ಬಾನಂಗಳದಲ್ಲಿ ಹಕ್ಕಿಯಂತೆ ಹಾರಾಡಬೇಕೆಂದು ಕನಸು ಕಂಡ ಮಾನವ ಇದೀಗ ಆಕಾಶದಲ್ಲಿ ಮೀನಿನಂತೆ ಈಜಾಡಲು ರೆಡಿಯಾಗಿದ್ದಾನೆ. ಇದೇನು ಆಕಾಶದಲ್ಲಿ ಈಜಾಡಲು ಸಾಧ್ಯವಾ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇದ್ಕೆಲ್ಲಾ ಉತ್ತರ ಎಂಬಂತೆ ಲಂಡನ್ ನಲ್ಲಿ ಈಜುಕೊಳವೊಂದು ನಿರ್ಮಾಣವಾಗಿದೆ.

ಮಾನವನ ಕಲ್ಪನೆಗಳಿಗೆ ಮಿತಿಯೇ ಇಲ್ಲ. ಭೂಮಿಯ ಮೇಲೆ ಒಂದಿಷ್ಟು ಚಮತ್ಕಾರಗಳನ್ನು ಸೃಷ್ಟಿಸ್ತಾನೇ ಇರ್ತಾನೆ. ಬಾಹ್ಯಾಕಾಶದಲ್ಲೂ ಮಾನವನ ಹೆಜ್ಜೆ ಮೂಡಿದೆ. ವೈಜ್ಷಾನಿಕವಾಗಿ ಮುಂದುವರಿದಂತೆ ಮಾನವರು ಹೊಸತನಕ್ಕೆ ಮುಂದಾಗ್ತಾನೆ ಇದ್ದಾರೆ. ಈ ಹಿಂದೆ ಭೂಮಿ ಮೇಲೆ ಮಾತ್ರ ಓಡಾಡುತ್ತಿದ್ದ ಮಾನವ ಮುಂದೊಂದು ದಿನ ಆಕಾಶದಲ್ಲಿ ಹಕ್ಕಿಯಂತೆ ಹಾರಾಡ್ಬೇಕೆಂದು ಕನಸು ಕಂಡ. ಅದ್ರಂತೆ ವಿಮಾನದಲ್ಲಿ, ವಿವಿಧ ಜೆಟ್ ಗಳಲ್ಲಿ ಹಕ್ಕಿಯಂತೆ ಹಾರಾಡಲು ಶುರು ಮಾಡಿದ. ಇಷ್ಟು ದಿನ ಆಕಾಶದಲ್ಲಿ ಹಕ್ಕಿಯಂತೆ ಹಾರಾಡ್ತಿದ್ದವರು ಇದೀಗ ಬಾನಂಗಳದಲ್ಲಿ ಮೀನಿನಂತೆ ಈಜಾಡಲು ರೆಡಿಯಾಗಿದ್ದಾರೆ. ಅರೇ ಬಾನಂಗಳದಲ್ಲಿ ಮೀನಿನಂತೆ ಈಜಾಡಲು ಸಾಧ್ಯನಾ?. ಹೌದು ಅದ್ಕೂ ಕಾಲ ಕೂಡಿ ಬಂದಿದೆ.

ಸಾಮಾನ್ಯವಾಗಿ ಮನೆಯಲ್ಲೋ, ಹೋಟೆಲ್‌, ಅಪಾರ್ಟ್ ಮೆಂಟ್ ಬಳಿ ಇರುವ ಈಜುಕೊಳವನ್ನು ನೀವೆಲ್ಲಾ ನೋಡಿರ್ತೀರಿ ಅಲ್ವಾ?  ಹೊರಾಂಗಣ ಈಜುಕೊಳ, ಒಳಾಂಗಣ ಈಜುಕೊಳ, ಇಲ್ಲಾ ಮಹಡಿಯ ಮೇಲೆ ಸ್ವಿಮ್ಮಿಂಗ್ ಪೂಲ್, ಮಹಡಿಯ ಕೆಳಗಡೆ ಇರುವ ಸ್ವಿಮ್ಮಿಂಗ್ ಪೂಲನ್ನು ನೇರವಾಗಿ ನೋಡಿಲ್ಲವಾದ್ರೂ ಕಡೇ ಪಕ್ಷ ಯ್ಯೂಟೂಬಲ್ಲಾದ್ರೂ ನೋಡಿರ್ತೀರಾ ಅಲ್ವಾ..? ಅದ್ಕಿಂತ ಒಂದು ಹೆಜ್ಜೆ ಮುಂದೆ ಎಂಬಂತೆ ಹಡಗುಗಳಲ್ಲಿ ಕೂಡ ಸ್ವಿಗ್ಮಿಂಗ್ ಪೂಲ್ ಇರುತ್ತೆ. ಈ ಮೂಲಕ ಭೂಮಿ ಮೇಲೆ ಮಾತ್ರವಲ್ಲ, ಸಾಗರದ ಮೇಲೂ ಈಜಾಡುತ್ತಾ ಚಲಿಸುವುದು ಕೂಡ ಬಂದ್ ಬಿಟ್ಟಿತ್ತು. ಆದ್ರೆ ಇದೀಗ ಸ್ವಿಮ್ಮಿಂಗ್ ಪೂಲ್ ಇರುವುದು ಭೂಮಿ ಮೇಲೋ ಅಥವಾ ಸಾಗರದ ಮೇಲೆ ಅಲ್ಲ.. ಬದಲಾಗಿ ಆಕಾಶದ ಮೇಲೆ.

ಇದು ಸಮಾನ್ಯ ಈಜುಕೊಳವಲ್ಲ. ಈಜು ಕೊಳಕ್ಕೆ ಇನ್ನೊಂದು ಈಜುಕೊಳ ಸಾಟಿಯಾಗಲು ಸಾಧ್ಯವಿಲ್ಲ. ಇದು ಜಗತ್ತಿನ ಮೊಟ್ಟ ಮೊದಲ ಫ್ಲೈಯಿಂಗ್ ಈಜುಕೊಳ. ಈ ಈಜುಕೊಳದ ಗತ್ತೆ ಬೇರೆ.. ಇದ್ರಲ್ಲಿ ಈಜಾಡುವ ಗಮ್ಮತ್ತೆ ಬೇರೆ. 1967ರಲ್ಲಿ ನ್ಯೂಯಾರ್ಕ್ ನಲ್ಲಿ ಜಗತ್ತಿನ ಮೊಟ್ಟ ಮೊದಲ ಚಲಿಸುವ ಈಜುಕೊಳವನ್ನ ನಿರ್ಮಿಸಲಾಗಿತ್ತು. ಚಲಿಸುವ ಗಾಡಿಯ ಹಿಂದೇನೇ ಇದ್ದ ಈ ಈಜುಕೊಳದಲ್ಲಿ ಮಕ್ಕಳು ಈಜುತ್ತಾ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗ್ತಿದ್ರು. ಈ ಮೂವಿಂಗ್ ಸ್ವಿಮ್ಮಿಂಗ್ ಪೂಲ್ ಜಗತ್ತಿನ ಅಚ್ಚರಿಗೂ ಕಾರಣವಾಗಿತ್ತು. 1967-2021ರವರೆಗೆ ನೂರಾರು ಬಗೆಯ ಈಜುಕೊಳಗಳು ವಿಶ್ವದಾದ್ಯಂತ ನಿರ್ಮಾಣ ಮಾಡಲಾಗಿದೆ. ಆದ್ರೆ ಇದುವರೆಗೆ ಯಾವ ದೇಶವು ನಿರ್ಮಾಣ ಮಾಡದ ಈಜುಕೊಳವನ್ನ ಇಂಗ್ಲೆಂಡ್ ನಿರ್ಮಾಣ ಮಾಡಿದೆ.

ಲಂಡನ್ ನಲ್ಲಿ ನಿರ್ಮಾಣವಾಯ್ತು ಹಾರಾಡುವ ಈಜುಕೊಳ
ಇಲ್ಲಿ ಈಜು ಪ್ರಿಯರಿಗೆ ಆಕಾಶದಲ್ಲಿ ತೇಲಾಡಿದ ಅನುಭವ

ವಿಶ್ವದ ದುಬಾರಿ ನಗರ ಲಂಡನ್ ಅಂದ್ರೆನೇ ಹಾಗೆ. ಲಂಡನ್‌ ರಸ್ತೆಗಳಲ್ಲಿ ಸಂಚರಿಸಿದವರಿಗೆ ಸಿಗುವ ಮಜಾವೇ ಬೇರೆ. ಶ್ರೀಮಂತಿಕೆಯನ್ನು ಅಷ್ಟರ ಮಟ್ಟಿಗೆ ಗುಡ್ಡೆ ಹಾಕಿಕೊಂಡಿದೆ ಲಂಡನ್. ಹೆಜ್ಜೆ ಇಟ್ಟಲೆಲ್ಲಾ ಕಾಣುವ ಬೃಹತ್ ಗಗನಚುಂಬಿ ಕಟ್ಟಡಗಳು, ಸುಂದರ ರಸ್ತೆಗಳು ಅಬ್ಬಾ.. ಈ ಲಂಡನ್ ಗೆ ಲಂಡನೇ ಸಾಟಿ. ಅಲ್ಲಿಯ ಒಂದೊಂದು ದೃಶ್ಯಗಳು ಲಂಡನ್​​ನ ಶ್ರೀಮಂತಿಕೆಯನ್ನು ಜಗತ್ತಿನೆದುರು ಸಾರಿ ಸಾರಿ ಹೇಳ್ತವೆ. ಇದೇ ಲಂಡನ್ನ ಮುಕುಟಕ್ಕೆ ಇದೀಗ ಮತ್ತೊಂದು ಗರಿ ಬಂದಿದೆ.

ಈ ದೃಶ್ಯ ನೋಡಿ.. ನೋಡಿದ್ಕಕ್ಷಣ ಇದ್ಯಾವುದೋ ಹಾಲಿವುಡ್ ಸಿನಿಮಾದ ರೀಲ್ ದೃಶ್ಯ ಅನ್ಕೋಬೇಡಿ. ಇಲ್ಲಾ ಇದ್ಯಾರೋ ಗ್ರಾಫಿಕ್ಸ್ ಮಾಡಿರ್ಬೇಕು ಅಂತ ತಿಳ್ಕೋಬೇಡಿ. ಯಾಕಂದ್ರೆ ಮೇಲ್ನೋಟಕ್ಕೆ ತೇಲುತ್ತಾ ಈಜಾಡುವ ಈ ಈಜುಕೊಳ ಗ್ರಾಫಿಕ್ಸ್ ತರ ಗೋಚರವಾದ್ರೂ ಇದು ರಿಯಲ್ ದೃಶ್ಯ. ಎರಡು ಕಟ್ಟಡಗಳ ನಡುವೆ ಈಜುಕೊಳವನ್ನ ನಿರ್ಮಾಣ ಮಾಡಲಾಗಿದೆ. ಈ ಈಜುಕೊಳ ಪಾರದರ್ಶಕ ಮಾತ್ರವಲ್ಲದೇ, ಹಾರಾಡುವ ಈಜು ಕೊಳವಾಗಿದೆ. ಜನರು ಈಜಾಡುತ್ತಿರುವ ದೃಶ್ಯ ನೋಡಲು ಎಷ್ಟೊಂದು ಸುಂದರವಾಗಿದೆ ಅಲ್ವಾ..? ಇನ್ನೂ ಇಲ್ಲಿ ಈಜಾಡಿದ್ರೆ ಅನುಭವ ಹೇಗಿರ್ಬೇಡ ಹೇಳಿ. ಇದುವೇ ನೋಡಿ ಲಂಡನ್ ನಲ್ಲಿ ನಿರ್ಮಾಣವಾಗಿರುವ ಹಾರುವ ಹಾಗೂ ಪಾರದರ್ಶಕವಾದ ಈಜುಕೊಳ.

ವಿಶ್ವದ ಮೊಟ್ಟ ಮೊದಲ ‘ಸ್ಕೈ ಪೂಲ್’ ಲಂಡನ್ ನಲ್ಲಿ ನಿರ್ಮಾಣವಾಗಿದೆ. ನೈರುತ್ಯ ಲಂಡನ್ ನ ರಾಯಭಾರ ಕಚೇರಿಯ ಎರಡು ಗಗನಚುಂಬಿ ಅಪಾರ್ಟ್ಮೆಂಟ್ಗಳ 10ನೇ ಮಹಡಿಯ ಮಧ್ಯದಲ್ಲಿ ಈ ಈಜುಕೊಳವಿದೆ. ಇದೀಗ ಈ ಈಜುಕೊಳ ಜಗತ್ತಿನಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡ್ತಾ ಇದೆ. ಒಮ್ಮೆಯಾದ್ರೂ ಈ ಈಜುಕೊಳದಲ್ಲಿ ಈಜಬೇಕೆಂದು ಜನರು ಉತ್ಸುಕರಾಗಿದ್ದಾರೆ. ಇದ್ಕಾಗಿ ಕೊರೊನಾದ ನಡುವೆಯೂ ವಿಶ್ವದ ನಾನಾ ಕಡೆಯಿಂದ ಆನ್ ಲೈನ್ ಬುಕ್ಕಿಂಗಾಗಿ ಜನರು ಮುಗಿ ಬಿದ್ದಿದ್ದಾರೆ.

ಹಾರುವ ಮತ್ತು ಪಾರದರ್ಶಕ ಈಜುಕೊಳದ ವಿಶೇಷತೆ ಏನು?
ಭೂಮಿಯಿಂದ ಈಜುಕೊಳ್ಕಕ್ಕೆ ಇರುವ ಎತ್ತರವೆಷ್ಟು ಗೊತ್ತಾ?

ಈ ಈಜುಕೊಳವು ಭೂಮಿಯಿಂದ 115 ಅಡಿ ಎತ್ತರದಲ್ಲಿದೆ. 82 ಅಡಿ ಉದ್ದವಿರುವ ಈ ಈಜುಕೊಳದಲ್ಲಿ ಈಜಾಡಿದ್ರೆ ಆಕಾಶದಲ್ಲಿಯೇ ಈಜಾಡಿದಂತಹ ಅನುಭವ ಸಿಗಲಿದೆ. ಇಲ್ಲಿ ಈಜಾಡುವ ಒಳಗಡೆಯ ದೃಶ್ಯಗಳು ಹೊರಗಡೆ ಸ್ಪಷ್ಟವಾಗಿ ಕಾಣುತ್ತೆ. ಈ ಈಜುಕೊಳದ ಮೇಲ್ಚಾವಣಿಯಲ್ಲಿ ಬಾರ್​ ಮತ್ತು ಸ್ಪಾವನ್ನು ಸಹ ನಿರ್ಮಿಸಲಾಗಿದೆ. ಈ ಈಜುಕೊಳದಲ್ಲಿ 1,48,000 ಲೀಟರ್ ನೀರು ಮತ್ತು ಎರಡು ವಸತಿ ಕಟ್ಟಡಗಳ ನಡುವೆ ಈಜುಗಾರರಿಗೆ 35 ಮೀಟರ್ ಗಾಳಿಯಲ್ಲಿ ತೇಲುವಂತೆ ಕೊಳವನ್ನು ನಿರ್ಮಿಸಲಾಗಿದೆ . ಈ ಅದ್ಭುತ ಈಜುಕೊಳವನ್ನು ಎಕ್ಲರ್ ಸೇ ಎಂಬ ರಚನಾತ್ಮಕ ಇಂಜಿನಿಯರ್ ನಿರ್ಮಾಣ ಮಾಡಿದ್ದಾರೆ.

ಪ್ರತಿಷ್ಠೆಗಾಗಿ ಇಂತಹ ಈಜುಕೊಳ ನಿರ್ಮಿಸಿತಾ ಲಂಡನ್?
ಲಂಡನ್ ಪ್ರತಿಷ್ಠೆಗಾಗಿ ಕಟ್ಟಡಗಳ ನಡುವೇ ಈಜುಕೊಳವನ್ನು ನಿರ್ಮಾಣ ಮಾಡಿರಬಹುದು. ಆದ್ರೆ ಇಂತಹ ಹೊಸ ಹೊಸ ಆವಿಷ್ಕಾರಗಳು ಬಂದಂತೆ ಸಮಸ್ಯೆಗಳು ಕೂಡ ಮನುಷ್ಯರನ್ನು ಹಿಂಬಾಲಿಸಲು ಶುರುಮಾಡುತ್ತೆ. ಒಂದು ವೇಳೆ ಆ ಕಟ್ಟಡಗಳಿಗೆ ಏನಾದ್ರೂ ಹಾನಿಯಾದ್ರೆ ಕೋಟ್ಯಾಂತರ ರುಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಈ ಈಜುಕೊಳ ದೊಡ್ಡ ಮಟ್ಟದಲ್ಲಿ ಅಪಾಯಕ್ಕೆ ತುತ್ತಾಗಲಿದೆ. ಇವು ಮುಂದೆ ಮನುಷ್ಯರ ಜೀವಕ್ಕೂ ಕುತ್ತು ತರುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ಜಗತ್ತಿನಲ್ಲಿ ಒಂದಿಲ್ಲೊಂದು ವಿದ್ಯಾಮಾನಗಳು ನಡೆಯುತ್ತಲ್ಲೆ ಇರುತ್ತದೆ. ಅದ್ರಲ್ಲೂ ಜಗತ್ತಿನ ಸೂಪರ್ ಪವರ್ ದೇಶಗಳು ತಮ್ಮ ಹೆಸರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೊಳಪು ತುಂಬಲು ವಿಭಿನ್ನ ತಂತ್ರಜ್ಞಾನಗಳನ್ನು ಅನುಸರಿಸುತ್ತಲೇ ಇದೆ. ಅದ್ರಲ್ಲೂ ಆರ್ಥಿಕವಾಗಿ ಸಬಲವಾಗಿರುವ ಲಂಡನ್ ಒಂದು ಹೆಜ್ಜೇ ಮುಂದೆನೇ ಇಡ್ತಿದೆ. ಭೂಮಿಯಲ್ಲೂ ಮಾತ್ರವಲ್ಲದೇ ಭೂಮಿಗಿಂತ 115 ಅಡಿ ಎತ್ತರದಲ್ಲೂ ಮಾನವ ಈಜಾಡುವ ಕಾಲ ಬಂದೇ ಬಿಡ್ತು. ಮುಂದೇ ಇನ್ನೇನು ಬರುತ್ತೋ ಎಂಬುವುದನ್ನು ಕಾದು ನೋಡಬೇಕಾಗಿದೆ.

ಏನೇ ಆಗಲಿ ಎರಡು ಕಟ್ಟಡದ ನಡುವೆ ನಿರ್ಮಾಣವಾಗಿರುವ ಈ ಈಜುಕೊಳ ತನ್ನ ವಿಭಿನ್ನತೆಯಿಂದ ಜನರ ಗಮನವನ್ನಂತೂ ಸೆಳೀತಾ ಇದೆ. ಈ ಕೊಳದಲ್ಲಿ ಒಮ್ಮೆ ಈಜಬೇಕೆಂದು ಈಜುಪ್ರಿಯರು ಈಗಾಗಲೇ ಆನ್ ಲೈನ್ ನಲ್ಲಿ ಬುಕಿಂಗ್ ಮಾಡ್ತಿದಾರೆ.

The post ವಿಶ್ವದಲ್ಲೇ ಫಸ್ಟ್​: 2 ಕಟ್ಟಡಗಳ ಮಧ್ಯೆ ‘ಸ್ಕೈ ಸ್ವಿಮ್ಮಿಂಗ್​​​ಪೂಲ್’, ಇದರ ವಿಶೇಷತೆ ಏನು? appeared first on News First Kannada.

Source: newsfirstlive.com

Source link