ನವದೆಹಲಿ: ಐಪಿಎಲ್ 14 ನೇ ಆವೃತ್ತಿಯಲ್ಲಿ ಡೆಲ್ಲಿ ತಂಡದ ಪರ ಆಡುತ್ತಿರುವ ಬಾಲರ್ ಅಮಿತ್‌ ಮಿಶ್ರಾ ಕುರಿತು ಇಂಟ್ರೆಸ್ಟಿಂಗ್ ವಿಚಾರವೊಂದನ್ನು ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹವಾಗ್ ಹಂಚಿಕೊಂಡಿದ್ದಾರೆ.

ಅಮಿತ್‌ ಮಿಶ್ರಾ ಮಂಗಳವಾರ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಡೆಲ್ಲಿ ತಂಡಕ್ಕೆ ಅಭೂತಪೂರ್ವ ಜಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದ ಬಳಿಕ ಮಾಧ್ಯಮವೊಂದಕ್ಕೆ ಮಾತನಾಡಿದ ಸೆಹವಾಗ್, ಅಮಿತ್ ಮಿಶ್ರಾ ಅವರ ವ್ಯಕ್ತಿತ್ವವನ್ನು ಬಾಯ್ತುಂಬ ಕೊಂಡಾಡಿದ್ರು. ‘ಅಮಿತ್ ಎಲ್ಲರ ಜೊತೆ ಸೌಜನ್ಯತೆ ಹಾಗೂ ಶಾಂತಿಯುತವಾಗಿ ಮಾತನಾಡುತ್ತಾನೆ. ಬಹುಬೇಗನೆ ಆತ ಎಲ್ಲರ ಜೊತೆ ಬೆರೆಯುತ್ತಾನೆ. ಪಂದ್ಯಗಳಲ್ಲಿ ಅವನ ಬಾಲ್‍ಗಳನ್ನು ದಂಡಿಸುತ್ತಿದ್ದರೆ ತಂಡದ ಇತರೆ ಆಟಗಾರರು ಮರುಕ ಪಡುತ್ತಾರೆ. ಆತ ವಿಕೆಟ್ ಪಡೆದಾಗ ಎಲ್ಲರೂ ಸಂಭ್ರಮಿಸುತ್ತಾರೆ ಎಂದು ಸೆಹ್ವಾಗ್ ಮಿಶ್ರಾ ಅವರ ವ್ಯಕ್ತಿತ್ವವನ್ನು ವರ್ಣಿಸಿದರು.

ಮಿಶ್ರಾ ಅವರ ಕುರಿತು ಕುತೂಹಲಕಾರಿ ಸಂಗತಿಯನ್ನು ಸೆಹವಾಗ್ ಹೇಳಿಕೊಂಡಿದ್ದಾರೆ. ಮಿಶ್ರಾ ಟಿ-20 ಪಂದ್ಯದಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್ ವಿಕೆಟ್ ಪಡೆದ ವೇಳೆ ‘ನಿನಗೆ ಏನು ಬೇಕು’ ಎಂದು ಸೆಹವಾಗ್ ಕೇಳಿದ್ದರಂತೆ. ಇದಕ್ಕೆ ಖುಷಿಯಿಂದ ಪ್ರತಿಕ್ರಿಯಿಸಿದ್ದ ಮಿಶ್ರಾ, ‘ವೀರೂ ಭಾಯ್ ನನ್ನ ಸಾಲರಿ ಹೈಕ್ ಮಾಡಿಸು’ ಎಂದು ಮುಗ್ದತೆ ಪ್ರದರ್ಶಿಸಿದ್ದರಂತೆ. ಈ ವಿಚಾರವನ್ನು ಮೆಲುಕು ಹಾಕಿರುವ ಸೆಹ್ವಾಗ್, ಸದ್ಯ ಅವನು ಬಯಸಿದ್ದಷ್ಟು ಹಣ ಪಡೆಯುತ್ತಿರಬಹುದೆಂದು ನನಗೆ ಅನ್ನಿಸುತ್ತಿದೆ. ಅದು ಎಷ್ಟರ ಮಟ್ಟಿಗೆಯಂದರೆ ಇನ್ನೊಂದು ಬಾರಿ ಆತ ಹ್ಯಾಟ್ರಿಕ್ ವಿಕೆಟ್ ಪಡೆದರೂ ಕೂಡ ಸಾಲರಿ ಹೆಚ್ಚು ಮಾಡುವಂತೆ ಕೇಳುವುದಿಲ್ಲ’ ಎಂದು ನಗುತ್ತಾ ಹೇಳಿದರು ಸೆಹ್ವಾಗ್.

ಇನ್ನು ಮಂಗಳವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಿರಿಯ ಸ್ಪಿನ್ನರ್‌ ಅಮಿತ್‌ ಮಿಶ್ರಾ , ನಾಲ್ಕು ಓವರ್‌ಗಳಲ್ಲಿ 24 ರನ್‌ ನೀಡಿ 4 ವಿಕೆಟ್‌ ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಕ್ರೀಡೆ – Udayavani – ಉದಯವಾಣಿ
Read More