ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಮುಕ್ತಾಯವಾಗಿದೆ. ಆರು ದಿನಗಳು ನಡೆದ ಈ ಮಳೆಯಾಟದ ಪಂದ್ಯ, ಭಾರೀ ನಿರಾಸೆ ಮೂಡಿಸಿತು. ಡ್ರಾನಲ್ಲಿ ಅಂತ್ಯಗೊಂಡರು, ಕೆಲ ಆಟಗಾರರು ಮಾತ್ರ ತಮ್ಮ ಬೊಂಬಾಟ್ ಪ್ರದರ್ಶನದ ಮೂಲಕ ಪಂದ್ಯದ ಕಾವೇರಿಸಿದರು. ಮಳೆಯಲ್ಲಿ ತಣ್ಣಗಾಗಿದ್ದ ಪಂದ್ಯದ ಕಾವೇರಿಸಿ ಆ ಆಟಗಾರರು ಯಾರು..? ಬನ್ನಿ ನೋಡೋಣ

ಹೈವೋಲ್ಟೇಜ್, ಹೈ ಕ್ಯೂರಿಯಾಸಿಟಿ ಹುಟ್ಟುಹಾಕಿದ್ದ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಫೈನಲ್ ಪಂದ್ಯ, ನಿರಾಸೆಯ ಅಂತ್ಯ ಕಂಡಿದೆ. ಮಳೆಯ ಕಾರಣ ಪ್ರತಿಷ್ಠಿತ ಪಂದ್ಯದಲ್ಲಿ, 6 ದಿನಗಳ ಆಟದಲ್ಲಿ ಮಳೆಯಾಟವೇ ಹೆಚ್ಚಾಗಿದ್ದು, ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು. ಇದೆಲ್ಲದರ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​​ನಲ್ಲಿ ಅಭಿಮಾನಿಗಳ ಗಮನ ಸೆಳೆದ ಐದು ಅಂಶಗಳಿವೆ

1. ಟೂರ್ನಿಯ ಗರಿಷ್ಠ ವಿಕೆಟ್ ಟೇಕರ್ ಅಶ್ವಿನ್
ವಿಶ್ವ ಟೆಸ್ಟ್​ ಚಾಂಪಿಯನ್​​​ಶಿಪ್ ಫೈನಲ್​​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 2 ವಿಕೆಟ್ ಉರುಳಿಸಿದ ಆಫ್​ ಸ್ಪಿನ್ನರ್ ಅಶ್ವಿನ್, 2ನೇ ಇನ್ನಿಂಗ್ಸ್​​ನಲ್ಲಿ ಮೋಡಿ ಮಾಡಿದ್ರು. ಫೈನಲ್​ ಪಂದ್ಯ 2ನೇ ಇನ್ನಿಂಗ್ಸ್​ ಆರಂಭದಲ್ಲೇ ಟಾಮ್​ ಲಾಥಮ್​, ಡಿವೋನ್​ ಕಾನ್ವೆ ವಿಕೆಟ್​​ ಕಬಳಿಸಿ ಟೀಮ್ ಇಂಡಿಯಾಕ್ಕೆ ಬ್ರೇಕ್​ ಥ್ರೂ ನೀಡಿದ್ರು. ಡಿವೋನ್​ ಕಾನ್ವೆ ವಿಕೆಟ್​​ನೊಂದಿಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಟೂರ್ನಿಯಲ್ಲಿ ಗರಿಷ್ಠ ವಿಕೆಟ್​ ಕಬಳಿಸಿದ ಬೌಲರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾದ್ರು.

2. ಮಳೆಯಾಟದ ನಡುವೆ ಕೈಲ್ ಜೆಮಿಸನ್ ಮಿಂಚು
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​​ ಪಂದ್ಯಕ್ಕೆ, ಮೊದಲ ದಿನವೇ ಮಳೆ ಅಡ್ಡಿಪಡಿಸಿತು. ಆದ್ರೆ 2ನೇ ದಿನ ಅಭಿಮಾನಿಗಳಿಗೆ ಕಿಕ್ ನೀಡಿದ್ದು ಕಿವೀಸ್ ವೇಗಿ ಕೈಲ್ ಜಮಿಸನ್ ಪ್ರದರ್ಶನ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಕ್ಕೆ, ಜೇಮಿಸನ್ ವಿಲನ್ ಆದ್ರು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್ ವಿಕೆಟ್ ಪಡೆದ ಕಿವೀಸ್ ವೇಗಿ, ಟೀಮ್ ಇಂಡಿಯಾಕ್ಕೆ ಆಘಾತ ನೀಡಿದ್ದರು.

ನಂತರ ಇಶಾಂತ್​ ಶರ್ಮಾ, ಜಸ್​ಪ್ರೀತ್​ ಬೂಮ್ರಾ ವಿಕೆಟ್​​ ಉರುಳಿಸಿದ ಜೇಮಿಸನ್, ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​ಗೆ ಅಂತ್ಯಹಾಡಿದರು. 22 ಓವರ್​ ಬೌಲ್ ಮಾಡಿದ ಜಮಿಸನ್, 31 ರನ್​ ನೀಡಿ 5 ವಿಕೆಟ್ ಪಡೆದು ಮಿಂಚಿದ್ರು. ಎರಡನೇ ಇನ್ನಿಂಗ್ಸ್​ನಲ್ಲೂ ಜೇಮಿಸನ್, ಕೊಹ್ಲಿ, ಪುಜಾರ ವಿಕೆಟ್ ಪಡೆದು ಟೀಮ್ ಇಂಡಿಯಾಕ್ಕೆ ಸಿಂಹಸ್ವಪ್ನರಾದ್ರು.

3. ಸೌತ್​ಹ್ಯಾಂಪ್ಟನ್​​ನಲ್ಲಿ ಡೆವೊನ್ ಕಾನ್ವೆ ಗುಡುಗು
ಸೌತ್​ಹ್ಯಾಂಪ್ಟನ್​ನ ಕಠಿಣ ಪಿಚ್​ನಲ್ಲಿ ಬೊಂಬಾಟ್ ಬ್ಯಾಟಿಂಗ್ ನಡೆಸಿದ್ದು ಕಿವೀಸ್​ ಓಪನರ್​ ಡೆವೊನ್ ಕಾನ್ವೆ. ಪ್ರಬುದ್ದತೆಯ ಬ್ಯಾಟಿಂಗ್ ನಡೆಸಿದ ಕಾನ್ವೆ, ಟೀಮ್ ಇಂಡಿಯಾ ಬೌಲರ್​​ಗಳನ್ನ ಕಾಡಿದರು. ಬರೋಬ್ಬರಿ 153 ಎಸೆತ ಎದುರಿಸಿದ ಕಾನ್ವೆ, 6 ಬೌಂಡರಿ ಒಳಗೊಂಡ 54 ರನ್ ಗಳಿಸಿದರು. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಈ ಅರ್ಧಶತಕ ಉಭಯ ಇನ್ನಿಂಗ್ಸ್​ಗಳಿಂದ ಬಂದ ಏಕೈಕ ಅರ್ಧಶತಕವಾಗಿದೆ.

4. ಟೀಮ್ ಇಂಡಿಯಾ ಪರ ಬರಲಿಲ್ಲ ಅರ್ಧಶತಕ
ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ನಲ್ಲಿ ಭಾರತೀಯ ಅಭಿಮಾನಿಗಳಿಗೆ ಹೆಚ್ಚು ನಿರಾಸೆ ಮೂಡಿಸಿದ್ದು, ಯಾವೊಬ್ಬ ಭಾರತೀಯ ಬ್ಯಾಟ್ಸ್​ಮ್ಯಾನ್​​ ಕೂಡ ಸಾಲಿಡ್ ಪರ್ಫಾಮೆನ್ಸ್​ ನೀಡಲಿಲ್ಲ. ಕ್ಯಾಪ್ಟನ್ ವಿರಾಟ್, ರಹಾನೆ ಅರ್ಧಶತಕ ಅಂಚಿನಲ್ಲಿ ಎಡವಿ ನಿರಾಸೆ ಮೂಡಿಸಿದರೆ, ರೋಹಿತ್ ಶರ್ಮಾ, ಶುಭ್​ಮನ್​ ಗಿಲ್, ಪೂಜಾರ ಸಹ, 50ರ ಗಡಿ ತಲುಪಲೇ ಇಲ್ಲ. ಇದು ಸಹಜವಾಗಿಯೇ ಭಾರತೀಯ ಫ್ಯಾನ್ಸ್​ ಬೇಸರಕ್ಕೆ ಕಾರಣವಾಗಿದೆ.

5. ಸ್ಪೀಡ್​​​​​​ಸ್ಟರ್​ ಮೊಹಮ್ಮದ್ ಶಮಿಯ ಸೂಪರ್ ಸ್ಪೆಲ್
ಒಂದೆಡೆ ಮಳೆಯಿಂದಾಗಿ ಕಳೆಗುಂದಿದ್ದ ಪಂದ್ಯಕ್ಕೆ ಕಳೆ ನೀಡಿದ್ದು, ಸ್ವಿಂಗ್ ಕಿಂಗ್ ಮೊಹಮ್ಮದ್ ಶಮಿ. ಇನ್ ಆ್ಯಂಡ್ ಔಟ್​ ಸ್ವಿಂಗ್ ಮೂಲಕ ಎದುರಾಳಿಗಳನ್ನ ಕಾಡಿದ ಸ್ಟೀಡ್​​​​​ಸ್ಟರ್​ ಶಮಿ, ಟೀಮ್ ಇಂಡಿಯಾ ಹೋರಾಟಕ್ಕೆ ಜೀವ ತುಂಬಿದರು. 5ನೇ ದಿನದಾಟ ರಾಸ್ ಟೇಲರ್ ವಿಕೆಟ್ ಉರುಳಿಸಿ ಬ್ರೇಕ್ ಕೊಟ್ಟ ಶಮಿ, ನಂತರ ವಾಟ್ಲಿಂಗ್ , ಗ್ರಾಂಡ್​​ ಹೋಮ್, ಜೆಮಿಸನ್ ವಿಕೆಟ್​ ಪಡೆದು ಮಿಂಚಿದರು. 76 ರನ್ ನೀಡಿ 4 ವಿಕೆಟ್ ಪಡೆದ ಶಮಿ, ಟೀಮ್ ಇಂಡಿಯಾದ ಸಕ್ಸಸ್​ಫುಲ್ ಬೌಲರ್ ಎನಿಸಿದ್ರು.

ಮಹತ್ವದ ಮ್ಯಾಚ್ ಸೇವಿಂಗ್​ಗೆ ಕಾರಣ ಟೀಮ್ ಇಂಡಿಯಾದ ಫೀಲ್ಡರ್ಸ್. ಮೈದಾನದಲ್ಲಿ ಅದ್ಭುತ ಕ್ಯಾಚ್ ಪಡೆದ ಕೊಹ್ಲಿ ಬಾಯ್ಸ್​, ಎದುರಾಳಿಗಳ ಮೇಲೆ ಒತ್ತಡ ಹೇರಿದ್ರು. ಸ್ಲಿಪ್​​ನಲ್ಲಿ ನಿಂತಿದ್ದ ಹಿಟ್​​ಮ್ಯಾನ್ ರೋಹಿತ್ ಶರ್ಮಾ, ಥರ್ಡ್​ ಸ್ಲಿಪ್​​ನಲ್ಲಿದ್ದ ಕ್ಯಾಪ್ಟನ್ ಕೊಹ್ಲಿಯ ಅದ್ಬುತ ಕ್ಯಾಚ್​ಗಳ ಜೊತೆಗೆ ರವೀಂದ್ರ ಜಡೇಜಾ, ವೈಸ್​ ಕ್ಯಾಪ್ಟನ್ ರಹಾನೆ ಪಾತ್ರ ದೊಡ್ಡದಿದೆ. ಇಷ್ಟೇ ಅಲ್ಲ. ರಾಸ್​ ಟೇಲರ್ ವಿಕೆಟ್ ಬೇಟೆಗೆ ಪ್ರಮುಖ ಕಾರಣ ಶುಭ್​​ಮನ್​​ ಗಿಲ್​ರ ಅದ್ಬುತ ಫೀಲ್ಡಿಂಗ್ ಅನ್ನೋದು ಮರೆಯುವಂತಿಲ್ಲ.

ಒಟ್ಟಿನಲ್ಲಿ ಮಳೆಯಿಂದ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದು ನಿಜ. ಆದ್ರೆ ಈ ಟಾಪ್ ಫೈವ್ ಇಂಟ್ರಸ್ಟಿಂಗ್ ಸ್ಟೋರಿಗಳು, ಎಲ್ಲರ ಸದ್ದು ಮಾಡಿದ್ದಂತೂ ಸುಳ್ಳಲ್ಲ.

The post ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಫ್ಯಾನ್ಸ್​ ಗಮನ ಸೆಳೆದ 5 ಅಂಶಗಳು appeared first on News First Kannada.

Source: newsfirstlive.com

Source link