ಚಾಮರಾಜನಗರ: ಕೊರೊನಾ ಲಾಕ್​​​​ಡೌನ್​​ನಿಂದ ಊಟಕ್ಕೂ ಸಮಸ್ಯೆ ಎದುರುಸಿದ್ದ ಗುಂಡ್ಲುಪೇಟೆ ಬುದ್ದಿಮಾಂದ್ಯ ಮಕ್ಕಳಿಗೆ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ನೆರವು ನೀಡಿದ್ದಾರೆ.

ಇಬ್ಬರೂ ಕೊಡಗು ಜಿಲ್ಲೆಯಿಂದ 5 ಗಂಟೆ ಪ್ರಯಾಣ ಮಾಡಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿರುವ ಪೃಥ್ವಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗೆ ಆಗಮಿಸಿದ್ರು. ಭುವನಂ ಫೌಂಡೇಷನ್ನಿಂದ ಎರಡು ತಿಂಗಳಿಗೆ ಆಗುವಷ್ಟು ಆಹಾರಧಾನ್ಯ, ನಿತ್ಯೋಪಯೋಗಿ ವಸ್ತುಗಳ ವಿತರಣೆ ಮಾಡಿದ್ದಾರೆ.

ಪೃಥ್ವಿ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ 30ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಶಾಲೆಯ ಕಟ್ಟಡವು ಶಿಥಿಲಾವಸ್ಥೆ ತಲುಪಿದ್ದು, ಮಳೆ ಬಂದರೆ ಸೋರುತ್ತದೆ. ಈ ಕುರಿತು ಮಾಹಿತಿ ಲಭಿಸುತ್ತಿದಂತೆ ಮಂಗಳವಾರ ರಾತ್ರಿ ಶಾಲೆಗೆ ಭೇಟಿ ಕೊಟ್ಟಿದ್ದ ಭುವನ್ ಹಾಗೂ ಹರ್ಷಿಕಾ, ಮಕ್ಕಳೊಂದಿಗೆ ಸಮಯವನ್ನು ಕಳೆದರು. ಅಲ್ಲದೇ ತಾವೂ ನೃತ್ಯ ಮಾಡಿ ಮಕ್ಕಳಿಂದಲೂ ನೃತ್ಯ ಮಾಡಿಸಿ ರಂಜಿಸಿದರು.

ಈ ವೇಳೆ ಮಾತನಾಡಿದ ಅವರು, ಇಲ್ಲಿನ ಮಕ್ಕಳ ಪರಿಸ್ಥಿತಿ ಶೋಚನೀಯವಾಗಿದೆ. ಸದ್ಯಕ್ಕೆ ತಾತ್ಕಾಲಿಕ ನೆರವು ನೀಡಿದ್ದೇವೆ. ನಮ್ಮ ಸೇವೆಗೆ ಉತ್ತಮ ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಶಾಲೆಗೆ ಇನ್ನೂ ಹೆಚ್ಚಿನ ನೆರವು ನೀಡುತ್ತೇವೆ. ರಾಜ್ಯದಲ್ಲಿ ಯಾವುದೇ ಕಡೆ ಇಂತಹ ಪರಿಸ್ಥಿತಿ ಇದ್ದರೆ ಕರೆ ಮಾಡಿ 24 ಗಂಟೆಯೊಳಗೆ ಅವರಿಗೆ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು.

ನಿನ್ನೆಯಷ್ಟೇ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ಕೂಡ ಶಾಲೆಗೆ ಅಗತ್ಯವಿರುವ ನೆರವು ನೀಡಿತ್ತು. ಅಲ್ಲದೇ ಮಕ್ಕಳ ಶಾಲೆಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆ ಕೊಟ್ಟಿತ್ತು.

The post ವಿಶೇಷಚೇತನ ಮಕ್ಕಳ ನೆರವಿಗೆ ನಿಂತ ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಚ appeared first on News First Kannada.

Source: newsfirstlive.com

Source link