ಮಧ್ಯರಾತ್ರಿಯಿಂದಲೇ ಪೆಟ್ರೋಲ್, ಡೀಸೆಲ್ ಪರಿಷ್ಕ್ರತ ದರ ಜಾರಿ
ನಿನ್ನೆ ರಾತ್ರಿಯಿಂದಲೇ ಅಧಿಕೃತವಾಗಿ ಪೆಟ್ರೋಲ್, ಡಿಸೇಲ್‌ನ ಹೊಸ ದರ ಜಾರಿಗೆ ಬಂದಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕ್ರಮವಾಗಿ 10 ಹಾಗೂ 5 ರೂಪಾಯಿಗೆ ಇಳಿಸಿದೆ. ಅದರಂತೆಯೇ, ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 35 ರಿಂದ 25.9ಕ್ಕೆ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 24 ರಿಂದ 14.34ಕ್ಕೆ ಇಳಿಸಿದೆ. ಹೀಗಾಗಿ ಪೆಟ್ರೋಲ್ ಬೆಲೆ ₹100.63ಕ್ಕೆ ಬಂದು ನಿಂತಿದ್ದು, ಡಿಸೇಲ್‌ನ ಬೆಲೆ 85.03ಪೈಸೆಗೆ ಬಂದಿಳಿದಿದೆ.
ದೀಪಾವಳಿ ಸಂಭ್ರಮದಲ್ಲಿದ್ದವರಿಗೆ ವರುಣಾಘಾತ
ದೀಪಾವಳಿ ಸಂಭ್ರಮದಲ್ಲಿದ್ದ ಸಿಲಿಕಾನ್ ಸಿಟಿಗೆ ವರುಣ ಶಾಕ್ ಕೊಟ್ಟಿದ್ದಾನೆ. ಕೆ.ಆರ್.ಮಾರ್ಕೆಟ್, ಕಾರ್ಪೊರೇಷನ್, ಶಾಂತಿನಗರ, ಲಾಲ್ಬಾಗ್, ಸುಧಾಮನಗರ, ಟೌನ್ಹಾಲ್, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಸುರಿದ ಭಾರೀ ಮಳೆಗೆ ವಾಹನ ಸವಾರರು ತತ್ತರಿಸಿದ್ದಾರೆ. ಧಾರಾಕಾರ ಮಳೆಗೆ ರಾಜಾಜಿನಗರದ ರಾಮಮಂದಿರ ಮೈದಾನ ಜಲಾವೃತವಾಗಿ, ಮೈದಾನದಲ್ಲಿದ್ದ ಪಟಾಕಿ ಮಳಿಗೆಗಳಿಗೆ ನೀರು ನುಗ್ಗಿ ಹಾನಿಯಾಗಿವೆ. ಶಾಂತಿನಗರದ ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಪರದಾಡಿದ್ರು. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಇನ್ನೂ ನಾಲ್ಕು ದಿನ ಮಳೆ ಮುಂದುವರೆಯೋ ಸಾಧ್ಯತೆ ಇದೆ.
ಭದ್ರತೆ, ಸಂಚಾರ ನಿರ್ಬಂಧವಿಲ್ಲದೆ ಮೋದಿ ಪ್ರಯಾಣ
ದೀಪಾವಳಿ ಹಿನ್ನೆಲೆ ಭಾರತೀಯ ಸೈನಿಕರನ್ನು ಭೇಟಿಯಾಗಲೆಂದು ಜಮ್ಮು ಕಾಶ್ಮೀರಕ್ಕೆ ತೆರಳುವ ವೇಳೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಕನಿಷ್ಠ ಭದ್ರತೆ, ಸಂಚಾರ ನಿರ್ಬಂಧವಿಲ್ಲದೇ ಪ್ರಯಾಣಿಸಿದ್ದಾರೆ. ಜಮ್ಮು ಕಾಶ್ಮೀರದತ್ತ ಹೊರಟ ಪ್ರಧಾನಿ, ರಸ್ತೆ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ತೆರಳುವಾಗ ಸಂಚಾರ ನಿರ್ಬಂಧವಿಲ್ಲದೇ ಬೆಂಗಾವಲು ವಾಹನಗಳೊಂದಿಗೆ ಪ‍್ರಯಾಣಿಸಿದ್ದಾರೆ. ಪ್ರಧಾನಿ ಪ್ರಯಾಣಿಸುವಾಗ ರಿಕ್ಷಾಗಳು, ಸಾರ್ವಜನಿಕರೂ ರಸ್ತೆಯಲ್ಲಿ ಓಡಾಡುತ್ತಿದ್ದು ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಕೆಟ್ಟ ಆಡಳಿತ ಹೊಂದಿರುವ ರಾಜ್ಯಗಳಲ್ಲಿ ಯುಪಿ ನಂ.1
ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಆಘಾತ ನೀಡುವಂತ ವರದಿಯೊಂದು ಹೊರ ಬಿದ್ದಿದೆ. ದೇಶದಲ್ಲಿ ಅತ್ಯಂತ ಕೆಟ್ಟ ಆಡಳಿತವನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಇತ್ತೀಚಿನ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕದ ಪ್ರಕಾರ, ಬೆಂಗಳೂರು ಮೂಲದ ಥಿಂಕ್-ಟ್ಯಾಂಕ್ ಸಾರ್ವಜನಿಕ ವ್ಯವಹಾರಗಳ ಕೇಂದ್ರವು ಸಿದ್ಧಪಡಿಸಿದ ರಾಜ್ಯಗಳ ಆಡಳಿತದ ಅಳತೆಗೋಲಿನ ಪ್ರಕಾರ, ಕಳಪೆ ಗುಣಮಟ್ಟದ ಆಡಳಿತದಿಂದಾಗಿ ಉತ್ತರ ಪ್ರದೇಶವು ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.
ಅಮೆರಿಕದ ಶ್ವೇತಭವನದಲ್ಲಿ ದೀಪಾವಳಿ ಸಂಭ್ರಮ
ಬೆಳಕಿನ ಹಬ್ಬ ದೀಪಾವಳಿಯನ್ನು ಕೇವಲ ಭಾರತ ಮಾತ್ರವಲ್ಲದೇ ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಜಗತ್ತಿನಾದ್ಯಂತ ಅದ್ದೂರಿಯಾಗಿ ಆಚರಿಸಲಾಗ್ತಿದೆ. ಈಗ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಮ್ಮ ಪತ್ನಿಯೊಂದಿಗೆ ಮನೆಯಲ್ಲಿ ದೀಪ ಬೆಳೆಗುವ ಮೂಲಕ ದೀಪಾವಳಿ ಆಚರಿಸಿ ವಿಶ್ ಮಾಡಿದ್ದಾರೆ. ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕೂಡ ದೀಪಾವಳಿ ಆಚರಿಸಿ ಶುಭಕೋರಿದ್ದಾರೆ.
ಪಾಕಿಸ್ತಾನದಲ್ಲಿ ಸಕ್ಕರೆ ಸಂಕಷ್ಟ, 1 ಕೆಜಿಗೆ ₹145
ಪಾಕಿಸ್ತಾನವು ಸಕ್ಕರೆ ಸಂಕಷ್ಟದಲ್ಲಿ ಸಿಲುಕಿದೆ. ಒಂದು ಕೆಜಿ ಸಕ್ಕರೆ ಬೆಲೆ ಬರೋಬ್ಬರಿ 145 ರೂಪಾಯಿ ತಲುಪಿದೆ. ಅಫ್ಘಾನಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಕೊಡಿಸಲು ಪಾಕಿಸ್ತಾನ ಇನ್ನಿಲ್ಲದ ತಂತ್ರಗಳನ್ನು ಅನುಸರಿಸುತ್ತಿದೆ. ಈ ಬೆನ್ನಲ್ಲೇ ಪಾಕಿಸ್ತಾನಕ್ಕೆ ಸಂಕಷ್ಟವೊಂದು ಎದುರಾಗಿದ್ದು ಸಕ್ಕರೆ ಬೆಲೆ ತೀವ್ರ ಹೆಚ್ಚಳವಾಗಿದ್ದು ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಈಗ ಅಲ್ಲಿ ಒಂದು ಕೆ.ಜಿ ಸಕ್ಕರೆಗೆ ಹೋಲ್ಸೇಲ್ ಬೆಲೆ 140ರೂಪಾಯಿ ಇದ್ದರೆ, ರಿಟೇಲ್ ಬೆಲೆ 145 ರೂಪಾಯಿ ಇದೆ ಎಂದು ವರದಿಯಾಗಿದೆ.
‘5 ಲಕ್ಷ ಮಂದಿ ಸೋಂಕಿಗೆ ಬಲಿಯಾಗಬಹುದು’
ಯುರೋಪ್‌ನಲ್ಲಿ ಕೊರೊನಾ ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿರುವುದು ತೀವ್ರ ಆತಂಕ ಸೃಷ್ಟಿಸಿದೆ ಅಂತ ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ಮುಖ್ಯಸ್ಥ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಹ್ಯಾನ್ಸ್ ಕ್ಲೂ, ಯುರೋಪ್‌ನ 53 ದೇಶಗಳಲ್ಲಿ ಪ್ರಸ್ತುತ ಕೋವಿಡ್‌ನ ಹರಡುವ ವೇಗವು ತೀವ್ರ ಆತಂಕಕಾರಿಯಾಗಿದೆ ಅಂತ ಹೇಳಿದ್ದಾರೆ. ಕೊರೊನಾ ವೈರಸ್‌ನ ರೂಪಾಂತರ ಮಾದರಿಯಾದ ಡೆಲ್ಟಾದಿಂದ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ. ಫೆಬ್ರುವರಿ ವೇಳೆಗೆ ಯುರೋಪ್‌ನಲ್ಲಿ ಐದು ಲಕ್ಷ ಮಂದಿ ಕೊರೊನಾಗೆ ಬಲಿಯಾಗಬಹುದು ಅಂತ ಕ್ಲೂ ಅಂದಾಜಿಸಿದ್ದಾರೆ.
ನಟ ಸೂರ್ಯ ಸ್ವಾರ್ಥಿ ಎಂದ ಬಿಜೆಪಿ ಮುಖಂಡ
ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ನವೆಂಬರ್ 2 ರಂದು ಬಿಡುಗಡೆಯಾಗಿರುವ ಸೂರ್ಯ ಅಭಿನಯದ ತಮಿಳು ಚಿತ್ರ ಜೈ ಭೀಮ್ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಪರ ಹಾಗೂ ವಿರುದ್ಧ ಅಭಿಪ್ರಾಯಗಳು ಕೇಳಿಬರುತ್ತಿವೆ. ಅನೇಕ ಮಂದಿ ಸೆಲೆಬ್ರಿಟಿಗಳು ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದರೆ, ತಮಿಳುನಾಡು ಬಿಜೆಪಿ ಮುಖಂಡ ಹೆಚ್ ರಾಜಾ, ಟ್ವೀಟರ್ನಲ್ಲಿ ಸೂರ್ಯರನ್ನು ಟೀಕಿಸಿ ಸ್ವಾರ್ಥಿ ಅಂತ ಕರೆದಿದ್ದಾರೆ. ತಮಿಳುನಾಡು ಬಿಜೆಪಿ ಮುಖಂಡ ಈ ರೀತಿಯಾಗಿ ಮಾಡಿದ್ದ ಟ್ವೀಟ್ನ್ನು ಸೂರ್ಯ ಲೈಕ್ ಮಾಡಿದ್ದು, ನಟನ ಪರವಾಗಿ ಅನೇಕ ಮಂದಿ ಬಿಜೆಪಿ ಮುಖಂಡರಿಗೆ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.
ಖ್ಯಾತ ನಟಿ ತ್ರಿಷಾಗೆ ಗೋಲ್ಡನ್ ವೀಸಾ
ಖ್ಯಾತ ನಟಿ ತ್ರಿಷಾ UAE ಯಿಂದ ಗೋಲ್ಡನ್ ವೀಸಾ ಪಡೆದ ಮೊದಲ ತಮಿಳು ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. UAE ಅಧಿಕಾರಿಗಳಿಂದ ವೀಸಾ ಸ್ವೀಕರಿಸುತ್ತಿರುವ ಫೋಟೋವನ್ನು ಸ್ವತಃ ತ್ರಿಷಾ ಹಂಚಿಕೊಂಡು ಖುಷಿಪಟ್ಟಿದ್ದಾರೆ. 10 ವರ್ಷಗಳ ವೀಸಾ ಇದಾಗಿದ್ದು, ಇದು ತನ್ನಿಂತಾನೇ ನವೀಕರಣಗೊಳ್ಳುತ್ತದೆ. ಈಗಾಗಲೇ ಶಾರುಖ್, ಬೋನಿ ಕಪೂರ್, ಜಾಹ್ನವಿ, ಮೋಹನ್‌ಲಾಲ್, ಮಮ್ಮುಟ್ಟಿ, ಹಿನ್ನೆಲೆ ಗಾಯಕಿ ಕೆ.ಎಸ್.ಚಿತ್ರಾ ಕೂಡ ಗೋಲ್ಡನ್ ವೀಸಾ ಪಡೆದಿದ್ದಾರೆ.
ಟಿ-20 ವಿಶ್ವಕಪ್ ಟೂರ್ನಿಯಿಂದ ಹೊರ ನಡೆದ ವಿಂಡೀಸ್
ಟಿ-20 ವಿಶ್ವಕಪ್ನ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಪಂದ್ಯದಲ್ಲಿ ಶ್ರೀಲಂಕಾ ಜಯಭೇರಿ ಬಾರಿಸಿದ್ದು ಹಾಲಿ ಚಾಂಪಿಯನ್ ಟೂರ್ನಿಯಿಂದ ಹೊರಬಿದ್ದಿದೆ. ಅಸಲಂಕಾ ಮತ್ತು ನಿಸ್ಸಾಂಕಾರ ಅಬ್ಬರದ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಶ್ರಿಲಂಕಾ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 189 ರನ್ಗಳಿಸಿ ವಿಂಡೀಸ್ಗೆ 190 ರನ್ಗಳ ಗುರಿ ನೀಡಿತ್ತು. ಬೃಹತ್ ಮೊತ್ತವನ್ನು ಬೆನ್ನತ್ತುವಲ್ಲಿ ವಿಂಡೀಸ್ ಎಡವಿದ್ದು, 8 ವಿಕೆಟ್ ನಷ್ಟಕ್ಕೆ 169 ರನ್ಗಳನ್ನಷ್ಟೇ ಗಳಿಸಿ ಸೋಲಿಗೆ ಶರಣಾಯಿತು.