ವಿಷ್ಣು ಪ್ರಿಯ, ಅತ್ಯಂತ ಮಹತ್ವವಿರುವ ಉತ್ಪನ್ನ ಏಕಾದಶಿ ಕಥೆ ಏನು? ಇಲ್ಲಿದೆ ಉತ್ಪನ್ನ ಏಕಾದಶಿ ಶುಭ ಮುಹೂರ್ತ ಮತ್ತು ಪೂಜಾ ವಿಧಾನ | Utpanna Ekadashi 2021 know when is utpanna Ekadashi and interesting story behind this day

ವಿಷ್ಣು ಪ್ರಿಯ, ಅತ್ಯಂತ ಮಹತ್ವವಿರುವ ಉತ್ಪನ್ನ ಏಕಾದಶಿ ಕಥೆ ಏನು? ಇಲ್ಲಿದೆ ಉತ್ಪನ್ನ ಏಕಾದಶಿ ಶುಭ ಮುಹೂರ್ತ ಮತ್ತು ಪೂಜಾ ವಿಧಾನ

ವಿಷ್ಣು

ಹಿಂದೂ ಕ್ಯಾಲೆಂಡರ್ ಪ್ರಕಾರ, ಒಂದು ತಿಂಗಳಲ್ಲಿ ಎರಡು ಏಕಾದಶಿ ಉಪವಾಸಗಳಿವೆ. ಒಂದು ಶುಕ್ಲ ಪಕ್ಷದಲ್ಲಿ ಮತ್ತು ಇನ್ನೊಂದು ಕೃಷ್ಣ ಪಕ್ಷದಲ್ಲಿ. ಕಾರ್ತಿಕ ಪೂರ್ಣಿಮೆಯ ನಂತರ ಕೃಷ್ಣ ಪಕ್ಷದಲ್ಲಿ ಬರುವ ಏಕಾದಶಿಯಂದು ಉತ್ಪನ್ನ ಏಕಾದಶಿಯ ಉಪವಾಸವನ್ನು ಆಚರಿಸಲಾಗುತ್ತೆ. ಉತ್ಪನ್ನ ಏಕಾದಶಿ ಪ್ರಮುಖ ಏಕಾದಶಿಗಳಲ್ಲಿ ಒಂದಾಗಿದೆ. ವಾರ್ಷಿಕ ಉಪವಾಸವನ್ನು ಆಚರಿಸಲು ಪ್ರತಿಜ್ಞೆ ಮಾಡುವ ಭಕ್ತರು ಏಕಾದಶಿ ಉಪವಾಸವನ್ನು ಉತ್ಪನ್ನ ಏಕಾದಶಿಯಿಂದ ಪ್ರಾರಂಭಿಸುತ್ತಾರೆ. ಈ ವರ್ಷ ಉತ್ಪನ್ನ ಏಕಾದಶಿಯು ಮಂಗಳವಾರ, ನವೆಂಬರ್ 30, 2021 ರಂದಿದೆ.

ಉತ್ಪನ್ನ ಏಕಾದಶಿ 2021 ದಿನಾಂಕ
ಉತ್ಪನ್ನ ಏಕಾದಶಿ ಆರಂಭ – 30 ನವೆಂಬರ್ 2021, ಮಂಗಳವಾರ 04:13 ಬೆಳಗ್ಗೆ
ಉತ್ಪನ ಏಕಾದಶಿ ಮುಕ್ತಾಯ – 01 ಡಿಸೆಂಬರ್ 2021, ಬುಧವಾರ ಮಧ್ಯರಾತ್ರಿ 02:13 ಕ್ಕೆ

ಉತ್ಪನ್ನ ಏಕಾದಶಿ ಮಹತ್ವ
ಏಕಾದಶಿ ಒಂದು ದೇವಿಯಾಗಿದ್ದು ಈಕೆ ಭಗವಾನ್ ವಿಷ್ಣುವಿನಿಂದ ಜನಿಸಿದಳು. ಆದ್ದರಿಂದ ಈ ಏಕಾದಶಿಯನ್ನು ಉತ್ಪನ್ನ ಏಕಾದಶಿಯೆಂದು ಕರೆಯಲಾಗುತ್ತೆ. ಪದ್ಮಪುರಾಣದ ಪ್ರಕಾರ, ಈ ಏಕಾದಶಿಯಂದು ಉಪವಾಸ ಮಾಡುವುದರ ಮೂಲಕ ಎಲ್ಲಾ ಏಕಾದಶಿ ಉಪವಾಸದ ಫಲವನ್ನು ಮತ್ತು ಮೋಕ್ಷವನ್ನು ಪಡೆಯಬಹುದು ಎನ್ನಲಾಗಿದೆ. ಈ ಉತ್ಪನ್ನ ಏಕಾದಶಿ ಉಪವಾಸ ಮಾಡುವುದರಿಂದ ವಿಷ್ಣುವಿನ ಅಪಾರ ಆಶೀರ್ವಾದ ಮತ್ತು ಎಲ್ಲಾ ತೀರ್ಥಯಾತ್ರೆಗಳ ದರ್ಶನಕ್ಕೆ ಸಮನಾದ ಫಲ ಸಿಗುತ್ತದೆ. ಈ ಸಮಯದಲ್ಲಿ ಮಾಡಿದ ದಾನವು ಜನ್ಮ ಜನ್ಮಗಳ ಫಲವನ್ನು ನೀಡುತ್ತದೆ. ಹಾಗೂ ಈ ಉಪವಾಸದ ವೇಳೆ ಮಾಡುವ ಜಪ, ತಪಸ್ಸು ಮತ್ತು ದಾನವು ಅಶ್ವಮೇಧ ಯಜ್ಞಕ್ಕೆ ಸಮವಾಗುವ ಫಲವನ್ನು ನೀಡುತ್ತದೆ ಎಂಬ ನಂಬಿಕೆ ಇದೆ.

ಉತ್ಪನ್ನ ಏಕಾದಶಿ ಕಥೆ
ಸತ್ಯಯುಗದಲ್ಲಿ ಮುರ ಎಂಬ ರಾಕ್ಷಸನಿದ್ದ. ಅವನಿಗೆ ತನ್ನ ಶಕ್ತಿಗಳ ಬಗ್ಗೆ ಅಪಾರ ಹೆಮ್ಮೆ ಇತ್ತು. ಸ್ವಂತವಾಗಿ ಅವನು ಸ್ವರ್ಗೀಯ ಜಗತ್ತನ್ನು ವಶಪಡಿಸಿಕೊಂಡಿದ್ದ. ಅಂತಹ ಪರಿಸ್ಥಿತಿಯಲ್ಲಿ ಎಲ್ಲಾ ದೇವತೆಗಳು ಭಗವಾನ್ ವಿಷ್ಣು ಬಳಿ ಬಂದು ತಮ್ಮ ಸ್ವರ್ಗ ಲೋಕವನ್ನು ಮರಳಿ ಪಡೆಯುವಂತೆ ಬೇಡಿಕೊಂಡರು. ಬಳಿಕ ವಿಷ್ಣು ಮತ್ತು ದೈತ್ಯ ಮುರನ ನಡುವೆ ಯುದ್ಧ ಆರಂಭವಾಯ್ತು. ಈ ಯುದ್ಧ ಹಲವು ವರ್ಷಗಳ ಕಾಲ ನಡೆಯಿತು. ವಿಷ್ಣು ರಾಕ್ಷಸನೊಂದಿಗೆ ಹೋರಾಡುವಾಗ ದಣಿದನು, ಹೀಗಾಗಿ ಬದ್ರಿಕಾಶ್ರಮದ ಗುಹೆಯೊಂದರಲ್ಲಿ ವಿಶ್ರಾಂತಿ ಪಡೆಯಲು ಹೋಗುತ್ತಾನೆ. ಆಗ ಮುರ ರಾಕ್ಷಸನೂ ವಿಷ್ಣುವನ್ನು ಬೆನ್ನಟ್ಟಿಕೊಂಡು ಗುಹೆ ಬಳಿ ಬರುತ್ತಾನೆ.

ಗುಹೆಯಲ್ಲಿ ವಿಷ್ಣು ಮಲಗಿರುತ್ತಾನೆ. ಆಗ ವಿಷ್ಣುವನ್ನು ರಾಕ್ಷಸ ಕೊಲ್ಲಲು ಆಯುಧವನ್ನು ತೆಗೆದುಕೊಳ್ಳವಾಗ ತಕ್ಷಣ ವಿಷ್ಣುವಿನ ದೇಹದಿಂದ ದೇವತೆ ಕಾಣಿಸಿಕೊಳ್ಳುತ್ತಾಳೆ. ಆಕೆ ರಾಕ್ಷಸನ ಸಂಹಾರ ಮಾಡುತ್ತಾಳೆ. ಆಗ ಭಗವಾನ್ ವಿಷ್ಣು ದೇವಿಯ ಕೆಲಸದಿಂದ ಪ್ರಸನ್ನನಾಗಿ ನೀವು ಕಾರ್ತಿಕ ಮಾಸದ ಕೃಷ್ಣ ಪಕ್ಷದ ಏಕಾದಶಿಯಂದು ಕಾಣಿಸಿಕೊಂಡಿದ್ದೀರಿ ಹೀಗಾಗಿ ಇಂದಿನಿಂದ ನಿಮ್ಮ ಹೆಸರು ಏಕಾದಶಿ ಎಂದು ಹೇಳುತ್ತಾನೆ. ನೀವು ಎಲ್ಲಾ ಉಪವಾಸಗಳಲ್ಲಿ ಅತ್ಯಂತ ಮುಖ್ಯವಾಗಿರುತ್ತೀರಿ. ಇಂದಿನಿಂದ ಪ್ರತಿ ಏಕಾದಶಿಯಂದು ನೀವು ನನ್ನೊಂದಿಗೆ ಪೂಜಿಸಲ್ಪಡುತ್ತೀರಿ ಎಂದು ಹೇಳುತ್ತಾನೆ. ಏಕಾದಶಿಯನ್ನು ಯಾರು ಉಪವಾಸ ಮಾಡಿ ಪೂಜಿಸುತ್ತಾರೋ ಅವರ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ ಎಂದು ವಿಷ್ಣು ಹೇಳುತ್ತಾನೆ.

ಉತ್ಪನ್ನ ಏಕಾದಶಿ ಆರಾಧನಾ ವಿಧಾನ
ಈ ದಿನ ಭಕ್ತರು ಮುಂಜಾನೆ ಬೇಗ ಎದ್ದು ಶುಭ್ರವಾದ ವಸ್ತ್ರಗಳನ್ನು ಧರಿಸಿ, ಧೂಪ, ದೀಪ, ಹೂವು, ಶ್ರೀಗಂಧ, ಹೂ, ತುಳಸಿ ಮುಂತಾದವುಗಳಿಂದ ವಿಷ್ಣುವನ್ನು ಪೂಜಿಸುತ್ತಾರೆ. ಭಗವಾನ್ ವಿಷ್ಣುವನ್ನು ಮೆಚ್ಚಿಸಲು ಅವರು ವಿಶೇಷ ನೈವೇದ್ಯವನ್ನು ಸಹ ತಯಾರಿಸುತ್ತಾರೆ. ಪ್ರತಿ ಇತರ ಪೂಜೆಯಂತೆ, ಆಚರಣೆಗಳನ್ನು ನಡೆಸಲಾಗುತ್ತದೆ, ಮತ್ತು ಭಕ್ತರು ನಿರ್ದಿಷ್ಟ ವ್ರತ ಕಥೆಗಳನ್ನು ಪಠಿಸುತ್ತಾರೆ ಮತ್ತು ಪಾರಣದಲ್ಲಿ ಉಪವಾಸವನ್ನು ಮುರಿಯುತ್ತಾರೆ. ಈ ರೀತಿ ಮಾಡುವುದರಿಂದ ಎಲ್ಲಾ ದೋಷಗಳು ನಾಶವಾಗುತ್ತವೆ ಮತ್ತು ಬಯಸಿದ ವರ ಸಿಗುತ್ತಾನೆ.

ಇದನ್ನೂ ಓದಿ: ಕ್ಷತ್ರಿಯ ಕುಲದ ನಾಶಕ್ಕಾಗಿ ಪರಶು ಹಿಡಿದ ಭಗವಾನ್​ ವಿಷ್ಣುವಿನ ಆರನೇ ಅವತಾರ

TV9 Kannada

Leave a comment

Your email address will not be published. Required fields are marked *