ಬೆಂಗಳೂರು: ಉದ್ಯಮಿ ಪುತ್ರನ ಬಂಧನ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಲಭ್ಯವಾಗಿದ್ದು, ಖಾಸಗಿ ಹೋಟೆಲ್ ಬಳಿ ಗಲಾಟೆ ಮಾಡಿದ್ದು, ಇಬ್ಬರಲ್ಲ ಮೂವರು ಎಂಬ ಮಾಹಿತಿ ಪೊಲೀಸ್ ವಿಚಾರಣೆ ವೇಳೆ ಲಭ್ಯವಾಗಿದೆ. ಈಗಾಗಲೇ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಶ್ರೀಕಿ, ವಿಷ್ಣುಭಟ್ ಜೊತೆಗೆ ಅಭಯ್ ಕೂಡ ಇದ್ದನಂತೆ. ಆರೋಪಿ ವಿಷ್ಣುಭಟ್ ಹತ್ತಿರದ ಸಂಬಂಧಿಯಾಗಿರೋ ಅಭಯ್, ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೂ ಸ್ನೇಹಿತ ಎನ್ನಲಾಗಿದೆ.
ವಿಷ್ಣುಭಟ್ ಖಾಸಗಿ ಹೋಟೆಲ್ ಬಳಿ ಬರುವ ಮೊದಲು ಅಭಯ್ ಅಲ್ಲಿಯೇ ಇದ್ದನಂತೆ. ಶ್ರೀಕಿಯನ್ನು ಖಾಸಗಿ ಹೋಟೆಲ್ನಲ್ಲಿ ಹಲವು ಭಾರಿ ಭೇಟಿಯಾಗಿದ್ದನಂತೆ. ಅಭಯ್ ಮತ್ತು ಶ್ರೀಕಿ ಹೋಟೆಲ್ನಲ್ಲಿ ಹತ್ತಾರು ಬಾರಿ ಪಾರ್ಟಿ ಮಾಡಿದ್ದಾರೆ. ಗಲಾಟೆಯ ದಿನ ಕೂಡ ಅಭಯ್ ಖಾಸಗಿ ಹೋಟೆಲ್ನಲ್ಲೇ ಇದ್ದು, ಸಂಬಂಧಿ ವಿಷ್ಣುಭಟ್ಗೆ ಕರೆ ಮಾಡಿ ಹೋಟೆಲ್ ಬಳಿ ಬರಲು ಹೇಳಿದ್ದ ಎನ್ನಲಾಗಿದೆ. ಅಲ್ಲದೇ ಬರುವಾಗ ಮಾದಕ ವಸ್ತು ತರುವಂತೆ ಸೂಚಿಸಿದ್ದಂತೆ.
ಅಭಯ್ ಫೋನ್ ಬಂದ ಬೆನ್ನಲ್ಲೆ ನೈಜೀರಿಯನ್ ಪ್ರಜೆ ಸಂಪರ್ಕ ಮಾಡಿದ್ದ ವಿಷ್ಣು, ನೈಜೀರಿಯನ್ ಪ್ರಜೆಯ ಜೊತೆ 15 ಮಾದಕ ನಶೆಯ ಟ್ಯಾಬ್ಲೆಟ್ ಪಡೆದಿದ್ದನಂತೆ. ಅದರಲ್ಲಿ ವಿಷ್ಣು ನಾಲ್ಕು ಟ್ಯಾಬ್ಲೆಟ್ ಸೇವನೆ ಮಾಡಿ ನಶೆಯಲ್ಲಿ ತೇಲಾಡಿದ್ದ. ಅದೇ ನಶೆಯಲ್ಲಿ ಖಾಸಗಿ ಹೋಟೆಲ್ಗೆ ಹೋಗಿ ಗಲಾಟೆ ಮಾಡಿದ್ದ. ನೇರವಾಗಿ ಶ್ರೀಕಿ ಮತ್ತು ಸಂಬಂಧಿ ಅಭಯ್ ರೂಮ್ ತಲುಪಿದ್ದ ಕಾರಣ ಯಾವುದೇ ನಿಯಮಗಳನ್ನು ಮುಗಿಸದೆ ಒಳ ಹೋಗಿದ್ದನ್ನು ಹೋಟಲ್ ಸಿಬ್ಬಂದಿ ಪ್ರಶ್ನೆ ಮಾಡಿದಕ್ಕೆ ಅವರ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ.
ಘಟನೆ ನಡೆದ ಕೂಡಲೇ ಹೋಟೆಲ್ ಸಿಬ್ಬಂದಿ ವಿಷ್ಣುಭಟ್ಗೆ ಮಾಹಿತಿ ನೀಡಿದ್ದರು. ಪೊಲೀಸ್ರಿಗೆ ಮಾಹಿತಿ ಗೊತ್ತಾಯಿತು ಎಂದಾಗ ತಕ್ಷಣ ಅಭಯ್ ಸ್ಥಳದಿಂದ ಎಸ್ಕೇಪ್ ಆಗಿನಂತೆ. ಪೊಲೀಸರ ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿರೋ ಹ್ಯಾಕರ್ ಶ್ರೀಕಿ ಜೊತೆ ಇದ್ದ ಕಾರಣ ತಾನು ಎಲ್ಲಿ ಪೊಲೀಸರಿಗೆ ಸಿಕ್ಕಿ ಬೀಳುತ್ತೇನೆ ಎನ್ನೋ ಭಯದಲ್ಲಿ ಅಭಯ್ ಎಸ್ಕೇಪ್ ಆಗಿದ್ದ ಎನ್ನಲಾಗಿದೆ. ಈ ಅಭಯ್ ಯಾರು..? ಆತನಿಗೂ ಶ್ರೀಕಿಗೂ ಇರೋ ಸಂಬಂಧವೇನು..? ಎಸ್ಕೇಪ್ ಆಗಿರುವ ಅಭಯ್ ಶ್ರೀಕಿಯ ರೂಮ್ನಲ್ಲಿ ಏನು ಮಾಡುತ್ತಿದ್ದ..? ನಾಲ್ಕು ಲ್ಯಾಪ್ಟ್ಯಾಪ್ ಇಟ್ಟುಕೊಂಡು ಶ್ರೀಕಿ ಆ ರೂಮ್ನಲ್ಲಿ ಏನು ಮಾಡುತ್ತಿದ್ದ..? ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯ ವಿಷ್ಣಭಟ್ನನ್ನು ಪೊಲೀಸ್ ಕಸ್ಟಡಿಗೆ ಪಡೆದಿರೋ ಜೀವನ್ ಭೀಮಾನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.