕ್ಸಿ ಡೊಮಿನಿಕಾದಲ್ಲಿ ಇರೋದಕ್ಕೂ. ಆದ್ರೆ ಪಿಕ್ಚರ್ ಇನ್ನೂ ಬಾಕಿ ಇದೆ..!

 ಇಲ್ಲಿ ಲಿಂಕ್ ಸಿಕ್ಕರೂ ಇದಕ್ಕೂ ರೋಚಕವಾದ ಸಂಗತಿಯೊಂದಿದೆ. ಅದು ಏನು ಅಂತಾ ನೋಡೋದಾದ್ರೆ, ಮೆಹುಲ್ ಚೋಕ್ಸಿ 2018ರಲ್ಲಿ ಭಾರತದಿಂದ ಎಸ್ಕೇಪ್ ಆಗಿದ್ದರೂ, ಆತ ಹೋಗಿದ್ದು ಡೊಮಿನಿಕಾಗಲ್ಲ. ಬದಲಿಗೆ ಇನ್ನೊಂದು ಕೆರೆಬಿಯನ್ ರಾಷ್ಟ್ರ ಆ್ಯಂಟಿಗುವಾಕ್ಕೆ. ಆ ದೇಶದಲ್ಲಿ ತನ್ನ ಗರ್ಲ್​ಫ್ರೆಂಡ್ಸ್ ಹಾಗೂ ಫ್ಯಾಮಿಲಿ ಜೊತೆ ಝುಮ್ ಅಂತಾ ಕಿಂಗ್ ಸೈಜ್ ಜೀವನ ನಡೆಸುತ್ತಿದ್ದ ಚೋಕ್ಸಿ, ಆ ರಾಷ್ಟ್ರದ ವಿಪಕ್ಷಕ್ಕೂ ಸಾಕಷ್ಟು ಫಂಡ್ ನೀಡಿದ್ದಾನೆ ಅಂತಾ ಸ್ವತಃ ಆ್ಯಂಟಿಗುವಾ ಪ್ರಧಾನಿ ಗಾಸ್ಟನ್ ಬ್ರೌನಿಯೇ ಇತ್ತೀಚೆಗೆ ತಾನೆ ನೇರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ ಆ್ಯಂಟಿಗುವಾದಲ್ಲಿ ಸಾಕಷ್ಟು ಹೂಡಿಕೆ ಮಾಡಿ ಅಲ್ಲಿನ ನಾಗರಿಕತ್ವ ಕೂಡ ಪಡೆದಿದ್ದ. ಆದ್ರೆ ಅದು ಪರ್ಮನೆಂಟ್ ಆಗಿರಲಿಲ್ಲ ಅಂತ ಅಲ್ಲಿನ ಸರ್ಕಾರವೇ ಈಗ ಹೇಳ್ತಿದೆ. ಹಾಗಿದ್ದರೆ.. ಅಷ್ಟು ಆರಾಮಾಗಿ, ಕಿಂಗ್ ಸೈಜ್ ಲೈಫ್​ ಸ್ಟೈಲ್​ನಲ್ಲಿ ಆ್ಯಂಟಿಗುವಾದಲ್ಲಿ ಇದ್ದ ಚೋಕ್ಸಿ, ಡೊಮಿನಿಕಾಗೆ ಯಾಕೆ ಬಂದ? ಹೇಗೆ ಬಂದ? ಅಂತಾ ನೋಡೋದಾದ್ರೆ.. ಇಲ್ಲಿ ತೆರೆದುಕೊಳ್ಳುವ ರೋಚಕ ಸ್ಟೋರಿ ಯಾವ ಜೇಮ್ಸ್​ ಬಾಂಡ್ ಚಿತ್ರಕ್ಕೂ ಕಮ್ಮಿ ಇಲ್ಲ.

ಇದು ಅಂತಿಂಥ ಸ್ಟೋರಿ ಅಲ್ಲಮ ಇದೊಂಥರ ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರದಂತೆ. ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಕಾದಂಬರಿಯಂತೆ. ಗುಪ್ತಚರರ ಖತರ್ನಾಕ್ ಪ್ಲಾನ್​ನಂತೆ. ಆದ್ರೆ ಎಂದಿಗೂ ತನ್ನ ಯಾವ ಕಾರ್ಯವನ್ನೂ ಸ್ಪೈ ಏಜನ್ಸಿಗಳು ಒಪ್ಪಿಕೊಳ್ಳದೇ ಇರೋದ್ರಿಂದಾಗಿ ಬಿಟ್ಟ ಸ್ಥಳ ತುಂಬುತ್ತಾ.. ಸತ್ಯ ಸಂಗತಿ ಸಿಕ್ಕರೂ ಕಾಲ್ಪನಿಕ ಅಂತ ನಮ್ಮನ್ನೇ ನಾವು ಸಮಾಧಾನ ಮಾಡಿಕೊಳ್ಳುವಂತೆ ಮಾಡುವ ಡಿಟೆಕ್ಟಿವ್ ತನಿಖಾ ವರದಿಯಂತೆ ಇರೋ ಸ್ಟೋರಿ. ಇದನ್ನ ನಾವು ಹೇಳೋದಲ್ಲ You will Feel it.

25-05-2021, ಆ್ಯಂಟಿಗುವಾ
ಕೆರೆಬಿಯನ್​​ನ ಈ ಪುಟ್ಟ ರಾಷ್ಟ್ರದಿಂದ ಭಾರತೀಯರ ಕಿವಿ ನಿಮಿರುವಂತೆ ಮಾಡುವ ಬಿಗ್ ಬ್ರೇಕಿಂಗ್ ಸುದ್ದಿಯೊಂದು ಹೊರ ಬಿದ್ದಿತ್ತು. ಈ ದೇಶದಲ್ಲಿ ತಲೆಮರೆಸಿಕೊಂಡಿದ್ದ, ಪಂಜಾಬ್​ ನ್ಯಾಷನಲ್​ ಬ್ಯಾಂಕಿಗೆ 13,500 ಕೋಟಿ ರೂಪಾಯಿ ಮೋಸ ಮಾಡಿದ್ದ ಆರೋಪಿ ಮೆಹುಲ್ ಚೋಕ್ಸಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿ ಬಿಡ್ತಾನೆ. ಶಾಪಿಂಗ್ ಮಾಲ್​ ಒಂದರಲ್ಲಿ ಕೊನೆ ಬಾರಿಗೆ ಈತ ಕಾಣಿಸಿಕೊಂಡಿದ್ದು ಬಿಟ್ಟರೆ, ಆತ ಎಲ್ಲಿಗೆ ಹೋದ? ಅನ್ನೋದು ಯಾರಿಗೂ ತಿಳಿಯಲ್ಲ. ಆ ಸುದ್ದಿ ಭಾರತದಲ್ಲಿ ಸಾಕಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿಸಿ ಬಿಡುತ್ತೆ. ಆತನಿಗಾಗಿ ಇಂಟರ್​ಪೋಲ್​ಗೂ ಹುಡುಕಿಕೊಡುವಂತೆ ಆ್ಯಂಟಿಗುವಾ ಸರ್ಕಾರ ಮನವಿ ಮಾಡಿಕೊಳ್ಳುತ್ತೆ. ಇಂಥ ವೇಳೆಯಲ್ಲಿಯೇ.. ಆತನನ್ನು ಅಪಹರಿಸಲಾಗಿದೆ ಅನ್ನೋ ವಾದವೂ ಕೇಳಿ ಬರುತ್ತೆ. ಇದನ್ನ ಆ್ಯಂಟಿಗುವಾ ಪೊಲೀಸರು ಅಲ್ಲಗಳೆಯುತ್ತಾರೆ. ಹಾಗಿದ್ರೆ ಮೆಹುಲ್ ಚೋಕ್ಸಿ ಏನಾದ? ಎಲ್ಲಿಗೆ ಹೋದ? ಹೀಗೆ ಪ್ರಶ್ನೆಗಳು ಮೂಡುತ್ತಿರೋವಾಗಲೇ..

26-05-2021, ಡೊಮಿನಿಕಾ
ಆ್ಯಂಟಿಗುವಾದಲ್ಲಿ ಮಿಸ್ ಆಗಿದ್ದ ಮೆಹುಲ್ ಚೋಕ್ಸಿ, ಡೊಮಿನಿಕಾದಲ್ಲಿ ಅಕ್ರಮವಾಗಿ ಪ್ರವೇಶಿಸಿದ ಹಿನ್ನೆಲೆಯಲ್ಲಿ ಅರೆಸ್ಟ್ ಆಗ್ತಾನೆ. ಆ್ಯಂಟಿಗುವಾದಿಂದ Calliope of Arne ಅನ್ನೋ ಯಾಚ್​​ನಲ್ಲಿ ಈತ ಡೊಮಿನಿಕಾಕ್ಕೆ ಬರ್ತಾನೆ. ಹಾಗೆ ಬರ್ತಿದ್ದ ಹಾಗೆ ಸ್ಥಳೀಯ ಪೊಲೀಸರು ಅವನನ್ನು ವಶಕ್ಕೆ ಪಡಿತಾರೆ. ಆದ್ರೆ, ಅದಾಗಲೇ ಆತ ತಾನಾಗಿಯೇ ಬಂದಿದ್ದಾ? ಅಥವಾ ಯಾರಾದ್ರೂ ಎತ್ತಾಕಿಕೊಂಡು ಬಂದಿದ್ದಾ? ಅನ್ನೋ ಪ್ರಶ್ನೆಗಳು ಗಾಢವಾಗುತ್ತಾ ಹೋಗುತ್ತವೆ.

ಗರ್ಲ್​ಫ್ರೆಂಡ್​ ಜೊತೆ ಬಂದನಾ ಮೆಹುಲ್ ಚೋಕ್ಸಿ?
ಇಂಥದ್ದೊಂದು ಪ್ರಶ್ನೆ ಮೂಡೋಕೆ ಕಾರಣವಾಗಿದ್ದೇ ಆ್ಯಂಟಿಗುವಾ ಪ್ರಧಾನಿ ಹೇಳಿಕೆ. ಸ್ಥಳೀಯ ರೇಡಿಯೋದಲ್ಲಿ ಮಾತನಾಡುತ್ತಿದ್ದ ಅವರು ಏನು ಹೇಳಿದ್ರು ಗೊತ್ತಾ?

ನನಗೆ ಬಂದಿರೋ ಮಾಹಿತಿ ಪ್ರಕಾರ ಮೆಹುಲ್ ಚೋಕ್ಸಿ, ತನ್ನ ಗರ್ಲ್​ಫ್ರೆಂಡ್​ ಜೊತೆ ಉತ್ತಮ ಸಮಯ ಕಳೆಯಲು, ರಾತ್ರಿ ಊಟ ಮಾಡಲು ಹೋಗಿದ್ದನಂತೆ. ಆತನಿಗೆ ಈಗ ನಮ್ಮ ದೇಶದ ಯಾವುದೇ ಕಾನೂನು ಅನ್ವಯ ಆಗಲ್ಲ. ಆತ ಅಕ್ರಮವಾಗಿ ಡೊಮಿನಿಕಾಗೆ ಹೋಗಿದ್ದಾನೆ.. ಅಲ್ಲಿಯ ಕಾನೂನಿನಂತೆ ಅವನನ್ನು ಗಡಿಪಾರು ಮಾಡಬಹುದಾಗಿದೆ. ಆತ, ಇನ್ನೂ ಸಂಪೂರ್ಣವಾಗಿ ನಮ್ಮ ದೇಶದ ನಾಗರಿಕನಲ್ಲ. ಆತ ಭಾರತೀಯ ನಾಗರಿಕ.. ಹೀಗಾಗಿ ಭಾರತಕ್ಕೇ ಆತನನ್ನು ಡೊಮಿನಿಕಾ ಡಿಪೋರ್ಟ್ ಮಾಡಲಿ.
-ಗಾಸ್ಟನ್ ಬ್ರೌನಿ, ಆ್ಯಂಟಿಗುವಾ ಪ್ರಧಾನಿ

ಆ್ಯಂಟಿಗುವಾ ಪ್ರಧಾನಿಗಳು ಹೀಗೆ ಚೋಕ್ಸಿ ಸ್ಟೋರಿಗೆ ಲವ್ ಟಚ್ ಕೊಟ್ಟರೂ, ಅದು ಸಮಾಧಾನಕ್ಕಿಂತ ಮತ್ತಷ್ಟು ಪ್ರಶ್ನೆ ಹುಟ್ಟುಹಾಕುತ್ತವೆ. ಯಾಕಂದ್ರೆ ಲವರ್ ಜೊತೆ ಬರೋರು, ಅಕ್ರಮವಾಗಿ ಯಾಕೆ ಡೊಮಿನಿಕಾಗೆ ಬಂದ್ರು? ಇದ್ದಕ್ಕಿದ್ದಂತೆ ಆ್ಯಂಟಿಗುವಾದಿಂದ ಮಿಸ್ ಆಗಿದ್ದು ಹೇಗೆ? ಆ್ಯಂಟಿಗುವಾದಲ್ಲಿ ಸೇಫ್ ಅಂತಾ ಗೊತ್ತಿದ್ದೂ, ಅಕ್ರಮವಾಗಿ ಇನ್ನೊಂದು ದೇಶಕ್ಕೆ ಆತ ಹೋಗಿದ್ದಾದ್ರೂ ಯಾಕೆ?

ಯಾಚ್​​​ನಲ್ಲಿ ಬಂದಾಗ ಆ ಲವರ್ ಇದ್ದಳಾ?
ಮೆಹುಲ್ ಚೋಕ್ಸಿ ತನ್ನ ಗರ್ಲ್​ಫ್ರೆಂಡ್ ಜೊತೆ ಡೊಮಿನಿಕಾಗೆ ಡ್ಯುಯೆಟ್ ಹಾಡೋಕೆ ಹೋಗಿರಬಹುದು ಅಂತಾ ಆ್ಯಂಟಿಗುವಾ ಪ್ರಧಾನಿ ಹೇಳಿದ್ರೂ, ಆತ ಬಂದ ಯಾಚ್​​ನಲ್ಲಿ ಆ ಯುವತಿ ಪತ್ತೆಯಾಗಬೇಕಿತ್ತು ಅಲ್ಲವೇ? ಇಲ್ಲ.. ಇಲ್ಲಿಯವರೆಗೂ ಆ ಯುವತಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.. ಬದಲಿಗೆ, ಯಾಚ್​ ಮಾಲಿಕತ್ವ ಹೊಂದಿರೋ ಸಂಸ್ಥೆ ಮಾತ್ರ, ಯಾಚ್​​ನಲ್ಲಿ ಮೆಹುಲ್ ಚೋಕ್ಸಿ ಇದ್ದನೋ ಇಲ್ಲವೋ ಹೇಳುವುದು ಕಷ್ಟ. ಆದ್ರೆ, ಅದ್ರಲ್ಲಿ ಒಬ್ಬ ಭಾರತೀಯ ಹಾಗೂ ಮತ್ತೊಬ್ಬ ಭಾರತ ಮೂಲದ ಬ್ರಿಟನ್ ನಾಗರಿಕ ಇದ್ದರು ಅಂತಾ ಹೇಳುತ್ತಿದೆ. ಹಾಗಿದ್ರೆ ಆ ಬ್ರಿಟನ್ ನಾಗರಿಕತ್ವ ಹೊಂದಿರೋ ಪ್ಯಾಸೆಂಜರೇ ಆ ಯುವತಿನಾ? ಅಥವಾ ಆ ಯುವತಿನೇ ಆತನನ್ನು ಕರೆತಂದಳಾ? ಆ ಯುವತಿಯೇ ಭಾರತೀಯ ಗುಪ್ತಚಾರಳಾ? ಯಾರಿಗೂ ಗೊತ್ತಿಲ್ಲ. ಬಹುಶಃ ಗೊತ್ತಾಗೋದೂ ಇಲ್ಲ.

29-05-2021, ಡೊಮಿನಿಕಾ
ಯೆಸ್.. ಇದೇ ಫ್ಲೈಟ್.. ಈ ಫ್ಲೈಟ್ ಇಲ್ಲಿ ಬಂದಿಳಿಯುತ್ತಲೇ ಮೆಹುಲ್ ಚೋಕ್ಸಿ ಮಿಸ್ಸಿಂಗ್ ಕೇಸ್​ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು. ಕೊರೊನಾ ಸೋಂಕಿನ ಕಾರಣದಿಂದಾಗಿ ಟ್ರಾವೆಲ್ ಬ್ಯಾನ್ ಆಗಿರೋ ಸಂದರ್ಭದಲ್ಲಿ ಡೊಮಿನಿಕಾಗೆ ಬೊಂಬಾರ್ಡಿಯರ್ ಗ್ಲೋಬಲ್ 5000 ಹೆಸರಿನ ಫ್ಲೈಟ್ ಬಂದಿಳಿಯುತ್ತಲೇ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ವೇಳೆಯಲ್ಲಿ ಈ ಫ್ಲೈಟ್​ನಲ್ಲಿ ಡೊಮಿನಿಕಾಗೆ ಬಂದಿದ್ಯಾರು? ಅಥವಾ ಹೋಗ್ತಿರೋರು ಯಾರು? ಅನ್ನೋ ಪ್ರಶ್ನೆಯನ್ನ ಸ್ಥಳೀಯ ಮಾಧ್ಯಮಗಳು ಕೇಳಲಾರಂಭಿಸಿದವು.

ಆದ್ರೆ ಭಾರತದ R&AW ಕಾರ್ಯ ವೈಖರಿ ಪರಿಚಯ ಇರೋರಿಗೆ ಇದು ಯಾಕೆ ಬಂದಿದೆ? ಅನ್ನೋದು ಬಹುತೇಕ ಖಚಿತವಾಗಿತ್ತು. ಯಾಕಂದ್ರೆ ಇಂಥದ್ದೇ ಫ್ಲೈಟ್ ಬಳಸಿ ವಿವಿಐಪಿ ಹೆಲಿಕಾಪ್ಟರ್ ಹಗರಣದ ರುವಾರಿ ಕ್ರಿಶ್ಚಿಯನ್ ಮೈಕಲ್​ನನ್ನ ಭಾರತೀಯ ಏಜನ್ಸಿಗಳು ಯುಎಇನಿಂದ ಕೆಲ ವರ್ಷಗಳ ಹಿಂದೆ ಕರೆತಂದಿದ್ದವು. ಅದೇ ಮಾದರಿಯ ಆಪರೇಷನ್ ಇಲ್ಲಿ ನಡೆಯುತ್ತಿದೆಯಾ? ಅನ್ನೋ ಪ್ರಶ್ನೆ ಮೂಡಲು ಈ ನಡೆ ಕಾರಣವಾಗಿತ್ತು.

ಇದು ಭಾರತವೇ ಕಳಿಸಿದ ಏರ್​ಕ್ರಾಫ್ಟ್
ಈ ಫ್ಲೈಟ್​ ಬಗೆಗಿನ ಕುತೂಹಲ ಹೆಚ್ಚು ಉಳಿಯಲಿಲ್ಲ.. ಇದಕ್ಕೆ ಕಾರಣ ಅಂದ್ರೆ ಈ ಬಾರಿಯೂ ಆ್ಯಂಟಿಗುವಾದ ಪ್ರಧಾನಿ ಗಾಸ್ಟನ್ ಬ್ರೌನಿ ಅವರೇ ಸ್ವತಃ ಇದು ಭಾರತವೇ ಕಳಿಸಿದ ಜೆಟ್ ಅಂತಾ ಸ್ಪಷ್ಟಪಡಿಸಿದ್ರು. ಜೊತೆಗೆ ಭಾರತ ಸರ್ಕಾರ ಕೆಲ ಸಾಕ್ಷಿಗಳನ್ನು ಕಳಿಸಿಕೊಟ್ಟಿದೆ. ಈ ಮೂಲಕ ಆತನನ್ನು ವಶಕ್ಕೆ ಪಡೆಯಲು ಬೇಕಾದ ವಿವರಗಳನ್ನೂ ಮತ್ತು ಆತ ಪರಾರಿಯಾಗಿರೋ ಭಾರತೀಯ ಪ್ರಜೆಯೆಂದು ತೋರಿಸಲು ಬೇಕಾದ ಮಾಹಿತಿಯನ್ನೂ ಹೊತ್ತು ತರಲಾಗಿದೆ ಅಂತಾ ಅವರು ಹೇಳಿದ್ರು.

ಸದ್ಯಕ್ಕಂತೂ ಮೆಹುಲ್ ಚೋಕ್ಸಿ ಡೊಮಿನಿಕಾದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಜೂನ್ 2ರ ತನಕ ಆತನನ್ನು ಗಡಿಪಾರು ಮಾಡದಂತೆ ಡೊಮಿನಿಕಾ ಕೋರ್ಟ್​ ಹೇಳಿದ್ದರಿಂದಾಗಿ ಸದ್ಯ ಆತ ಸೇಫ್ ಆಗಿದ್ದಾನೆ.

ನೀವು ಹಳೇ ಹಿಂದಿ ಸಿನಿಮಾಗಳನ್ನು ನೋಡಿದ್ರೆ ಅದ್ರಲ್ಲಿ ಒಂದು ಡೈಲಾಗ್ ಇರ್ತಿತ್ತು. ಅದೆಂದರೆ ಕಾನೂನ್​ ಕಾ ಹಾಥ್ ಬಹುತ್ ಲಂಬಾ ಹೋತಾ ಹೈ ಅಂತ.. ಆದ್ರೆ ಬಹುಶಃ ಮೇಹುಲ್ ಚೋಕ್ಸಿ ಮಾತ್ರ ಕಾನೂನಿನ ಕೈ ಡೊಮಿನಿಕಾದವರೆಗೂ ಬರೋವಷ್ಟು ದೊಡ್ಡದಿರುತ್ತೆ ಅಂತಾ ಭಾವಿಸಿರಲಿಲ್ಲ.

ಮೆಹುಲ್ ಚೋಕ್ಸಿ ಆ್ಯಂಟಿಗುವಾದಲ್ಲೇ ಇದ್ದಿದ್ದರೆ ಖಂಡಿತ ಆತನನ್ನು ಭಾರತಕ್ಕೆ ಕರೆತರಲು ಕಷ್ಟವಾಗ್ತಿತ್ತು. ಆದ್ರೆ ಆತ ಯಾವಾಗ ಅಕ್ರಮವಾಗಿ ಡೊಮಿನಿಕಾಗೆ ಪ್ರವೇಶ ಮಾಡಿದ್ನೋ ಆಗಿನಿಂದ ಆತನನ್ನು ಮರಳಿ ದೇಶಕ್ಕೆ ತರುವ ಸಾಧ್ಯತೆಗಳು ದಟ್ಟವಾಗತೊಡಗಿವೆ. ಆದ್ರೆ ಅ ದಾರಿಯನ್ನು ದುರ್ಗಮ ಗೊಳಿಸುವ ನಿಟ್ಟಿನಲ್ಲೂ ಪ್ರಯತ್ನಗಳು ನಡೆಯುತ್ತಿವೆ.

ಹೌದು.. ಯಾಕಂದ್ರೆ ಆತನ ಮೇಲೆ ಹಲ್ಲೆ ನಡೆಸಲಾಗಿದೆ. ಮೆಹುಲ್ ಕೈ, ಕಾಲು, ಹಣೆ, ಮುಖಕ್ಕೆ ಗಾಯಗಳಾಗಿವೆ ಅಂತಾ ಅವರ ಪಲ ವಕೀಲರೂ ಕೋರ್ಟ್ ಮೆಟ್ಟಿಲೇರಿದ್ದಾರೆ. ಜೊತೆಗೆ ಡೊಮಿನಿಕಾದ ವಿಪಕ್ಷಗಳು ಮೆಹುಲ್ ಎಪಿಸೋಡ್​ನ ಸಂಪೂರ್ಣ ತನಿಖೆ ನಡೆಸುವಂತೆ ಅಲ್ಲಿನ ಸರ್ಕಾರಕ್ಕೆ ಸಾಕಷ್ಟು ಒತ್ತಾಯ ಮಾಡಲು ಶುರುವಿಟ್ಟುಕೊಂಡಿವೆ. ಇದೇ ಕಾರಣದಿಂದಾಗಿ ಆತ ಈಗ ಸೇಫಾಗಿ ಚೀನಾ-ಡೊಮಿನಿಕಾ ಫ್ರೆಂಡ್​ಶಿಪ್ ಆಸ್ಪತ್ರೆಗೆ ಸೇರಿಕೊಂಡಿದ್ದಾನೆ. ಆತನ ಕೋವಿಡ್ ರಿಪೋರ್ಟ್ ನೆಗೆಟಿವ್ ಬಂದಿದೆ. ಹೀಗಾಗಿ ಸಾಮಾನ್ಯ ವಾರ್ಡ್​ಗೇ ದಾಖಲಿಸಲಾಗಿದೆ.

ಇನ್ನೊಂದೆಡೆ ಭಾರತ ಸರ್ಕಾರ ಕೂಡ, ಚೋಕ್ಸಿ ಭಾರತೀಯ ನಾಗರೀಕನಾಗಿದ್ದು, ದೇಶದಲ್ಲಿ ಸುಮಾರು 14 ಸಾವಿರ ಕೋಟಿ ರೂಪಾಯಿಮೊತ್ತದ​​ ವಂಚನೆ ಎಸಗಿದ್ದಾನೆ. ಹೀಗಾಗಿ ಆತನನ್ನು ನಮಗೆ ಹಸ್ತಾಂತರ ಮಾಡಿ ಎಂದೂ ಕೇಂದ್ರ ಸರ್ಕಾರ ಡೊಮಿನಿಕಾಗೆ ಹೇಳಿದೆ. ಜೊತೆಗೆ, ಚೋಕ್ಸಿಯನ್ನು ಪರಾರಿಯಾಗಿರೋ ಭಾರತೀಯ ಪ್ರಜೆಯೆಂದು ಪರಿಗಣಿಸಬೇಕು. ಆತನ ವಿರುದ್ಧ ಇಂಟರ್ಪೋಲ್​​ ರೆಡ್​​ ಕಾರ್ನರ್​​​​ ನೋಟಿಸ್​ ಹೊರಡಿಸಿದೆ. ಆತನನ್ನು ಗಡಿಪಾರು ಮಾಡಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು ಎಂದು ಭಾರತ ರಾಜತಾಂತ್ರೀಕ ಮಾರ್ಗದ ಮೂಲಕ ಡೊಮಿನಿಕಾಗೆ ಸ್ಪಷ್ಟ ಸಂದೇಶ ರವಾನಿಸಿದೆ ಎಂಬ ಮಾಹಿತಿ ಕೂಡ ಲಭಿಸಿದೆ. ಹೀಗಾಗಿ, ಸದ್ಯಕ್ಕೆ ಡೊಮಿನಿಕಾದತ್ತ ಎಲ್ಲರ ಚಿತ್ತವಂತೂ ನೆಟ್ಟಿದೆ.

ಒಟ್ಟಿನಲ್ಲಿ ಅದೇನೇ ಇದ್ದರೂ ಆತನಂತೂ ಡೊಮಿನಿಕಾದ ಪ್ರಜೆ ಅಲ್ಲ. ಹೀಗಾಗಿ, ಹೆಚ್ಚು ಕಾಲ ಅಲ್ಲಿರಲು ಸಾಧ್ಯವಿಲ್ಲ. ಹೀಗಾಗಿ ಮೆಹುಲ್ ಚೋಕ್ಸಿಯನ್ನು ಒಂದೋ ಆ್ಯಂಟಿಗುವಾಕ್ಕೆ ಇಲ್ಲವೇ ಭಾರತಕ್ಕೆ ಗಡಿ ಪಾರು ಮಾಡಲೇ ಬೇಕಿದೆ. ಸದ್ಯಕ್ಕಂತೂ ಮೆಹುಲ್ ಚೋಕ್ಸಿ ನಮ್ಮ ದೇಶಕ್ಕೆ ಬೇಡವೇ ಬೇಡ ಅಂತ ಹೇಳಿರೋದ್ರಿಂದಾಗಿ, ಆತ ಭಾರತಕ್ಕೆ ಬರೋ ಸಾಧ್ಯತೆಯಂತೂ ಹೆಚ್ಚಾಗಿ ಕಂಡು ಬರ್ತಿದೆ.

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

The post ವಿಮಾನ-ಯಾಚ್-ಬಿಕಿನಿ ಸುಂದರಿ; ಡೊಮಿನಿಕಾದಲ್ಲಿ ಖತರ್ನಾಕ್ ಚೋಕ್ಸಿ ತಗ್ಲಾಕಿಕೊಂಡಿದ್ದೇ ರೋಚಕ appeared first on News First Kannada.

Source: newsfirstlive.com

Source link