ಕೋಲಾರ: ಇತ್ತೀಚಿಗೆ ವಿವಾಹ ವಿವಾದದಿಂದ ಸುದ್ದಿಯಾಗಿದ್ದ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ, ಚೈತ್ರಾ ಕೋಟೂರ್ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.  

ಇಲ್ಲಿನ ಕುರುಬರಪೇಟೆಯ  ತಮ್ಮ ಮನೆಯಲ್ಲಿ ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿಸ್ತೆ ನೀಡಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಚೈತ್ರಾ ಅವರು ಇತ್ತೀಚಿಗೆ ಉದ್ಯಮಿ ನಾಗಾರ್ಜುನ್ ಅವರನ್ನು ಬೆಂಗಳೂರಿನ ಬ್ಯಾಟರಾಯನಪುರದ ಗಣಪತಿ ದೇವಾಲಯದಲ್ಲಿ ಸರಳವಾಗಿ ವಿವಾಹವಾಗಿದ್ದರು. ಎರಡೂ ಕುಟುಂಬಗಳು ಒಪ್ಪದ ಕಾರಣ ಮರು ದಿನವೇ ಅದು ವಿವಾದವಾಗಿ ಕೋಲಾರದ ಮಹಿಳಾ ಠಾಣೆ ಮೆಟ್ಟಿಲೇರಿತ್ತು. 

ದೂರು ನೀಡಿದ ನಂತರ ಮಾತುಕತೆಗೆ ಬರುವುದಾಗಿ ಹೇಳಿದ್ದ ನಾಗಾರ್ಜುನ್ ಹಾಗೂ ಪೋಷಕರು ಮಾತುಕತೆಗೆ ಬಾರದೆ ನಿರ್ಲಕ್ಷ್ಯ ವಹಿಸಿದ್ದಕ್ಕೆ ಮನನೊಂದು ಚೈತ್ರಾ ಕೋಟೂರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಇದಾದ ನಂತರ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ನಾಗಾರ್ಜುನ್ ನಂಬಿ ದೊಡ್ಡ ತಪ್ಪು ಮಾಡಿದೆ ಎಂದು ಕಣ್ಣೀರಿಟ್ಟಿದ್ದಾರೆ.

ರಂಗಭೂಮಿ, ಸಿನಿಮಾ ನಟನೆ, ಜಾಹೀರಾತು ನಿರ್ದೇಶನದಲ್ಲಿ ಚೈತ್ರಾ ಸಕ್ರಿಯರಾಗಿದ್ದರು.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More