ವಿಶ್ವಕಪ್​​ನಲ್ಲಿ ಭಾರತ ಸೋಲು; ಬಿಸಿಸಿಐ ಆಯ್ಕೆ ಸಮಿತಿಗೆ 5 ಪ್ರಶ್ನೆ ಕೇಳಿದ ಮಾಜಿ ಸೆಲೆಕ್ಟರ್ಸ್​


T20 ವಿಶ್ವಕಪ್​​ಗೆ​​ ಟೀಮ್​ ಇಂಡಿಯಾ ಆಯ್ಕೆಯ ಸಂದರ್ಭದಲ್ಲಿ, ಹಾರ್ದಿಕ್​​ ಬಗ್ಗೆ ಪ್ರಶ್ನೆಗಳು ಎದ್ದಿದ್ವು. ಆದ್ರೆ ವಿಶ್ವಕಪ್​​ ಮುಕ್ತಾಯದ ಹಂತಕ್ಕೆ ಬಂದರೂ, ಈ ಪ್ರಶ್ನೆಗಳು ನಿಂತಿಲ್ಲ. ಇದೀಗ ಟೀಮ್ ಇಂಡಿಯಾ ಮಾಜಿ ಸೆಲೆಕ್ಟರ್ಸ್​, ಐದು ಪ್ರಶ್ನೆಗಳನ್ನ ಆಯ್ಕೆ ಸಮಿತಿ, ಬಿಸಿಸಿಐ ಮತ್ತು ಟೀಮ್​​ ಮ್ಯಾನೇಜ್​ಮೆಂಟ್​ಗೆ ಹಾಕಿದ್ದಾರೆ. ಇವರ ವಿರುದ್ಧ ಗುಡುಗಿದ್ದಾರೆ ಕೂಡ.

 

ಟಿ20 ವಿಶ್ವಕಪ್​​ನಲ್ಲಿ ಟೀಮ್​ ಇಂಡಿಯಾ ಗೆಲುವಿನೊಂದಿಗೆ ಅಭಿಯಾನ ಮುಗಿಸಿದೆ. ಲೀಗ್​​​ ಹಂತದಲ್ಲೇ ಭಾರತ ಹೊರ ಬಿದ್ದು, ಸಾಕಷ್ಟು ನಿರಾಸೆ ಮೂಡಿಸಿದೆ. ಇದರ ಬೆನ್ನಲ್ಲೇ ಹಾರ್ದಿಕ್​ ಪಾಂಡ್ಯ ಆಯ್ಕೆಯ ಕುರಿತು ಪ್ರಶ್ನೆ ಎದ್ದಿದೆ. ಹೌದು, ಭಾರತ ತಂಡದ ಮಾಜಿ ಆಯ್ಕೆ ಸಮಿತಿ ಸದಸ್ಯರಾದ MSK ಪ್ರಸಾದ್​, ಸರಣ್​​ದೀಪ್​ ಸಿಂಗ್​, ಆಶಿಶ್​​ ಕಪೂರ್​, ಕೀರ್ತಿ ಆಜಾದ್, ಸಂದೀಪ್ ಪಾಟೀಲ್ BCCI ವಿರುದ್ಧ ಸಿಡಿದೆದ್ದಿದ್ದಲ್ಲದೆ, ಪ್ರಶ್ನೆಗಳನ್ನೇ ಸುರಿಸಿಬಿಟ್ಟಿದ್ದಾರೆ.

ಸೆಲೆಕ್ಟರ್ಸ್​​ಗೆ ಹಾರ್ದಿಕ್​ ಫಿಟ್​​ನೆಸ್​​ ಬಗ್ಗೆ ಗೊತ್ತಿರಲಿಲ್ಲವೇ..?
ಹಾರ್ದಿಕ್​ ಪಾಂಡ್ಯ ಫಿಟ್​ನೆಸ್​​ ಕುರಿತು ಮೊದಲ ಪ್ರಶ್ನೆ ಎತ್ತಿರೋದು ಸರಣ್​ದೀಪ್​ ಸಿಂಗ್​. ವಿಶ್ವಕಪ್​​​ಗೆ ತಂಡದ ಆಯ್ಕೆ ಮಾಡೋವಾಗ ಪಾಂಡ್ಯ ಫಿಟ್​ನೆಸ್​​ ಕುರಿತು ಆಯ್ಕೆ ಸಮಿತಿಗೆ ಗೊತ್ತಿರಲಿಲ್ಲವೇ..? ಒಂದು ವೇಳೆ ಗೊತ್ತಿದ್ದರೆ ಆಯ್ಕೆ ಮಾಡಿದ್ಯಾಕೆ.? ಇಲ್ಲ, ಹಾರ್ದಿಕ್ ಇಂಜುರಿ ಬಗ್ಗೆ ಸೆಲೆಕ್ಷನ್​ ಕಮಿಟಿಗೆ ತಿಳಿದಿತ್ತಾ.? ಹೀಗೆ ಪ್ರಶ್ನೆ ಕೇಳಿದ್ದಲ್ಲದೆ, ಆಯ್ಕೆ ಸಮಿತಿ ಮುಖ್ಯಸ್ಥರು ಉತ್ತರಿಸಬೇಕು ಅಂತ ಸಿಂಗ್​ ಒತ್ತಾಯಿಸಿದ್ದಾರೆ.

ಆರನೇ ಬೌಲರ್​ ಆಯ್ಕೆ ಮಾಡದಿರೋದಕ್ಕೆ ಕಾರಣವೇನು..?
ಚುಟುಕು ಕ್ರಿಕೆಟ್​​ನಲ್ಲಿ ಆರನೇ ಬೌಲರ್​ ಅತ್ಯಗತ್ಯ. ಆದರೆ ಹಾರ್ದಿಕ್​ ಅನ್​ಫಿಟ್​ ಇದ್ದರೂ, ಅವರನ್ನೇ ಆಯ್ಕೆ ಮಾಡಿದ್ಯಾಕೆ? ಐವರು ಬೌಲರ್​​ಗಳಿಂದ ನಿರೀಕ್ಷಿತ ಪ್ರದರ್ಶನ ಬರದಿದ್ದಾಗ, 6ನೇ ಬೌಲರ್​ ಮೊರೆ ಹೋಗುತ್ತೇವೆ. ಆದ್ರೆ ಬೌಲಿಂಗ್​​ ಮಾಡದ ಹಾರ್ದಿಕ್​ರಿಂದ ಏನು ನಿರೀಕ್ಷಿಸಲು ಸಾಧ್ಯವಾಗುತ್ತೆ.? ಬೌಲಿಂಗ್​​​ನಲ್ಲಿ ಆನ್​​ಫಿಟ್​ ಆದ ಹಾರ್ದಿಕ್​ಗೆ ಚಾನ್ಸ್​ ಕೊಟ್ಟಿದ್ಯಾಕೆ ಅನ್ನೋದಕ್ಕೆ ಸ್ಪಷ್ಟ ನೀಡಬೇಕು ಎಂದಿದ್ದಾರೆ ಕೀರ್ತಿ ಆಜಾದ್.

IPL​​ನಲ್ಲಿ ಬೌಲಿಂಗ್​​ ಮಾಡದ ಹಾರ್ದಿಕ್​​ಗೆ ಮಣೆ ಹಾಕಿದ್ಯಾಕೆ?
IPL​​ನಲ್ಲಿ ಹಾರ್ದಿಕ್​​ ಒಂದೇ ಒಂದು ಓವರ್​ ಕೂಡ ಬೌಲಿಂಗ್​ ಮಾಡಿರಲಿಲ್ಲ. ಆಗಲೇ ಇಂಜುರಿ​​ ಕುರಿತು ಹಲವು ಪ್ರಶ್ನೆಗಳು ಬೆಳಕಿಗೆ ಬಂದಿದ್ವು. ಹೀಗಿದ್ರೂ ವಿಶ್ವಕಪ್​​ಗೆ ಮಣೆ ಹಾಕಿದ್ದು ಯಾವ ಕಾರಣಕ್ಕಾಗಿ? ಒಂದ್ವೇಳೆ IPLನಲ್ಲಿ ಬೌಲಿಂಗ್​​ ಮಾಡಿ ಸಂಪೂರ್ಣ ಫಿಟ್​​ ಆಗಿದ್ರೆ, ಚಾನ್ಸ್​ ನೀಡುವುದರಲ್ಲಿ ಅರ್ಥವಿತ್ತು. ಆದರೆ ಇದರಲ್ಲಿ ವಿಫಲರಾದ ಹಾರ್ದಿಕ್​​ರನ್ನ ಯಾವ ಆಧಾರದಲ್ಲಿ ಸೆಲೆಕ್ಟ್​ ಮಾಡಲಾಯ್ತು ಎಂದು ಹೇಳಬೇಕು ಅಂತ ಆಶಿಶ್​​ ಕಪೂರ್ ಕೇಳಿದ್ದಾರೆ.

 

ಆಲ್​​ರೌಂಡರ್​​ ಎಂದು ಆಯ್ಕೆ ಮಾಡಿ ಬ್ಯಾಟ್ಸ್​​ಮನ್​ ಮಾಡಿದ್ದೇಕೆ?
ಹಾರ್ದಿಕ್​ರನ್ನ ಆಲ್​ರೌಂಡರ್ ಕೋಟಾದಲ್ಲಿ ಆಯ್ಕೆ ಮಾಡಲಾಯ್ತು. ಆದರೆ ಕೇವಲ ಬ್ಯಾಟ್ಸ್​​ಮನ್​​ ಆಗಿ ಉಳಿಸಿಕೊಂಡ್ರು. ಯಾವ ನಿರ್ಧಾರ ಈ ರೀತಿ ಮಾಡಲಾಯ್ತು.? ವಿಶ್ವಕಪ್​​​ನಲ್ಲಿ ಬೌಲಿಂಗ್​ ಮಾಡದಂತೆ ಸೂಚನೆ ನೀಡಿದ್ರಾ? ಹಾರ್ದಿಕ್​ ವಿಷಯದಲ್ಲಿ ಆಯ್ಕೆ ಸಮಿತಿ ಆಲೋಚನಾ ಪ್ರಕ್ರಿಯೆಯೇ ಏನೆಂದು ಗೊತ್ತಾಗುತ್ತಿಲ್ಲ. ಇದು ಮ್ಯಾನೇಜ್​​ಮೆಂಟ್​ ನಡೆಯನ್ನ ಪರೀಕ್ಷಿಸುವಂತಿದೆ ಎಂದಿದ್ದಾರೆ ಎಂಎಸ್​ಕೆ ಪ್ರಸಾದ್.

 

ಹಾರ್ದಿಕ್​ ಆಯ್ಕೆಗೂ ಮುನ್ನ ಫಿಟ್​ನೆಸ್​ ವರದಿ ಕೇಳಬೇಕಿತ್ತು..?
ಪ್ಲೇಯಿಂಗ್​ ಇಲೆವೆನ್​​​ಗೆ ಹಾರ್ದಿಕ್ ಆಯ್ಕೆಯು ನಾಯಕ ಮತ್ತು ಕೋಚ್‌ಗೆ ಬಿಟ್ಟದ್ದು. ಆದರೆ ಮೂಲಭೂತವಾಗಿ ಆಟಗಾರನು ಫಿಟ್ ಆಗದಿದ್ದರೆ, ಪ್ರಶ್ನಿಸಬೇಕಾಗಿರೋದು ಆಯ್ಕೆದಾರರನ್ನ. IPLನಲ್ಲಿ ಬೌಲಿಂಗ್ ಮಾಡದ ಹಾರ್ದಿಕ್​​​​​ರನ್ನ ವಿಶ್ವಕಪ್‌ಗೆ ಆಯ್ಕೆಗೆ ಮೊದಲು, ಫಿಟ್‌ನೆಸ್ ವರದಿ ಕೇಳಬೇಕಾಗಿತ್ತು. ಇದನ್ನೇಕೆ ಮಾಡಲಿಲ್ಲ ಎಂದು ಸಂದೀಪ್ ಪಾಟೀಲ್ ಪ್ರಶ್ನಿಸಿದ್ದಾರೆ. ಸದ್ಯ ಈ ಎಲ್ಲಾ ಬೆಳವಣಿಗೆಗಳ ನಂತರ ಹಾರ್ದಿಕ್​​ರ ಫಿಟ್​ನೆಸ್​ ವರದಿಯನ್ನ ಸಲ್ಲಿಸುವಂತೆ ಟೀಮ್​ ಮ್ಯಾನೇಜ್​ಮೆಂಟ್​ ಮತ್ತು ಸೆಲೆಕ್ಷನ್​ ಕಮಿಟಿಗೆ ಬಿಸಿಸಿಐ ಸೂಚಿಸಿದೆ.

News First Live Kannada


Leave a Reply

Your email address will not be published. Required fields are marked *