ವೃದ್ದೆಯ ಚಿನ್ನದ ಸರ ದೋಚಿದ್ದ ಖದೀಮರು- ಮೂವರ ಬಂಧನ

ಶಿವಮೊಗ್ಗ: ವೃದ್ದೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಹಿಂಬದಿಯಿಂದ ಬೈಕ್‍ನಲ್ಲಿ ಬಂದ ಮೂವರು ಖದೀಮರು ಸುಮಾರು 25ಗ್ರಾಂ ತೂಕದ ಬಂಗಾರದ ಸರವನ್ನು ಅಪಹರಿಸಿ ಪರಾರಿಯಾಗಿದ್ದವರನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.

ಪವನ (19), ವಿಷ್ಣು (19) ಹಾಗೂ ಮಹೇಶ (19) ಬಂಧಿತ ಆರೋಪಿಗಳಾಗಿದ್ದಾರೆ. ಇದೇ ತಿಂಗಳ 19 ರಂದು ವೃದ್ದೆ ಲಕ್ಷ್ಮಮ್ಮ (85) ನಗರದ ಅಂಚೆ ಕಚೇರಿ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಹಿಂಬದಿಯಿಂದ ಬಂದ ಮೂವರು ಅಪರಿಚಿತ ಯುವಕರು ವೃದ್ದೆಯ ಬಂಗಾರದ ಸರವನ್ನು ಅಪಹರಿಸಿದ್ದರು. ಇದನ್ನೂ ಓದಿ: ಇದೇ ಬುಧವಾರದಿಂದ ಬಿಗ್‍ಬಾಸ್ ಪ್ರಾರಂಭ

ಈ ಬಗ್ಗೆ ವೃದ್ದೆ ಲಕ್ಷ್ಮಮ್ಮ ಪೇಪರ್ ಟೌನ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಒಂದೇ ದಿನದಲ್ಲಿ ಮೂವರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳ ವಿರುದ್ದ ಈ ಹಿಂದೆ ಪೇಪರ್ ಟೌನ್ ಠಾಣೆಯಲ್ಲಿ ಎರಡು ಕಳ್ಳತನ ಪ್ರಕರಣ ಹಾಗೂ ನ್ಯೂ ಟೌನ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು. ಬಂಧಿತರಿಂದ 4 ಲಕ್ಷದ 63 ಸಾವಿರ ರೂ ಮೌಲ್ಯದ 103 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ 2 ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

The post ವೃದ್ದೆಯ ಚಿನ್ನದ ಸರ ದೋಚಿದ್ದ ಖದೀಮರು- ಮೂವರ ಬಂಧನ appeared first on Public TV.

Source: publictv.in

Source link