ವಿರಾಟ್​​ ದಿಢೀರ್​ ನಾಯಕತ್ವ ತ್ಯಜಿಸಿದ್ದಕ್ಕೆ ಕಾರಣ ಏನು..?


ವಿರಾಟ್​​ ಕೊಹ್ಲಿ ಟೆಸ್ಟ್​ ನಾಯಕತ್ವಕ್ಕೆ ದಿಢೀರ್​ ರಾಜೀನಾಮೆ ಪ್ರಕಟಿಸಿ ಶಾಕ್​ ನೀಡಿದ್ದಾರೆ. ಸೆಪ್ಟೆಂಬರ್​​​​​​ನಲ್ಲಿ ಟಿ20 ನಾಯಕತ್ವ ತ್ಯಜಿಸಿದ್ದ ಕೊಹ್ಲಿಯನ್ನ ಬಳಿಕ ಏಕದಿನ ಕ್ಯಾಪ್ಸನ್ಸಿಯನ್ನು ಕಿತ್ತುಕೊಂಡಿತ್ತು. ಹೀಗಾಗಿ ಕೊಹ್ಲಿ ಟೆಸ್ಟ್​ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ವಿರಾಟ್​ ಕೊಹ್ಲಿಯೇ ಟೆಸ್ಟ್​ ನಾಯಕತ್ವವನ್ನೂ ತೊರೆದು ಅಚ್ಚರಿ ಮೂಡಿಸಿದ್ದಾರೆ. ಆದರೆ ವಿರಾಟ್​ ಕೊಹ್ಲಿ ದಿಢೀರ್​ ನಾಯಕತ್ವ ತ್ಯಜಿಸಿದ್ದಕ್ಕೆ ಕಾರಣ ಏನು.? ಅನ್ನೋದು ಸಾಕಷ್ಟು ಕುತೂಹಲ ಮೂಡಿಸಿದೆ.

ಪ್ರತಿಷ್ಠೆಯ ದಕ್ಷಿಣ ಆಫ್ರಿಕಾ ಟೆಸ್ಟ್​ ಸರಣಿಯಲ್ಲಿ ಸೋಲು

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಕೊಹ್ಲಿ ಪಾಲಿಗೆ ಅತ್ಯಂತ ಪ್ರತಿಷ್ಠೆಯಾಗಿತ್ತು. ಆದರೆ ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದ ಭಾರತ, ನಂತರ ಉಳಿದ ಎರಡು ಟೆಸ್ಟ್​​ಗಳಲ್ಲೂ ಮುಗ್ಗರಿಸಿ ಸರಣಿಯಲ್ಲಿ ಸೋಲು ಕಂಡಿತು. ಹೀಗಾಗಿ ಹರಿಣಗಳ ನಾಡಲ್ಲಿ 30 ವರ್ಷಗಳಿಂದ ಟೆಸ್ಟ್​ ಸರಣಿ ಗೆಲ್ಲದ ಭಾರತದ ಕನಸು ನನಸಾಗಿಯೇ ಉಳಿದುಕೊಂಡಿತು. ಹೀಗಾಗಿ ಪ್ರತಿಷ್ಠೆಯ ಸರಣಿಯನ್ನ ಗೆಲ್ಲಲಿಲ್ಲವೆಂಬ ಕಾರಣಕ್ಕೂ ನಾಯಕತ್ವ ತ್ಯಜಿಸಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಬಿಸಿಸಿಐ ಕೊಕ್​ ಕೋಡೋಕು ಮುನ್ನ ಸ್ವಾಭಿಮಾನದ ನಿರ್ಧಾರ

ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನ ಟಿ20 ಮಾದರಿಯ ನಾಯಕತ್ವ ತ್ಯಜಿಸುವುದಾಗಿ ಕೊಹ್ಲಿ ಹೇಳಿಕೆ ನೀಡಿದ್ರು. ಒತ್ತಡ ಹೆಚ್ಚಾಗುತ್ತಿದ್ದು, ಬ್ಯಾಟಿಂಗ್​​ ಮೇಲೆ ಪೋಕಸ್​ ಮಾಡುವುದಕ್ಕಾಗಿ ನಾಯಕತ್ವ ತ್ಯಜಿಸುತ್ತಿದ್ದೇನೆ ಎಂದು ಹೇಳಿದ್ದರು. ಇದಾದ ಬಳಿಕ ಏಕಾಏಕಿ ಏಕದಿನ ನಾಯಕತ್ವದಿಂದ ಕೊಹ್ಲಿಯನ್ನು ಕಿತ್ತು ಹಾಕಿ ಟೆಸ್ಟ್​ನಲ್ಲಿ ನಾಯಕನಾಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಹೇಳಿತ್ತು. ಈಗಾಗಲೇ ಬಿಸಿಸಿಐಯೊಂದಿಗೆ ವೈಮನಸ್ಸು ಹೊಂದಿರುವ ಕಾರಣ ಕೊಹ್ಲಿ, ಮಂಡಳಿಯೇ ಕೊಕ್​ ನೀಡುವುದಕ್ಕೂ ಮುನ್ನ ತಾನಾಗಿಯೇ ಟೆಸ್ಟ್​ ನಾಯಕತ್ವದಿಂದ ಕೆಳಗಿಳಿದು ಸ್ವಾಭಿಮಾನದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾತು ಕೂಡ ಹರಿದಾಡ್ತಿದೆ.

ಕಳಪೆ ಪ್ರದರ್ಶನ- ಎರಡು ವರ್ಷಗಳಿಂದ ಸಿಡಿಸಿಲ್ಲ ಶತಕ

ಹೌದು.. ವಿರಾಟ್​ ಕೊಹ್ಲಿ ಟೆಸ್ಟ್​ ನಾಯಕನಾಗಿ ಅತ್ಯಂತ ಯಶಸ್ವಿಯಾಗಿದ್ದರೂ, ಬ್ಯಾಟಿಂಗ್​​ ಎರಡು ವರ್ಷಗಳಿಂದ ವೈಫಲ್ಯ ಅನುಭವಿಸುತ್ತಿದ್ದಾರೆ. ಹಾಗಂತ ಸಂಪೂರ್ಣ ವೈಫಲ್ಯಕ್ಕೆ ತುತ್ತಾಗಿಲ್ಲ. ಆದರೆ ಕಳೆದ ಎರಡು ವರ್ಷಗಳಿಂದ ಅಂದರೆ ಬರೋಬ್ಬರಿ 30 ಇನ್ನಿಂಗ್ಸ್​​​ಗಳಿಂದ ಒಂದೇ ಒಂದು ಶತಕ ಸಿಡಿಸುವಲ್ಲಿ ವಿಫಲರಾಗಿದ್ದಾರೆ. ಶತಕಗಳ ಸರದಾರ ಎಂದೇ ಕರೆಸಿಕೊಳ್ಳೋ ಕೊಹ್ಲಿ, ಶತಕ ಸಿಡಿಸದೇ ಇರೋದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಹುಶಃ ನಾಯಕತ್ವ ಒತ್ತಡವೇ ಕಾರಣ ಎಂದು ಹೇಳಲಾಗ್ತಿದೆ. ಆದ್ದರಿಂದಲೇ ನಾಯಕತ್ವಕ್ಕೆ ಗುಡ್​ ಬೈ ಹೇಳಿದ್ದಾರೆ ಎನ್ನಲಾಗ್ತಿದೆ.

ಆಯ್ಕೆ ಸಮಿತಿ ಹಾಗೂ ಬಿಸಿಸಿಐ ನಡೆಸಿಕೊಂಡ ಬಗ್ಗೆ ಇತ್ತು ಬೇಸರ

ಟೀಂ ಇಂಡಿಯಾ ಸೆಲೆಕ್ಷನ್​ ಕಮಿಟಿ ಮತ್ತು ಬಿಸಿಸಿಐ, ವಿರಾಟ್​ ಕೊಹ್ಲಿ ಜೊತೆಗೆ ನಡೆದುಕೊಂಡ ರೀತಿ ಕೂಡ ನಾಯಕತ್ವ ತ್ಯಜಿಸಲು ಕಾರಣವಾಗಿದೆ ಎನ್ನಲಾಗಿದೆ. ಟಿ20 ನಾಯಕತ್ವದಿಂದ ಕೊಹ್ಲಿ ಕೆಳಗಿಳಿದಾಗ ಬಿಸಿಸಿಐ ಅಧ್ಯಕ್ಷ ಗಂಗೂಲಿ, ನಾಯಕತ್ವದಿಂದ ಕೆಳಗಿಳಿಯದಂತೆ ಮಾಡಿದ್ವಿ ಅಂತ ಹೇಳಿದ್ರು. ಇದೇ ಮಾತನ್ನು ಸೆಲೆಕ್ಷನ್​ ಕಮಿಟಿ ಅಧ್ಯಕ್ಷ ಚೇತನ್​​ ಶರ್ಮಾ ಕೂಡ ಪುನರುಚ್ಛರಿಸಿದ್ರು. ಆದ್ರೆ ನನ್ನೊಂದಿಗೆ ಚರ್ಚೆ ನಡೆಸಿಯೇ ಇಲ್ಲ. ಏಕದಿನ ನಾಯಕತ್ವದಿಂದ ತೆಗೆದು ಹಾಕುವ ಮುನ್ನ ಮಾತ್ರ ಮಾತನಾಡಿದ್ರು ಅಂತ ಕೊಹ್ಲಿ ಹೇಳಿದ್ರು. ಬಳಿಕ ಮನಸ್ತಾಪಗಳು ಉಂಟಾಗಿ ಕೊಹ್ಲಿ ಜೊತೆಗೆ ಬಿಸಿಸಿಐ ಸರಿಯಾಗಿ ನಡೆದುಕೊಳ್ತಿಲ್ಲ ಎಂದು ಹೇಳಲಾಗ್ತಿದೆ. ಈ ಬೇಸರದಿಂದಲೂ ಕೊಹ್ಲಿ ಟೆಸ್ಟ್​ ಪಟ್ಟ ತ್ಯಜಿಸಿದ್ರು ಎನ್ನಲಾಗ್ತಿದೆ.

News First Live Kannada


Leave a Reply

Your email address will not be published. Required fields are marked *