ಬೆಂಗಳೂರು: ಸರ್ಕಾರ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು, ಸಿಎಂ ಸುದೀರ್ಘ ಚರ್ಚೆ ಮಾಡಿ ವೀಕೆಂಡ್ ಕರ್ಫ್ಯೂ ರದ್ದು ಮಾಡಿದ್ದಾರೆ. ತಜ್ಞರು, ಹಿರಿಯ ಅಧಿಕಾರಿಗಳು, ಸಚಿವರು ಎಲ್ಲರ ಸಲಹೆ ಮೇರೆಗೆ ಈ ತೀರ್ಮಾನ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ದೊಡ್ಡ ಮಟ್ಟದಲ್ಲಿ ಕೇಸ್ ಗಳ ಸಂಖ್ಯೆ ಇನ್ನೂ ಹೆಚ್ಚಾಗುತ್ತಿದೆ. ಆದರೆ ಆಸ್ಪತ್ರೆಗೆ ಸೇರುವವರ ಸಂಖ್ಯೆ ಕಡಿಮೆ ಇದೆ. ಜನ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ಆಸ್ಪತ್ರೆ ಸೇರುವವರ ಸಂಖ್ಯೆ ಜಾಸ್ತಿ ಆದರೆ ಸರ್ಕಾರದ ಮುಂದೆ ಬೇರೆ ದಾರಿ ಇಲ್ಲ. ಪರಿಸ್ಥಿತಿ ಕೈಮೀರಿದ್ರೆ ಮತ್ತೆ ಕಠಿಣ ಕ್ರಮಗಳ ಎಚ್ಚರಿಕೆ ವಹಿಸಬೇಕು ಎಂದು ಸ್ಪಷ್ಟಪಡಿಸಿದರು. ಅದರಲ್ಲೂ ಜನವರಿ ಅಂತ್ಯ ಫೆಬ್ರವರಿ ಮೊದಲ ವಾರದಲ್ಲಿ ಕೇಸ್ ಜಾಸ್ತಿ ಆಗುತ್ತೆ. ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ಕೂಡ ಸ್ಪಷ್ಟನೆ ನೀಡಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರುವವರ ಪ್ರಮಾಣದ ಮೇಲೆ ನಿಂತ ರಾಜ್ಯ ಸರ್ಕಾರದ ನಿರ್ಧಾರ ನಿಂತಿದೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಸಂಪುಟ ಪುನರ್ ರಚನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಕೋವಿಡ್ ಮೂರನೇ ಅಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ರಾಜಕೀಯದ ಕಡೆ ಗಮನ ಹರಿಸಿಲ್ಲ. ಸಂಪುಟ ಪುನರ್ರಚನೆ, ಆಕಾಂಕ್ಷಿಗಳ ದೆಹಲಿ ಭೇಟಿ ಇತ್ಯಾದಿಗಳ ಬಗ್ಗೆ ನನಗೇನೂ ಗೊತ್ತಿಲ್ಲ. ಮಾಹಿತಿ ಇದ್ರೆ ಮಾಧ್ಯಮಗಳೇ ಹೇಳಬೇಕು ಎಂದರು.
ಜನರಿಗೆ ಬಲವಂತ ಕೊರೊನಾ ಟೆಸ್ಟ್ ಮಾಡ್ತಿರೋ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕೊರೊನಾ ಟೆಸ್ಟ್ ಹೆಚ್ಚಳ ಮಾಡೋ ಬಗ್ಗೆICMR ಹೇಳಿದೆ. ಈ ಬಗ್ಗೆ ನಿನ್ನೆ ಕೂಡ ಚರ್ಚೆ ಆಗಿದೆ. ಬಲವಂತವಾಗಿ ಟೆಸ್ಟ್ ಮಾಡಬಾರದು. ಸೋಂಕಿನ ಲಕ್ಷಣಗಳು ಇರೋರಿಗೆ ಮಾತ್ರ ಟೆಸ್ಟ್ ಮಾಡಬೇಕು ತಿಳಿಸಿದ್ದೇವೆ. ಸಭೆ ಸಮಾರಂಭಗಳನ್ನು ಅವಶ್ಯಕತೆಗೆ ಅನುಸಾರ ಮುಂದೂಡಿಕೆ ಮಾಡಿಕೊಳ್ಳಿ. ಅನಗತ್ಯವಾಗಿ ಟೆಸ್ಟ್ ಗಳನ್ನು ಮಾಡುವುದು ಬೇಡ. ರೋಗ ಲಕ್ಷಣಗಳು ಇದ್ದರೆ ಮಾತ್ರಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.