ಬೆಂಗಳೂರು: 2021ನೇ ಶೈಕ್ಷಣಿಕ ವರ್ಷಕ್ಕೆ ವೃತ್ತಿಪರ ಕೋರ್ಸ್​​​ ಪ್ರವೇಶಕ್ಕೆ  ಸಿಇಟಿ ಅಂಕ ಮಾತ್ರ ಪರಿಗಣನೆ ಮಾಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್​ ನಾರಾಯಣ್ ತಿಳಿಸಿದ್ದಾರೆ.

ಶಿಕ್ಷಣ ಸಚಿವ ಸುರೇಶ್​ ಕುಮಾರ್ ಅವರ ಮನವಿಯ ಕುರಿತಂತೆ ಸಿಇಟಿ ಪರೀಕ್ಷೆ ವಿಚಾರದಲ್ಲಿ ಅಧಿಕಾರಿಗಳೊಂದಿಗೆ ಸಚಿವ ಅಶ್ವತ್ಥ್​ ನಾರಾಯಣ್ ಇಂದು ಸಭೆ ನಡೆಸಿ ಚರ್ಚೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವರು, ಸುರೇಶ್ ಕುಮಾರ್ ಅವರ ಸಲಹೆಯನ್ನು ಪರಿಗಣಿಸಿ ಚರ್ಚೆ ಮಾಡಿದ್ದೇವೆ. ಸಿಇಟಿ ರ್ಯಾಂಕ್ ಗೆ ಪಿಯುಸಿ ಅಂಕ‌ ಪರಿಗಣಿಸೋದು ಬೇಡ ಅಂತಾ ಸಭೆಯಲ್ಲಿ ಸಲಹೆ ಬಂದಿದೆ. ಎಲ್ಲಾ ಕೌನ್ಸಿಲ್ ಗಳಿಗೂ ಪತ್ರ ಬರೆದು ಈ ವಿಚಾರ ಗಮನಕ್ಕೆ ತರುತ್ತೇನೆ. ಪಿಯುಸಿ ಮಾರ್ಕ್ಸ್ ಈ ಬಾರಿ ಪರಿಗಣಿಸಲ್ಲ. ಕೇವಲ ಸಿಇಟಿ ರ್ಯಾಂಕ್ ಮಾತ್ರ ಪರಿಗಣಿಸ್ತೇವೆ ಎಂದು ಖಚಿತ ಪಡಿಸಿದರು.

ಆಗಸ್ಟ್​ 28, 29 ರಂದು ಪರೀಕ್ಷೆ…

ಪ್ರತಿವರ್ಷದಂತೆ ಈ ವರ್ಷವೂ ಪರೀಕ್ಷೆ ನಡೆಯಲಿದೆ. ಆಗಸ್ಟ್ 28 ಹಾಗೂ 29 ರಂದು ಪರೀಕ್ಷೆ ನಡೆಸಲಾಗುವುದು. ಪ್ರತಿ ವಿಷಯಕ್ಕೂ 60 ಅಂಕ ನಿಗದಿ ಮಾಡಲಾಗಿದೆ. ಜೂನ್ ೧೫ ರಿಂದ ಸಿಇಟಿ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ ಎಂದರು. ಸಿಇಟಿಯಲ್ಲಿ ನೀಟ್ ತರಹ ಕನಿಷ್ಠ ಅಂಕಗಳು ಪರಿಗಣಿಸಬಹುದಾ ಅಂತ ನಿರ್ಧಾರ ಮಾಡುತ್ತೇವೆ. ಸ್ಕ್ರೀನಿಂಗ್ ಮಾದರಿ ಪಾಲಿಸುವುದಕ್ಕೆ ಚರ್ಚೆ ಮಾಡ್ತಿದ್ದೇವೆ. ಆದರೆ ಈ ಬಗ್ಗೆ ಇನ್ನು ಅಂತಿಮ ನಿರ್ಧಾರ ಆಗಿಲ್ಲ ಎಂದು ವಿವರಿಸಿದರು.

ಈ ವರ್ಷ ಶೇ.100 ವಿದ್ಯಾರ್ಥಿಗಳು ಪಿಯುಸಿಯಲ್ಲಿ ಉತೀರ್ಣರಾಗುತ್ತಾರೆ. 6.5 ಲಕ್ಷ ವಿದ್ಯಾರ್ಥಿಗಳು ಪಿಯುಸಿಯಿಂದ ಡಿಗ್ರಿಗೆ ಬರ್ತಾರೆ, ಅಂದರೇ ಶೇ.30 ಹೆಚ್ಚಿನ ವಿದ್ಯಾರ್ಥಿಗಳು ಡಿಗ್ರಿ ಕಾಲೇಜಿಗೆ ಬರುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಸ್ ಔಟ್ ಆಗ್ತಿರೋದರಿಂದ ಪದವಿ ಕೋರ್ಸ್ ಹೇಗೆ ಹೆಚ್ಚಿಸಬೇಕು? ಹೇಗೆ ಇಲಾಖೆ ತಯಾರಾಗಬೇಕು ಅಂತಲೂ ಯೋಚನೆ ಮಾಡ್ತಿದ್ದೇವೆ.

ಸೈನ್ಸ್ ನವರಿಗೆಲ್ಲ ಯಾವುದೇ ಕೋರ್ಸ್​​ಗೂ ಸಿಇಟಿ ಮೂಲಕವೇ ಪರಿಗಣಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದಂತೆ ಉತ್ತಮ ನಿರ್ಣಯ ತೆಗೆದುಕೊಳ್ತೇವೆ. ಪದವಿ ವಿದ್ಯಾರ್ಥಿಗಳಿಗೆ ಎಲ್ಲ ಕ್ಯಾಲೆಂಡರ್ ಆಫ್ ಇವೆಂಟ್ಸ್ ಈಗಾಗಲೇ‌ ಮಾಡಿದ್ದೇವೆ. ಅನ್ ಲಾಕ್ ಆದ ತಕ್ಷಣ ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್ ಕೊಡುವುದೂ ಆಗಲಿದೆ. ಪದವಿ ವಿದ್ಯಾರ್ಥಿಗಳ ಸಮಸ್ಯೆ ವಿಚಾರದ ಬಗ್ಗೆ ಸವಿಸ್ತಾರವಾಗಿ ಮತ್ತೊಂದು ದಿನ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡ್ತೇವೆ. ಶಿಕ್ಷಣ ಸಂಸ್ಥೆಗಳನ್ನ ಹಣ ಗಳಿಸಲು ಮಾಡುವುದಲ್ಲ. ಲಾಭಕ್ಕಾಗಿ ಅಲ್ಲ, ಸಮಾಜಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಬೇಕು. ಕಷ್ಟದ ಕಾಲದಲ್ಲಿ ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದರು.

The post ವೃತ್ತಿಪರ ಕೋರ್ಸ್ ಪ್ರವೇಶಕ್ಕೆ CET ಅಂಕ ಮಾತ್ರ ಪರಿಗಣನೆ- ಅಶ್ವತ್ಥ್​ ನಾರಾಯಣ್ ಘೋಷಣೆ appeared first on News First Kannada.

Source: newsfirstlive.com

Source link