ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿಂದ ಟೀಮ್ ಇಂಡಿಯಾ ನಿರ್ಗಮಿಸಿದ್ದಾಗಿದೆ. ಈ ಕುರಿತ ಚರ್ಚೆಗಳು ಚಾಲ್ತಿಯವೆ. ಆದ್ರೆ ಈ ವೈಫಲ್ಯಕ್ಕೆ ಆಟಗಾರರು ಹಾಗೂ ಕೋಚ್ಗಳ ಸಬೂಬುಗಳು, ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿಸಿದೆ.
ಟೀಮ್ ಇಂಡಿಯಾದ ವಿಶ್ವಕಪ್ ಕನಸು ನುಚ್ಚುನೂರಾಗಿದೆ. ಸೂಪರ್-12 ಹಂತದಿಂದಲೇ ನಿರ್ಗಮಿಸುವುದರೊಂದಿಗೆ ಭಾರೀ ನಿರಾಸೆಯನ್ನೇ ಉಂಟುಮಾಡಿದೆ. ಆದ್ರೆ ಟಿ20 ವಿಶ್ವಕಪ್‌ನಿಂದ ಟೀಮ್ ಇಂಡಿಯಾ ಹೊರ ಬೀಳುತ್ತಿದ್ದಂತೆ, ತಂಡದ ಹಿನ್ನಡೆಯ ಹಿನ್ನಲೆ ಏನೆಂಬ ಪರಮಾರ್ಶೆ ನಡೆಸಲಾಗ್ತಿದೆ. ಆದ್ರೆ ಟೀಮ್ ಇಂಡಿಯಾ ಆಟಗಾರರು ಹಾಗೂ ನಿರ್ಗಮಿತ ಕೋಚ್ಗಳು ಮಾತ್ರ, ಪರೋಕ್ಷವಾಗಿ ಬಿಸಿಸಿಐಯನ್ನೇ ಗುರಿಯಾಗಿಸಿದ್ದಾರೆ.. ಇದು ಆಟಗಾರರು, ಕೋಚ್ ವರ್ಸಸ್ ಬಿಸಿಸಿಐ ಎಂಬಂತಾಗಿದೆ.
ಪಾಕಿಸ್ತಾನ, ನ್ಯೂಜಿಲೆಂಡ್ ವಿರುದ್ಧದ ಸೋಲುಗಳೇ, ಟೀಮ್ ಇಂಡಿಯಾವನ್ನ ಹೊರದಬ್ಬಿತ್ತು. ಆದ್ರೆ ಅದೃಷ್ಟ ಕೈಹಿಡಿಯುತ್ತಾ ಎಂಬ ಆಶಾಭಾವನೆ, ಸೆಮೀಸ್ ಅಸೆಯನ್ನ ಚಿಗುರಿಸಿತ್ತು. ಆದ್ರೆ ನ್ಯೂಜಿಲೆಂಡ್ ವಿರುದ್ಧ ಅಫ್ಘಾನ್ ಸೋಲು ಕನಸನ್ನ ಚಿದ್ರಗೊಳಿಸಿತ್ತು. ಈ ಕನಸು ನನಸಾಗದಿರಲು ಆಟಗಾರರಿಗೆ ವಿಶ್ರಾಂತಿ ನೀಡದಿರೋದೆ ಕಾರಣ ಅಂತಾನೇ, ವೇಗಿ ಜಸ್ಪ್ರೀತ್ ಬೂಮ್ರಾ ಸಬೂಬು ನೀಡಿದ್ರು.
‘ಖಂಡಿತವಾಗಿಯೂ, ಕೆಲವೊಂದು ಸಮಯ ಬ್ರೇಕ್ನ ಅಗತ್ಯತೆ ಇದೆ. ಕುಟುಂಬವನ್ನ ಮಿಸ್ ಮಾಡಿಕೊಳ್ಳುತ್ತೇವೆ. ನಾವು ಈ ಹಾದಿಯಲ್ಲಿ ಕಳೆದ 6 ತಿಂಗಳಿಂದ ಇದ್ದೇವೆ. ಬಬಲ್ನಲ್ಲಿರೋದು ಹಾಗೂ ಕುಟುಂಬದಿಂದ ದೂರ ಇರೋದು, ಆಟಗಾರರ ಮೇಲೆ ಪರಿಣಾಮ ಬೀರುತ್ತೆ. ಆದ್ರೆ, ಬಿಸಿಸಿಐ ಕೈಯಲ್ಲಿ ಸಾಧ್ಯವಾದಷ್ಟು ಪ್ರಯತ್ನ ಪಟ್ಟಿದೆ. ಆದ್ರೆ ಈಗ ನಾವಿರುವ ಪರಿಸ್ಥಿತಿ, ಸಂದಿಗ್ಧತೆ ಹಾಗೆ ಮಾಡುತ್ತಿದೆ. ನಾವು ಅದನ್ನ ಅಳವಡಿಸಿಕೊಳ್ಳೋ ಪ್ರಯತ್ನ ಮಾಡಿದ್ದೇವೆ. ಆದರೂ ಬಬಲ್ ಆಯಾಸ ಹಾಗೂ ಮಾನಸಿಕ ಆರೋಗ್ಯವು ಕಾಡುತ್ತದೆ’
ಬೂಮ್ರಾ, ಟೀಮ್ ಇಂಡಿಯಾ ವೇಗಿ
ಜಸ್ಟ್ ಜಸ್ಪ್ರೀತ್ ಬೂಮ್ರಾ ಮಾತ್ರವೇ ಅಲ್ಲ. ಟೀಮ್ ಇಂಡಿಯಾದ ನಿರ್ಗಮಿತ ಬೌಲಿಂಗ್ ಕೋಚ್ ಭರತ್ ಅರುಣ್ ಕೂಡ, ಇದನ್ನೇ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ. ಇನ್ನುಂದೆಜ್ಜೆ ಮುಂದೆ ಹೋಗಿ ಐಪಿಎಲ್ ಮತ್ತು ವಿಶ್ವಕಪ್ ನಡುವೆ ಸಣ್ಣ ಬ್ರೇಕ್ ಬೇಕಿತ್ತು. ಇದಕ್ಕಾಗಿಯೇ ಈಗ ಬೆಲೆತೆತ್ತಿದ್ದೇವೆ ಎಂದಿದ್ದಾರೆ..
ಆಟಗಾರರಿಗೆ ಬ್ರೇಕ್ ಬೇಕಿತ್ತು..!
‘ಕಳೆದ ಐಪಿಎಲ್ ನಂತರ ಸಣ್ಣ ವಿರಾಮವನ್ನೂ ಪಡೆದಿಲ್ಲ.. ಮನೆಗೂ ಹೋಗಿಲ್ಲ. ಕಳೆದ ಆರು ತಿಂಗಳಿಂದ ಬಯೋ ಬಬಲ್ನಲ್ಲೇ ಕಾಲ ಕಳೆಯುತ್ತಿದ್ದಾರೆ. ಇದು ದೊಡ್ಡ ಬೆಲೆ ತೆತ್ತಂತಾಗಿದೆ. ಐಪಿಎಲ್ ಹಾಗೂ ವಿಶ್ವಕಪ್ ನಡುವೆ ಸಣ್ಣ ವಿರಾಮ ಸಿಕ್ಕಿದ್ದರೂ, ಆಟಗಾರರಿಗೆ ಬಹಳಷ್ಟು ಒಳ್ಳೆಯದಾಗುತ್ತಿತ್ತು’
ಭರತ್ ಅರುಣ್, ನಿರ್ಗಮಿತ ಬೌಲಿಂಗ್ ಕೋಚ್
ಜಸ್ಪ್ರೀತ್ ಬೂಮ್ರಾ, ಭರತ್ ಅರುಣ್, 6 ತಿಂಗಳ ಬಯೋಬಬಲ್ ಬಿಡುವಿಲ್ಲದ ವೇಳಾಪಟ್ಟಿಯಿಂದ ಬ್ರೇಕ್ ಸಿಗಬೇಕಿತ್ತು ಎಂಬ ಹೇಳಿಕೆಗೆ, ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ..! ಎರಡೂ ಸೋಲುಗಳಿಗೂ ಆಯಾಸಕ್ಕೂ ಸಂಬಂಧವೇ ಇಲ್ಲ ಅಂತಾನೇ, ಬಿಗ್ಬಾಸ್ಗಳು ಗರಂ ಆಗಿದ್ದಾರೆ.
ಆಯಾಸಕ್ಕೂ ಸೋಲಿಗೂ ನಂಟಿಲ್ಲ
‘ಆಯಾಸಕ್ಕೂ ಎರಡು ಸೋಲುಗಳಿಗೂ ಸಂಬಂಧವೇ ಇಲ್ಲ. ನಮ್ಮ ಆಟಗಾರರಿಗೆ ಐಪಿಎಲ್ ಫೈನಲ್ ಬಳಿಕ ಒಂದು ವಾರ ಬ್ರೇಕ್ ಸಿಕ್ಕಿತ್ತು. ನಂತರ ಪಾಕ್ ಪಂದ್ಯದ ಬಳಿಕ ಇನ್ನೊಂದು ವಾರ ವಿರಾಮ ಸಿಕ್ಕಿತ್ತು. ಆದರೂ ದಣಿದಿದ್ದಾಗಿ ಹೇಗೆ ಹೇಳಿಕೊಳ್ಳುತ್ತಾರೆಂದು ಅರ್ಥವಾಗ್ತಿಲ್ಲ. ಆಟಗಾರರು ಚೇತರಿಸಿಕೊಳ್ಳಲು ಉತ್ತಮ ಅವಕಾಶವಿತ್ತು. ನೀವು ಒಮ್ಮೆ ಶ್ರೀಲಂಕಾ ಅಥವಾ ಬಾಂಗ್ಲಾದೇಶಗಳನ್ನ ನೋಡಿ, ಅವರಿಗೆ ಸಮಯವೇ ಸಿಕ್ಕಿರಲಿಲ್ಲ’
ಬಿಸಿಸಿಐ ಉನ್ನತಾಧಿಕಾರಿ
ಅತ್ತ ಆಟಗಾರರು, ಕೋಚ್ಗಳೂ ಬಯೋಬಬಲ್ ಹಾಗೂ ಐಪಿಎಲ್ನತ್ತ ಬೊಟ್ಟು ಮಾಡ್ತಿದ್ರೆ, ಇತ್ತ ಬಿಸಿಸಿಐ ತನ್ನ ನಡೆಯನ್ನ ಸಮರ್ಥಿಸಿಕೊಳ್ಳುತ್ತಿದೆ. ಒಟ್ನಲ್ಲಿ ಕಾರಣ ಏನೇ ಇರಲಿ, ಸದ್ಯ ಸೆಮಿಫೈನಲ್ ತಲುಪದೆಯೇ ಟೀಮ್ ಇಂಡಿಯಾ ವಿಶ್ವಕಪ್‌ನಿಂದ ಹೊರಬಿದ್ದಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಬಂದಿರೋದಂತೂ ಸುಳ್ಳಲ್ಲ.