ಪಶ್ಚಿಮ ಆಫ್ರಿಕಾದ ಮಾಲಿ ರಾಷ್ಟ್ರದಲ್ಲಿ ಅತ್ಯಂತ ಅಪರೂಪದ ಘಟನೆ ನಡೆದಿದೆ. ಇಲ್ಲಿನ 25 ವರ್ಷದ ಮಹಿಳೆಯೊಬ್ಬರು ಬರೋಬ್ಬರಿ ಒಂಭತ್ತು ಶಿಶುಗಳಿಗೆ ಏಕಕಾಲದಲ್ಲಿ ಜನ್ಮ ನೀಡಿದ್ದಾರೆ.

ನವಜಾತ ಶಿಶುಗಳಲ್ಲಿ 5 ಹೆಣ್ಣು ಮತ್ತು 4 ಗಂಡು ಮಕ್ಕಳಾಗಿದ್ದಾರೆ. ಎಲ್ಲಾ ಮಕ್ಕಳು ಹಾಗೂ ತಾಯಿ  ಆರೋಗ್ಯವಾಗಿದ್ದಾರೆ ಅಂತ ಮಾಲಿ ಆರೋಗ್ಯ ಸಚಿವ ಫಾಂಟ ಸೈಬಿ ಹೇಳಿದ್ದಾರೆ.. 25 ವರ್ಷದ ತಾಯಿ ಹಲಿಮಾ ಸಿಸ್ಸೆಯವರನ್ನ ಅಲ್ಲಿನ ಸರ್ಕಾರ ಮೊರಾಕ್ಕೋಗೆ ಕಳಿಸಿದ್ದು, ವಿಶೇಷ ಆರೈಕೆಯಲ್ಲಿಡಲಾಗಿದೆ ಎಂದು ವರದಿಯಾಗಿದೆ.

ಮಹಿಳೆಗೆ ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಿದ್ದಾಗ, 7 ಮಕ್ಕಳು ಗರ್ಭದಲ್ಲಿರುವುದಾಗಿ​ ವೈದ್ಯರು ತಿಳಿಸಿದ್ದರು ಎನ್ನಲಾಗಿದೆ. ಆದ್ರೆ ಕಳೆದ ಮಂಗಳವಾರ ಹಲಿಮಾ ಸಿಸ್ಸೆಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಿದಾಗ 9 ಮಕ್ಕಳ ಜನನವಾಗಿದ್ದು ಅಚ್ಚರಿ ಮೂಡಿಸಿದೆ.

ತಮ್ಮ ದೇಶದಲ್ಲಿ ಈ ರೀತಿ ಒಂದೇ ಬಾರಿಗೆ 9 ಮಕ್ಕಳ ಜನನವಾಗಿರುವ ಯಾವುದೇ ಉದಾಹರಣೆ ಇಲ್ಲ ಅಂತ ಮೊರಾಕ್ಕೋದ ಆರೋಗ್ಯ ಸಚಿವರು ಹೇಳಿದ್ದಾರೆ.

ಮಹಿಳೆಯರು 7 ಮಕ್ಕಳನ್ನ ಗರ್ಭದಲ್ಲಿ ಧರಿಸುವುದು ತುಂಬಾ ಅಪರೂಪ, 9 ಮಕ್ಕಳಂತೂ ಇನ್ನೂ ಅಪರೂಪ. ಇಂಥ ಪ್ರಕರಣಗಳಲ್ಲಿ ಮೆಡಿಕಲ್ ಕಾಂಪ್ಲಿಕೇಷನ್​ನಿಂದಾಗಿ ಕೆಲವು ಮಕ್ಕಳು ಬದುಕುಳಿಯುವುದಿಲ್ಲ ಎಂತಾರೆ ವೈದ್ಯರು.

ಅಂದ್ಹಾಗೆ ಈ ಹಿಂದೆಯೂ ಒಮ್ಮೆ ಮಹಿಳೆಗೆ 9 ಮಕ್ಕಳ ಜನನವಾದ ಪ್ರಕರಣ ಆಸ್ಟ್ರೇಲಿಯಾದಲ್ಲಿ ನಡೆದಿತ್ತು. 1970ರಲ್ಲಿ ಮಹಿಳೆ 9 ಮಕ್ಕಳಿಗೆ ಜನ್ಮ ನೀಡಿದ್ದರು, ಆದ್ರೆ ಆಕೆಯ ಯಾವುದೇ ಮಗು ಬದುಕುಳಿಯಲಿಲ್ಲ. ಮತ್ತೊಮ್ಮೆ 1999ರಲ್ಲಿ ಮಲೇಷ್ಯಾದಲ್ಲಿ ಮಹಿಳೆಯೊಬ್ಬರು 9 ಮಕ್ಕಳನ್ನ ಹಡೆದಿದ್ದರು. ಆಗ ಕೂಡ ಯಾವುದೇ ಮಗು 6 ಗಂಟೆಗಿಂತ ಹೆಚ್ಚು ಕಾಲ ಬದುಕುಳಿಯಲಿಲ್ಲ.

 

The post ವಿಶ್ವದಲ್ಲೇ ಅಪರೂಪ: ಏಕಕಾಲದಲ್ಲಿ 9 ಮಕ್ಕಳಿಗೆ ಜನ್ಮ ನೀಡಿದ ಪಶ್ಚಿಮ ಆಫ್ರಿಕಾದ ಮಹಿಳೆ appeared first on News First Kannada.

Source: newsfirstlive.com

Source link