ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತ ಹೋರಾಟ ಮುಂದುವರಿಕೆ: ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಮಾಹಿತಿ | SKM protest continues regarding issues of MSP withdrawal of FIR etc says Farmer leader Balbeer Singh here is details


ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತ ಹೋರಾಟ ಮುಂದುವರಿಕೆ: ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಮಾಹಿತಿ

ಸಂಯುಕ್ತ ಕಿಸಾನ್ ಮೋರ್ಚಾದ ಹಿರಿಯ ರೈತ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್

ನವದೆಹಲಿ: 40ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟವಾದ ‘ಸಂಯುಕ್ತ ಕಿಸಾನ್ ಮೋರ್ಚಾ’ವು ಕೃಷಿ ಸಂಬಂಧಿತ ವಿಷಯಗಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಘೋಷಿಸಿದೆ. ಜೊತೆಗೆ ಎಸ್‌ಕೆಎಂನ ಪೂರ್ವನಿರ್ಧರಿತ ಕಾರ್ಯಕ್ರಮಗಳು ವೇಳಾಪಟ್ಟಿಯಂತೆಯೇ ನಡೆಯಲಿದೆ ಎಂದು ಎಸ್‌ಕೆಎಂ ಖಚಿತಪಡಿಸಿದೆ.  ಮುಂದಿನ ಕ್ರಮದ ಕುರಿತು ಚರ್ಚಿಸಲು ಸಿಂಘು ಗಡಿಯಲ್ಲಿ ಇಂದು (ಭಾನುವಾರ) ನಡೆದ ಸಭೆಯ ನಂತರ ಕಿಸಾನ್ ಮೋರ್ಚಾ ಪತ್ರಿಕಾಗೋಷ್ಠಿಯನ್ನು ನಡೆಸಿತು. ರೈತ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್ ಮಾತನಾಡಿ, ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆದರೂ, ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಬಲ್ಬೀರ್ ಸಿಂಗ್ , “ನಾವು ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ್ದರ ಬಗ್ಗೆ ಚರ್ಚಿಸಿದ್ದೇವೆ. ಇದರ ನಂತರ, ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಎಸ್‌ಕೆಎಂನ ಪೂರ್ವನಿರ್ಧರಿತ ಕಾರ್ಯಕ್ರಮಗಳು ಯಥಾಸ್ಥಿತಿಯಲ್ಲಿ ಮುಂದುವರಿಯುತ್ತವೆ. ನವೆಂಬರ್ 22 ರಂದು ಲಕ್ನೋದಲ್ಲಿ ಕಿಸಾನ್ ಪಂಚಾಯತ್, ನವೆಂಬರ್ 26 ರಂದು ಎಲ್ಲಾ ಗಡಿಗಳಲ್ಲಿ ಸಭೆಗಳು ಮತ್ತು ನವೆಂಬರ್ 29 ರಂದು ಸಂಸತ್ತಿಗೆ ಮೆರವಣಿಗೆ ನಡೆಯಲಿದೆ” ಎಂದು ತಿಳಿಸಿದ್ದಾರೆ. ಮುಂದಿನ ಬೆಳವಣಿಗೆಗಳ ಕುರಿತು ತೀರ್ಮಾನಕ್ಕಾಗಿ ನ.27 ರಂದು ಎಸ್‌ಕೆಎಂನ ಮತ್ತೊಂದು ಸಭೆ ನಡೆಯಲಿದ್ದು, ಅಲ್ಲಿಯವರೆಗಿನ ಪರಿಸ್ಥಿತಿ ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದು’’ ಎಂದು ಬಲ್ಬೀರ್ ಸಿಂಗ್ ತಿಳಿಸಿದ್ದಾರೆ.

ರೈತರ ಬೇಡಿಕೆಗಳನ್ನು ಪಟ್ಟಿ ಮಾಡಿದ ರಾಜೇವಾಲ್, ಕಿಸಾನ್ ಯೂನಿಯನ್‌ಗಳು ಪ್ರಧಾನಿ ಮೋದಿಗೆ ಬಹಿರಂಗ ಪತ್ರವನ್ನು ಬರೆಯುತ್ತವೆ ಮತ್ತು ಬಾಕಿ ಉಳಿದಿರುವ ಬೇಡಿಕೆಗಳನ್ನು ಉಲ್ಲೇಖಿಸುತ್ತವೆ. MSP ಸಮಿತಿ, ಅದರ ಹಕ್ಕುಗಳು, ಅದರ ಕರ್ತವ್ಯಗಳು; ವಿದ್ಯುತ್ ಬಿಲ್ 2020, ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದು ಮೊದಲಾದ ವಿಚಾರಗಳ ಕುರಿತು ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ. ಲಖಿಂಪುರ್ ಖೇರಿ ವಿಚಾರದಲ್ಲಿ ರಾಜ್ಯ ಗೃಹ ಸಚಿವ ಅಜಯ್ ಮಿಶ್ರಾ ಟೆನಿ ಅವರನ್ನು ವಜಾಗೊಳಿಸುವಂತೆ ನಾವು ಅವರಿಗೆ ಪತ್ರ ಬರೆಯುತ್ತೇವೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ. ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮೋದಿ ಸರ್ಕಾರದ ನಿರ್ಧಾರದ ಬಗ್ಗೆ ಕೇಳಿದಾಗ, ಇದು ಉತ್ತಮ ಹೆಜ್ಜೆ ಮತ್ತು ರೈತರು ಇದನ್ನು ಸ್ವಾಗತಿಸುತ್ತಾರೆ ಆದರೆ ಬಹಳಷ್ಟು ವಿಷಯಗಳು ಇನ್ನೂ ಬಗೆಹರಿಯದೆ ಉಳಿದಿವೆ ಎಂದು ಬಲ್ಬೀರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ವಿವಿಧ ರೈತ ಸಂಘಟನೆಗಳು ಒಂದು ವರ್ಷದಿಂದ ರಾಷ್ಟ್ರ ರಾಜಧಾನಿಯ ವಿವಿಧ ಪ್ರವೇಶ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ. ಉತ್ತರ ದೆಹಲಿಯ ಸಿಂಘು ಗಡಿಯಲ್ಲಿರುವ ಕ್ಯಾಂಪ್‌ಸೈಟ್ ಎಸ್‌ಕೆಎಂನ ಪ್ರಧಾನ ಕಛೇರಿಯಾಗಿದ್ದರೆ, ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕೈತ್ ಪೂರ್ವ ದೆಹಲಿಯ ಗಾಜಿಪುರ ಗಡಿಯಲ್ಲಿ ಮೊಕ್ಕಾಂ ಹೂಡಿದ್ದರು.

ಇದನ್ನೂ ಓದಿ:

ಪಾಕ್ ಪ್ರಧಾನಿಯನ್ನು ಹಿರಿಯ ಅಣ್ಣ ಎಂದ ನವಜೋತ್ ಸಿಂಗ್ ಸಿಧು ವಿರುದ್ಧ ಬಿಜೆಪಿ, ಅಕಾಲಿದಳ  ವಾಗ್ದಾಳಿ

ಭಾರತ ಶೀಘ್ರದಲ್ಲೇ ವಿಶ್ವಕ್ಕೆ ಹಡಗುಗಳನ್ನು ನಿರ್ಮಿಸಲಿದೆ: ಐಎನ್‌ಎಸ್ ವಿಶಾಖಪಟ್ಟಣಂ ಲೋಕಾರ್ಪಣೆಗೊಳಿಸಿ ರಾಜನಾಥ್ ಸಿಂಗ್ ಹೇಳಿಕೆ

TV9 Kannada


Leave a Reply

Your email address will not be published. Required fields are marked *