ಇಂದು ಮನುಷ್ಯ ಎಲ್ಲದಕ್ಕಿಂತಲೂ ಮುಖ್ಯವಾಗಿ ತನ್ನ ಆರೋಗ್ಯದ ಬಗ್ಗೆ ಗಮನ ಕೊಡುತ್ತಿದ್ದಾನೆ. ಎಷ್ಟೇ ಕಷ್ಟವಾದರೂ ಪರವಾಗಿಲ್ಲ ತನ್ನ ದೇಹದ ಆರೋಗ್ಯ ಉತ್ತಮವಾಗಿದ್ದರೆ ಸಾಕು ಎಂಬಷ್ಟರ ಮಟ್ಟಿಗೆ ಜನರು ಹೋಗಿದ್ದಾರೆ. ಇನ್ನು ಕೋವಿಡ್  ಬಂದ ನಂತರ ಆರೋಗ್ಯದ ಮೇಲಿನ ಕಾಳಜಿ, ಶುಚಿತ್ವ ಹೆಚ್ಚಾಗುತ್ತಿದೆ ಅಂದ್ರೆ ತಪ್ಪಾಗುವುದಿಲ್ಲ. ಇಂದು (ಮಾರ್ಚ್ 11) ವಿಶ್ವ ಕಿಡ್ನಿ ದಿನವಾಗಿದ್ದು, ನಮ್ಮ ಕಿಡ್ನಿಯನ್ನು ಹೇಗೆ ಆರೋಗ್ಯವಾಗಿಡಬಹುದು ಎಂಬುದನ್ನು ಗಮನಿಸೋಣ.

ಈಗಾಗಲೇ ಬೇಸಿಗೆ ಶುರುವಾಗಿದ್ದು, ತಾಪಮಾನ ಹೆಚ್ಚುತ್ತಾ ಹೋಗುತ್ತಿದೆ. ಈ ವೇಳೆಯಲ್ಲಿ ನಾವು ಯಾವೆಲ್ಲ ಮುಂಜಾಗ್ರತಾ ಕ್ರಮಗಳನ್ನ ಅನುಸರಿಸಬೇಕು, ಆರೋಗ್ಯವಾಗಿರಲು ಏನೆಲ್ಲ ಮಾಡಬೇಕು ಎಂಬುದನ್ನ ಧರ್ಮಶಿಲಾ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾಕ್ಟರ್ ಸುಮನ್ ತಲಾ ಸಲಹೆ ನೀಡಿದ್ದಾರೆ. ಹಾಗಾದ್ರೆ ಬನ್ನಿ ನಾವು ಕಿಡ್ನಿಯನ್ನು ಕಾಪಾಡಿಕೊಳ್ಳಲು ಮತ್ತು ಆರೋಗ್ಯವಾಗಿಡಲು ಏನು ಮಾಡಬೇಕು ಎಂಬುದನ್ನ ನೋಡೋಣ .

ಹೆಚ್ಚು ನೀರು ಕುಡಿಯಬೇಕು :

ಇದೀಗ ಬೇಸಿಗೆ ಹೆಚ್ಚಿರುವುದರಿಂದ ಬೆವರು ಬರುವುದು ಸಾಮಾನ್ಯ. ಇದ್ರಿಂದ ದೇಹದಿಂದ ನೀರಿನ ಅಂಶ ಹೊರಗೆ ಹೋಗುತ್ತದೆ. ಇದ್ರಿಂದಾಗಿ ಅತಿ ಹೆಚ್ಚು ನೀರನ್ನು ಸೇವಿಸಬೇಕು. ದಿನಕ್ಕೆ 10-12 ಲೋಟ ನೀರನ್ನು ಕುಡಿಯಬೇಕು. ಇದ್ರ ಜೊತೆ ಹಣ್ಣುಗಳನ್ನು ತಿಂದರೆ ದೇಹದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸುತ್ತದೆ ಹಾಗೂ ಕಿಡ್ನಿ ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ.

ಕಡಿಮೆ ಪ್ರಮಾಣದ ಉಪ್ಪು ಸೇವನೆ : ಹೆಚ್ಚು ಹೆಚ್ಚು ಉಪ್ಪನ್ನು ಸೇವಿಸುವುದರಿಂದ ರಕ್ತದ ಒತ್ತಡ ಜಾಸ್ತಿಯಾಗುತ್ತದೆ. ರಕ್ತದ ಒತ್ತಡ ಹೆಚ್ಚಾದಾಗ ಸಾಮಾನ್ಯವಾಗಿ ಕಿಡ್ನಿಯ ಕೆಲಸ ಹೆಚ್ಚಾಗುತ್ತದೆ. ಇದ್ರಿಂದ್ರ ದಿನದಲ್ಲಿ 4-5 ಗ್ರಾಂ ಉಪ್ಪನ್ನು ತಿಂದರೆ ಸಾಕು.

ಫೈಬರ್ ಅಂಶವುಳ್ಳ ಆಹಾರಗಳ ಸೇವನೆ : ಫೈಬರ್ ಯುಕ್ತ ಆಹಾರ ಕಿಡ್ನಿ ಸಂಬಂಧಿ ಕಾಯಿಲೆ ಇರುವ ವ್ಯಕ್ತಿಗಳಿಗೆ  ತುಂಬಾ ಉತ್ತಮ ಎಂದು ವೈದ್ಯರು ಸಲಹೆ ಮಾಡುತ್ತಾರೆ. ಕಿಡ್ನಿ ಸಮಸ್ಯೆ ಎದುರಿಸುತ್ತಿರುವವರು ಬೀನ್ಸ್, ಬಟಾಣಿ, ಹಣ್ಣುಗಳು, ಕಲ್ಲಂಗಡಿಯಂತಹ ಹಣ್ಣುಗಳನ್ನು ಸೇವಿಬೇಕು.

ಹೊರಗಿನ ಆಹಾರಕ್ಕೆ ಕಡಿವಾಣ : ಪುರುಸೊತ್ತಿಲ್ಲದ ಈ ಕಾಲದಲ್ಲಿ ಏನಾದ್ರೂ ಪರವಾಗಿಲ್ಲ ಒಂಚೂರು ಹೊಟ್ಟೆಗೆ ಬಿದ್ರೆ ಸಾಕಪ್ಪ ಅಂತ ಜನ ಹೋಟೆಲ್, ಪಾಸ್ಟ್ ಫುಡ್ ಸೆಂಟರ್ ಗಳಲ್ಲಿ ಆಹಾರ ಸೇವನೆ ಮಾಡುತ್ತಾರೆ. ಇಲ್ಲಿ ಅತಿ ಹೆಚ್ಚು ಸಕ್ಕರೆ, ಉಪ್ಪು ಸೇರಿದಂತೆ ಮಸಾಲೆ ಪದಾರ್ಥಗಳನ್ನು ಹಾಕಿದ್ದು, ಫುಡ್ ಪಾಯಿಸನ್ ಸೇರಿದಂತೆ ಕಿಡ್ನಿಗೂ ಹೊಡೆತ ಬೀಳುತ್ತದೆ.

ಸ್ನಾಯುಗಳಿಗೆ ಅತಿಯಾಗಿ ಒತ್ತಡ ಕೊಡಬೇಡಿ : ಮೂತ್ರಪಿಂಡ ಆನಾರೋಗ್ಯಕ್ಕೆ ಸ್ನಾಯುವಿನ ಬಳಲಿಕೆ ಅಪಾಯಕಾರಿ ಎಂದು ಕೆಲವೇ ಜನರಿಗೆ ತಿಳಿದಿದೆ. ತೀವ್ರವಾದ ಸ್ನಾಯು ನೋವಾದರೆ ರಕ್ತ ಪ್ರವಾಹದಲ್ಲಿ ಪ್ರೋಟೀನ್ ಸೋರಿಕೆಗೆ ಕಾರಣವಾಗುತ್ತದೆ. ಇದು ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಬಹುದು. ಇದನ್ನು ರಾಬ್ಡೋಮಿಯೊಲಿಸಿಸ್ ಎಂದು ಕರೆಯಲಾಗುತ್ತದೆ. ಈ ಕಾರಣಕ್ಕಾಗಿ ನಿಯಮಿತವಾಗಿ ವ್ಯಾಯಾಮ, ಜಿಮ್  ತಾಲೀಮು ಮಾಡುವ ಮೂಲಕ ದೇಹದ ಒತ್ತಡವನ್ನು ಕಡಿಮೆ ಮಾಡಿ.

ಈ ಮೇಲಿನ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಮೂತ್ರಪಿಂಡ ವೈಫಲ್ಯತೆಯನ್ನು ತಡೆಯಬಹುದು. ಈ ಕೆಳಕಂಡ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ

  • ಮೂತ್ರದ ಬಣ್ಣ ಬದಲಾವಣೆ
  • ದುರ್ವಾಸೆ ಮೂತ್ರ
  • ಮೂತ್ರವನ್ನು ವಿಸರ್ಜಿಸುವಾಗ ಸುಟ್ಟಂತಹ ಅನುಭವ
  • ವಾಕರಿಕೆ, ವಾಂತಿಯ ಲಕ್ಷಣಗಳು
  • ರಕ್ತ ಹೀನತೆ
  • ಚರ್ಮದ ತುರಿಕೆ
  • ಬೆನ್ನು ನೋವು ಹಾಗೂ ಹೊಟ್ಟೆ ನೋವು

ಆರೋಗ್ಯ – Udayavani – ಉದಯವಾಣಿ
Read More