ಧಾರವಾಡ; ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದ್ದು, ವೀಕೆಂಡ್ ಕರ್ಫ್ಯೂ ಮುಂದುವರೆಸಬೇಕೋ ಅಥವಾ ಬೇಡವೋ ಎಂಬುದನ್ನ ಶುಕ್ರವಾರ ನಿರ್ಧಾರ ಮಾಡುವುದಾಗಿ ಸರ್ಕಾರ ತಿಳಿಸಿದೆ. ಆದ್ರೆ ಈ ಮಧ್ಯೆ ವೀಕೆಂಡ್ ಕರ್ಫ್ಯೂ ಕೈ ಬಿಡುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಲಹೆ ನೀಡಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಅಗತ್ಯವಿಲ್ಲ. ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ನೀಡಿದ್ದೇವೆ. ಹೀಗಾಗಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಿ. ಸಿಎಂ ಬೊಮ್ಮಾಯಿಗೆ ವೈಯಕ್ತಿಕವಾಗಿ ಸಲಹೆ ನೀಡುತ್ತೇನೆ ಎಂದು ವೀಕೆಂಡ್ ಕರ್ಫ್ಯೂ ಕೈಬಿಡುವಂತೆ ಪ್ರಹ್ಲಾದ್ ಜೋಶಿ ಸಲಹೆ ನೀಡಿದ್ದಾರೆ.
ಕರ್ಫ್ಯೂ ಬದಲು ಸರ್ಕಾರ ಪರ್ಯಾಯ ದಾರಿ ಹುಡುಕಬೇಕು..
ರಾಜ್ಯದಲ್ಲಿನ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಬಗ್ಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಹೆಚ್ಡಿಕೆ, ಈ ರೀತಿಯ ಕರ್ಫ್ಯೂ ಜಾರಿ ಮಾಡುವುದರಿಂದ ಜನರ ಜೀವನ ನಿರ್ವಹಣೆಗೆ ಕಷ್ಟವಾಗ್ತಿದೆ. ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂನಿಂದ ಅನಾನುಕೂಲವೇ ಜಾಸ್ತಿ. ಇದರಿಂದಾಗಿ ರೈತರಿಗೆ ಬೆಳೆದ ಬೆಳೆ ಮಾರಾಟ ಮಾಡಲು ಅವಕಾಶ ಸಿಗ್ತಿಲ್ಲ. ಕರ್ಫ್ಯೂ ಬದಲಾಗಿ ಸರ್ಕಾರ ಪರ್ಯಾಯ ದಾರಿ ಹುಡುಕಬೇಕು. ಮಾಸ್ಕ್ ಧರಿಸಿ, ಜನರು ಅವರವರ ಕೆಲಸ ಮುಂದುವರೆಸಲು ಅನುವು ಮಾಡಿಕೊಡಬೇಕು ಅಂತಾ ಹೆಚ್ಡಿಕೆ ತಿಳಿಸಿದ್ದಾರೆ.